ಸರಕಾರಿ ನೌಕರರ ಸಂಬಳ ಕಡಿತ, ವಲಸಿಗರಿಗೆ ಮತ್ತೊಂದು ಹಿನ್ನಡೆ

Update: 2016-09-27 03:09 GMT

ಸೌದಿ ಅರೇಬಿಯಾ, ಸೆ.27: ಸೌದಿ ಅರೇಬಿಯಾದ ಎರಡು ಪವಿತ್ರ ಮಸೀದಿಗಳ ಪಾಲಕರಾದ ದೊರೆ ಸಲ್ಮಾನ್ ಅವರು ಎಲ್ಲ ಸರಕಾರಿ ಉದ್ಯೋಗಿಗಳ ವೇತನವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಸ್ವತಃ ಸಲ್ಮಾನ್ ಅವರ ಮಗ ಉಪ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಯಾರಿಗೂ ಈ ಋಣಾತ್ಮಕ ಪರಿಣಾಮದಿಂದ ವಿನಾಯಿತಿ ಇಲ್ಲ.

ಈ ವೇತನನ ಕಡಿತವು ಅವರ ಕೆಲಸವನ್ನು ಹೊಂದಿಕೊಂಡಿದ್ದು, ಹೈಪ್ರೊಫೈಲ್ ವ್ಯಕ್ತಿಗಳಿಗೆ ಗರಿಷ್ಠ ಎಂದರೆ ಶೇಕಡ 20ರಷ್ಟು ವೇತನ ಕಡಿತ ಮಾಡಲಾಗಿದೆ. ಮೊಹರಂ 1438ರ ಮೊದಲ ದಿನದಿಂದ ಇದು ಜಾರಿಗೆ ಬರಲಿದೆ. ದೊರೆ ಸಲ್ಮಾನ್ ಆದೇಶದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

1. ದೊರೆ ಹಾಗೂ ಉಪ ದೊರೆ ಸೇರಿದಂತೆ ಸರಕಾರದ ಸಚಿವರ ವೇತನ ಶೇಕಡ 20 ಕಡಿತವಾಗಲಿದೆ.

2. ಶೌರಾ ಕೌನ್ಸಿಲ್‌ನ ಸದಸ್ಯರ ಮನೆಬಾಡಿಗೆ ಹಾಗೂ ಸಾರಿಗೆ ಭತ್ಯೆಗಳು ಶೇಕಡ 15ರಷ್ಟು ಕಡಿಮೆಯಾಗಲಿದೆ.

3. ಯಾವ ಸರಕಾರಿ ಉದ್ಯೋಗಿಗೂ ಅನಿಯಮಿತ ಮೊಬೈಲ್ ಸೌಲಭ್ಯ ಇರುವುದಿಲ್ಲ. ಮೊಬೈಲ್ ಬಿಲ್ 1,000 ಸೌದಿ ರಿಯಾಲ್‌ನಿಂದ ಹೆಚ್ಚಾದರೆ, ಹೆಚ್ಚುವರಿ ಹಣವನ್ನು ಸಿಬ್ಬಂದಿ ತನ್ನ ಜೇಬಿನಿಂದ ನೀಡಬೇಕಾಗುತ್ತದೆ.

4. ವರ್ಷಾಂತ್ಯದಲ್ಲಿ ಯಾವ ಉದ್ಯೋಗಿಗೂ ವೇತನ ಭಡ್ತಿ ಇಲ್ಲ. ಅಂತೆಯೇ ಗುತ್ತಿಗೆ ನವೀಕರಣ ವೇಳೆ ಹೆಚ್ಚುವರಿ ಗೌರವಧನ ಇರುವುದಿಲ್ಲ.

5. ಹೆಚ್ಚುವರಿ ಕೆಲಸ ಭತ್ಯೆ ಹಾಗೂ ಬೋನಸ್‌ಗೂ ಕತ್ತರಿ ಬೀಳಲಿದ್ದು, ಕ್ರಮವಾಗಿ ಮೂಲವೇತನದ ನಾಲ್ಕನೇ ಒಂದು ಭಾಗ ಹಾಗೂ ಅರ್ಧ ಭಾಗದಷ್ಟು ಕಡಿತಗೊಳ್ಳಲಿದೆ.

6. ಸರಕಾರಿ ನೌಕರರ ವಾರ್ಷಿಕ ರಜೆ ಇನ್ನು ಮುಂದೆ 30 ದಿನಗಳನ್ನು ಮೀರುವಂತಿಲ್ಲ. ಸಚಿವರ ವಾರ್ಷಿಕ ರಜೆಯನ್ನು ಕೂಡಾ 42 ರಿಂದ 36ಕ್ಕೆ ಕಡಿತವಾಗಿದೆ.

7. ರಜೆ ಅವಧಿಯಲ್ಲಿ ಉದ್ಯೋಗಿಗಳಿಗೆ ಸಾರಿಗೆ ಭತ್ಯೆ ಇರುವುದಿಲ್ಲ.

8. ಖಾಲಿ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವರೆಗೆ ತಡೆಹಿಡಿಯಲಾಗಿದೆ.

9. ಅನಗತ್ಯ ಹುದ್ದೆಗಳಲ್ಲಿರುವ ವಲಸಿಗರ ಗುತ್ತಿಗೆ ನವೀಕರಿಸದಿರಲು ಕೂಡಾ ನಿರ್ಧರಿಸಲಾಗಿದೆ. ಇಂಥ ಹುದ್ದೆಗಳಿಗೆ ಯಾವ ನೇಮಕಾತಿಯೂ ಇರುವುದಿಲ್ಲ.

10. ಈ ಮೇಲಿನ ಎಲ್ಲ ನಿರ್ಧಾರಗಳೂ ಸೇನೆ, ಭದ್ರತಾ ಪಡೆಗಳು, ಭದ್ರತಾ ಅಧಿಕಾರಿ ಹಾಗೂ ದೇಶದ ಸೇನೆ, ಭದ್ರತೆ, ಗುಪ್ತಚರ ಕಾರ್ಯಾಚರಣೆ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News