ಹೂಸ್ಟನ್ ದಾಳಿಕೋರ ಭಾರತೀಯ ಮೂಲದ ವಕೀಲ

Update: 2016-09-27 05:36 GMT

ವಾಷಿಂಗ್ಟನ್,ಸೆ.27 :ರವಿವಾರ ಬೆಳಗ್ಗೆ ಟೆಕ್ಸಾಸ್ ನಗರದಲ್ಲಿ ವಾಹನದಲ್ಲಿ ಸಾಗುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದ ಹೂಸ್ಟನ್ ನಾಗರಿಕನನ್ನು 46 ವರ್ಷದ ವಕೀಲ, ಭಾರತೀಯ ಮೂಲದ ನಥನ್ ದೇಸಾಯಿ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಗುಂಡಿಕ್ಕಿ ಸಾಯಿಸುವ ಸಂದರ್ಭದಲ್ಲಿ ಆತ ನಾಝಿ ಚಿಹ್ನೆಯಿದ್ದ ಹಳೆಯ ಮಿಲಿಟರಿ ಸಮವಸ್ತ್ರವೊಂದನ್ನು ಧರಿಸಿದ್ದನೆಂದು ತಿಳಿದು ಬಂದಿತ್ತು. ಆತನ ಬಳಿ ಎರಡು ಬಂದೂಕುಗಳು ಹಾಗೂ 2,600 ಸುತ್ತು ಮದ್ದು ಗುಂಡುಗಳಿದ್ದುದು  ಪತ್ತೆಯಾಗಿದೆ.

ಸುಮಾರು 20 ನಿಮಿಷಗಳ ಕಾಲ ನಡೆದ ಈ ಗುಂಡಿನ ದಾಳಿಯಲ್ಲಿ ಒಂಬತ್ತು ಜನ ಗಾಯಗೊಂಡಿದ್ದರು. ಈ ದಾಳಿಯ ಹಿಂದಿನ ಕಾರಣವೇನೆಂದು ಇನ್ನಷ್ಟೇ ತಿಳಿಯಬೇಕಿದೆ.

ಸ್ಥಳೀಯ ಪತ್ರಿಕೆಯೊಂದರ ವರದಿಯಲ್ಲಿ ಆತನ ತಂದೆ ಪ್ರಕಾಶ್ ದೇಸಾಯಿಯ ಹೇಳಿಕೆ ಪ್ರಕಟವಾಗಿದ್ದು ಅವರ ಪ್ರಕಾರ ಅವರ ಪುತ್ರ ಕಳೆದ ಹಲವು ತಿಂಗಳುಗಳಿಂದೀಚೆಗೆ ನೌಕರಿ ಸಂಬಂಧಿತ ಸಮಸ್ಯೆಯಿಂದ ಅಸಂತುಷ್ಟಗೊಂಡಿದ್ದ ಎಂದು ತಿಳಿದು ಬಂದಿದೆ.

ಈ ಗುಂಡಿನ ದಾಳಿಯಲ್ಲಿ ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಸಾಯಿಯ ಕುಟುಂಬ ವರ್ಗ, ಸ್ನೇಹಿತರು ಹಾಗೂ ಒಡನಾಡಿಗಳನ್ನು ತನಿಖಾ ತಂಡ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News