ಕಾವೇರಿಗಾಗಿ ದೇವೇಗೌಡರಿಂದ ಉಪವಾಸ ಸತ್ಯಾಗ್ರಹ
ಬೆಂಗಳೂರು, ಅ.1: ಕಾವೇರಿ ನೀರು ಹಂಚಿಕೆ ಬಗ್ಗೆ ಸುಪ್ರೀಂ ತೀರ್ಪು ವಿರೋಧಿಸಿ, ಪ್ರಧಾನಿಯವರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ ದೇವೇಗೌಡ ಶನಿವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೆಳಗ್ಗೆ 7ಕ್ಕೆ ಕಾರಂಜಿ ಆಂಜನೇಯ ಸ್ವಾಮಿ ಆ ನಂತರ ಕೋಟೆ ವೆಂಕಟರಮಣ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಧಾನಸೌಧ ಬಳಿಯ ಗಾಂಧೀಜಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಆಗಿರುವ ನಿಣ೯ಯಗಳನ್ನು ಮಾದ್ಯಮಗಳಿಂದ ತಿಳಿದಿದ್ದೇನೆ. ಕಾವೇರಿ ಜಲವಿವಾದದ ವಿಚಾರದಲ್ಲಿ ಕೇಂದ್ರ ಸರಕಾರದ ಜವಾಬ್ದಾರಿ ಬಹಳ ಮುಖ್ಯ ಇದೆ. ಈ ಬಗ್ಗೆ ಪ್ರಧಾನಿ ಮೋದಿ ನಿನ್ನೆ ಚಚೆ೯ ನಡೆಸಿದ ವಿಷಯ ಗೊತ್ತಾಗಿದೆ. ನಾನು ಯಾರನ್ನೂ ದೂರಲು ಹೋಗುವುದಿಲ್ಲ ಎಂದರು.
ನಮಗೆ ತಮಿಳರಿಗೆ ಅನ್ಯಾಯ ಮಾಡುವ ಉದ್ದೇಶವಿಲ್ಲ. ಆದರೆ ನಮ್ಮಲ್ಲಿ ಕುಡಿಯಲು ನೀರಿಲ್ಲ. ನಮಗೆ ಕುಡಿಯೋಕೆ ನೀರಿಲ್ಲದಿದ್ದರೂ ಚಿಂತೆಯಿಲ್ಲ. ನೀರು ಬಿಟ್ಟುಬಿಡೋಣ. ಅವರು ಹೇಳಿದ್ದೇ ಕೇಳೋಣ. ಆದರೆ ಎರಡು ದಿನ ತಜ್ಞರ ತಂಡ ಕಳುಹಿಸಿ. ರಾಜ್ಯದ ವಾಸ್ತವತೆ ತಿಳಿದುಕೊಳ್ಳಬೇಕು. ತಮಿಳುನಾಡಿನ ಸ್ಥಿತಿ ಏನಿದೆ ಅನ್ನೋದು ತಿಳಿದುಕೊಳ್ಳಲಿ ಎಂದು ದೇವೇಗೌಡರು ಹೇಳಿದರು.
4 ಗಂಟೆಯೊಳಗೆ ಕಾವೇರಿ ನಿವ೯ಹಣಾ ಮಂಡಳಿ ಸದಸ್ಯರ ವಿವರ ಸಲ್ಲಿಸಲು ಕೋಟ್೯ ಸೂಚಿಸಿದೆ. ಪಾಲಿ೯ಮೆಂಟ್ ನಲ್ಲೂ ಈ ಬಗ್ಗೆ ನಾನು ಹೋರಾಟ ಮಾಡಿದ್ದೇನೆ. ಸುಪ್ರೀಂ ಕೋರ್ಟ್ ಆದೇಶ ರಾಜ್ಯದ ಪಾಲಿಗೆ ಮರಣ ಶಾಸನವಾಗಿದೆ. ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸುಧಾರಿಸಲಿ ಎಂದು ಪ್ರಾಥಿ೯ಸುತ್ತೇನೆ. ರಾಜ್ಯದ ಜನ ರಲ್ಲಿ ತಾಳ್ಮೆಯಿಂದಿರಲು ವಿನಂತಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭ ದೇವೇಗೌಡರಿಗೆ ವಿಧಾನ ಪರಿಷತ್ ಸದಸ್ಯ ಶರವಣ, ಜೆಡಿಎಸ್ ಶಾಸಕ ವೈಎಸ್ವಿ ದತ್ತ ಮತ್ತಿತರರು ಸಾಥ್ ನೀಡಿದರು.