ಬೆಂಗಳೂರಿನ ವಿಜ್ಞಾನಿ, ಪತ್ನಿ ಸೆರೆ

Update: 2016-10-04 06:01 GMT

ಹೊಸದಿಲ್ಲಿ, ಅ.4: ಬೆಂಗಳೂರಿನ ಒಬ್ಬ ವಿಜ್ಞಾನಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ ಪೊಲೀಸರು ಅವರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 231 ಕೋಟಿ ರೂ. ಮೌಲ್ಯ ಹೊಂದಿದ 231 ಕೆ.ಜಿ. ಅಂಪಟಮೈನ್ ಎಂಬ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಇದು ಮಾದಕ ವಸ್ತು ನಿಯಂತ್ರಣ ಮಂಡಳಿ ವಶಪಡಿಸಿಕೊಂಡ ಅತಿ ದೊಡ್ಡ ಪ್ರಮಾಣದ ಉದ್ದೀಪನ ಔಷಧಿಯಾಗಿದೆ.
ಮಾನಸಿಕ ಉದ್ದೀಪನ ಔಷಧವಾದ ಇದನ್ನು ಭಾರತೀಯ ಯುವಕರು ಬಳಸುತ್ತಿರುವುದು ಹೆಚ್ಚಿದೆ ಎಂದು ನಾರ್ಕೊಟಿಕ್ಸ್ ಕಂಟ್ರೋಲ್ ಬೋರ್ಡ್ ಹೇಳಿದೆ. ಇವುಗಳನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕನ್ ದೇಶಗಳಿಗೆ ಭಾರತದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಎನ್‌ಸಿಬಿ ಗುಪ್ತಚರ ವಿಭಾಗ ಮಾಹಿತಿ ಕಲೆಹಾಕಿತ್ತು. ಬೆಂಗಳೂರು, ಹೈದರಾಬಾದ್ ಸೇರಿದಂತೆ ಇಡೀ ದೇಶದಲ್ಲಿ ಅಂತಾರಾಜ್ಯ ದಂಧೆಯೂ ಬೆಳೆದಿತ್ತು ಎಂದು ಗುಪ್ತಚರ ವಿಭಾಗ ಮಾಹಿತಿ ಕಲೆಹಾಕಿತ್ತು.
ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟರಾಮರಾವ್ (37) ಎಂಬ ಸಂಶೋಧನಾ ವಿಜ್ಞಾನಿಯನ್ನು ಸೆಪ್ಟೆಂಬರ್ 30ರಂದು ಹೈದರಾಬಾದ್‌ನಲ್ಲಿ ಬಂಧಿಸಲಾಗಿತ್ತು. ಆತನ ಸಹಚರ ರವಿಶಂಕರ ರಾವ್ (22) ಎಂಬಾತನಿಂದ ಸುಮಾರು 221 ಕೆಜಿ ಮಾದಕವಸ್ತು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ಮತ್ತಷ್ಟು ಮಾದಕವಸ್ತು ಮನೆಯಲ್ಲಿದೆ ಎಂದು ವೆಂಕಟ್ ಹೇಳಿಕೊಂಡಿದ್ದ. ಬೆಂಗಳೂರಿಗೆ ಎನ್‌ಸಿಬಿ ತಂಡ ಆಗಮಿಸಿದಾಗ ಆತನ ಪತ್ನಿ ಪ್ರೀತಿ (35) ಎಂಬ ವ್ಯಕ್ತಿ 30 ಗ್ರಾಂ ಮಾದಕವಸ್ತು ಹೊಂದಿದ್ದಳು. ಇದನ್ನು ಸ್ಯಾಂಪಲ್ ಆಗಿ ಇರಿಸಿಕೊಂಡಿರಬೇಕು ಎಂಬ ಅನುಮಾನದಿಂದ ತನಿಖೆ ನಡೆಸಿದಾಗ 1.23 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಆಕೆ ನೀಡಿದ ಮಾಹಿತಿ ಮೇರೆಗೆ ಪ್ರಯೋಗಾಲಯವೊಂದರಿಂದ 10 ಕೆ.ಜಿ. ವಶಪಡಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News