ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಿರುವ ಕಾಂಗ್ರೆಸ್‌

Update: 2024-04-29 09:44 GMT

ಅಭಿಷೇಕ್‌ ಮನು ಸಿಂಘ್ವಿ (PTI)

ಹೊಸದಿಲ್ಲಿ: ಸೂರತ್‌ನಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಯನ್ನು ಚುನಾವಣೆ ನಡೆಯುವ ಎರಡು ವಾರಗಳಿಗೆ ಮುನ್ನವೇ ವಿಜೇತರನ್ನಾಗಿ ಘೋಷಿಸಿದ ಚುನಾವಣಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷ ಚುನಾವಣೆಗಳು ಮುಗಿದ ನಂತರ ನ್ಯಾಯಾಲಯದ ಕದ ತಟ್ಟಲು ನಿರ್ಧರಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್‌ ಕುಂಭಾನಿ ಅವರ ನಾಮಪತ್ರವನ್ನು ಸಾಕ್ಷಿಗಳ ಸಹಿಗಳ ವಿಚಾರದಲ್ಲಿ ಚುನಾವಣಾಧಿಕಾರಿಗಳು ತಿರಸ್ಕರಿಸಿದ ಬಳಿಕ ಹಾಗೂ ಉಳಿದ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್‌ ಪಡೆದುಕೊಂಡ ನಂತರ ಬಿಜೆಪಿಯ ಮುಕೇಶ್‌ ದಲಾಲ್‌ ಅವರನ್ನು ಎಪ್ರಿಲ್‌ 22ರಂದು ವಿಜೇತರೆಂದು ಘೋಷಿಸಲಾಗಿತ್ತು. ಈ ಕ್ಷೇತ್ರದಲ್ಲಿ ಮೇ 7ರಂದು ಚುನಾವಣೆ ನಡೆಯಬೇಕಿತ್ತು.

ನೀಲೇಶ್‌ ಅವರ ಹೆಸರು ಪ್ರಸ್ತಾಪಿಸಿದ್ದ ಮೂವರು ಸಾಕ್ಷಿಗಳು ತಾವು ನಾಮಪತ್ರಕ್ಕೆ ಸಹಿ ಹಾಕಿಲ್ಲ ಎಂದಿದ್ದರೆ. ಕಾಂಗ್ರೆಸ್‌ನ ಪರ್ಯಾಯ ಅಭ್ಯರ್ಥಿಯ ನಾಮಪತ್ರವನ್ನೂ ಇದೇ ಕಾರಣಕ್ಕೆ ತಿರಸ್ಕರಿಸಲಾಗಿತ್ತು.

ಒಂದು ಸಹಿ ನೈಜವೇ ಅಥವಾ ಫೋರ್ಜರಿ ಮಾಡಲಾಗಿದೆಯೇ ಎಂಬುದನ್ನು ರಿಟರ್ನಿಂಗ್‌ ಆಧಿಕಾರಿ ನಿರ್ಧರಿಸುವಂತಿಲ್ಲ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

ಕಾಂಗ್ರೆಸ್‌ ಈಗಾಗಲೇ ನೀಲೇಶ್‌ ಕುಂಭಾನಿಯನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದೆ. ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಅಥವಾ ನಾಮಪತ್ರ ಸಲ್ಲಿಸುವಾಗ ಎಚ್ಚರಿಕೆ ವಹಿಸಿಲ್ಲ ಎಂದು ಪಕ್ಷ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News