ಪಾನ್ ಬಹಾರ್‌ಗೆ 'ಶೂಟ್ ಮಾಡಿದ ಜೇಮ್ಸ್ ಬಾಂಡ್'

Update: 2016-10-21 04:01 GMT

ಹೊಸದಿಲ್ಲಿ, ಅ.21: ಪಾನ್ ಮಸಾಲ ಪ್ರಚಾರ ರಾಯಭಾರಿ, ಜೇಮ್ಸ್ ಬಾಂಡ್ ಧಾರಾವಾಹಿಯ ಎಂಐ5 ಏಜೆಂಟ್ ಪಾತ್ರದ ಮೂಲಕ ಮನೆಮಾತಾಗಿರುವ ಹಾಲಿವುಡ್ ನಟ ಪಿಯರ್ಸ್‌ ಬ್ರೋಸ್ನನ್ ತಮ್ಮ ಕಂಪೆನಿ ವಿರುದ್ಧವೇ ಗಂಭೀರ ಆರೋಪ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಂಪೆನಿ ಮಾಲಕ  ಪಾನ್‌ಬಾಹರ್ ಗುತ್ತಿಗೆ ನಿಯಮ ಉಲ್ಲಂಘಿಸಿ, ತಂಬಾಕು ಮಿಶ್ರಿತ ಮೌತ್ ಫ್ರೆಶ್ನರ್ ಸೇರಿದಂತೆ ಎಲ್ಲ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿ ಎಂದು ಬಿಂಬಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಅಪರಾಧಕ್ಕೆ ಕಾರಣವಾಗಿರುವ ಬಗ್ಗೆ ಹೃದಯಪೂರ್ವಕ ಕ್ಷಮೆ ಯಾಚಿಸಿರುವ ಬಾಂಡ್, ಪಾನ್ ಬಾಹರ್ ಅವರು ಮಾಧ್ಯಮ ಸಂಸ್ಥೆಗಳ ದಿಕ್ಕು ತಪ್ಪಿಸಿ, ಆ ಬ್ರಾಂಡ್ ಅನ್ನು ತಾವು ಶಿಫಾರಸ್ಸು ಮಾಡಿದಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ತಂಬಾಕು ಉತ್ಪನ್ನಗಳು "ಕ್ಯಾನ್ಸರ್‌ಗೆ ಕಾರಣವಾಗುತ್ತದೆ" ಎಂಬ ಎಚ್ಚರಿಕೆಯೊಂದಿಗೆ ಮಾರಾಟವಾಗುತ್ತವೆ.
"ನನ್ನದೇ ಉದಾಹರಣೆ ತೆಗೆದುಕೊಂಡರೂ, ನನ್ನ ಮೊದಲ ಪತ್ನಿ, ಮಗಳು ಹಾಗೂ ಅಸಂಖ್ಯಾತ ಸ್ನೇಹಿತರು ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಮಹಿಳೆಯರ ಆರೋಗ್ಯ ಸುರಕ್ಷೆಗೆ ನಾನು ಬದ್ಧ. ನರಳಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಾನವ ಆರೋಗ್ಯ ಸುಧಾರಿಸುವ ಉದ್ದೇಶದ ಸಂಶೋಧನಾ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪಾನ್ ಬಾಹರ್ ಅವರು ಸಂಪೂರ್ಣ ನೈಸರ್ಗಿಕ, ತಂಬಾಕು, ಅಡಿಕೆ ಹಾಗೂ ಯಾವುದೇ ಹಾನಿಕಾರಕ ಅಂಶಗಳಿಲ್ಲದ ಉತ್ಪನ್ನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಂಡಿದ್ದಾರೆ. ಆದ್ದರಿಂದ ತಕ್ಷಣವೇ ಕಂಪೆನಿಯ ಜಾಹೀರಾತುಗಳಿಂದ ತಮ್ಮನ್ನು ತೆಗೆದುಹಾಕಬೇಕು ಎಂದು ಕೋರಿದ್ದಾರೆ. ಆ ಉತ್ಪನ್ನ ಮಾನವ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಅಂಶ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಮೇರು ನಟನ ಜತೆಗಿನ ಒಪ್ಪಂದದಲ್ಲಿ ಮೌತ್ ಫ್ರೆಶ್ನರ್‌ನ ಪ್ರಚಾರ ಜಾಹೀರಾತು ಸೇರಿದೆ ಎಂದು ಪೀಪಲ್.ಕಾಮ್ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News