ಈ ವರ್ಷ ನಡಾಲ್ ಆಡುವುದಿಲ್ಲ 2017ರಲ್ಲಿ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸ್

Update: 2016-10-21 18:47 GMT

ಮ್ಯಾಡ್ರಿಡ್, ಅ.21: ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ ಮತ್ತು 14 ಬಾರಿ ಗ್ರಾನ್ ಸ್ಲಾಮ್ ಜಯಿಸಿದ ರಫೆಲ್ ನಡಾಲ್ 2016ರಲ್ಲಿ ಇನ್ನು ಆಡುವುದಿಲ್ಲ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು 2017ರಲ್ಲಿ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಲಿದ್ದಾರೆ.

30ರ ಹರೆಯದ ನಡಾಲ್ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು 2016ರಲ್ಲಿ ಪ್ರಮುಖ ಟೂರ್ನಿಯಿಂದ ದೂರ ಸರಿದಿದ್ದರು. ಎಡಗೈ ಮಣಿಗಂಟಿನ ಗಾಯದಿಂದಾಗಿ ಫ್ರೆಂಚ್ ಓಪನ್‌ನಲ್ಲಿ ಆಡಲಿಲ್ಲ. ಫ್ರೆಂಚ್ ಓಪನ್‌ನಲ್ಲಿ ಮೂರನೆ ಸುತ್ತಿನಲ್ಲಿ ನಿರ್ಗಮಿಸಿದ್ದರು. ಆದರೆ ಅವರು ಫಿಟ್‌ನೆಸ್ ಸಮಸ್ಯೆಯಿಂದ ಹೊರ ಬಾರದಿದ್ದರೂ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಮಾರ್ಕ್ ಲೊಪೆಝ್ ಜೊತೆ ಆಡಿ ಸ್ಪೇನ್‌ಗೆ ಚಿನ್ನ ತಂದು ಕೊಟ್ಟಿದ್ದರು.
  ಒಲಿಂಪಿಕ್ಸ್‌ನ ಸ್ಪರ್ಧಾ ಕಣಕ್ಕೆ ಅವರು ಹೆಚ್ಚು ಅವರು ಹೆಚ್ಚು ಸಿದ್ದತೆಯಿಲ್ಲದೆ ಕಣಕ್ಕಿಳಿದಿದ್ದರು. ‘‘ ಒಲಿಂಪಿಕ್ಸ್‌ಗೆ ಹೆಚ್ಚು ತಯಾರಿ ನಡೆಸದೆ ತೆರಳಿದ್ದೆ. ಗಾಯದಿಂದ ಚೇತರಿಸಿಕೊಂಡಿರದಿದ್ದರೂ ಸ್ಪೇನ್‌ಗೆ ಚಿನ್ನ ತಂದು ಕೊಡುವ ಉದ್ದೇಶದೊಂದಿಗೆ ಸ್ಪರ್ಧಾ ಕಣಕ್ಕೆ ಇಳಿದಿದ್ದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕನಸು ನನಸಾಗಿತ್ತು. ಆದರೆ ಬಳಿಕ ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಳ್ಳುತ್ತಾ 2017ರ ಟೆನಿಸ್ ಸ್ಪರ್ಧೆಗೆ ತಯಾರಿ ನಡೆಸುತ್ತಿರುವೆನು’’ ಎಂದು ನಡಾಲ್ ಹೇಳಿದ್ದಾರೆ.
 ನಡಾಲ್ ಕಳೆದ ವಾರ ಶಾಂೈ ಮಾಸ್ಟರ್ಸ್‌ ಟೂರ್ನಮೆಂಟ್‌ನ ಎರಡನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಮುಂದಿನ ವಾರ ಬಾಸೆಲ್ ಟುರ್ನಿ, ಬಳಿಕ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ಆಡುವುದು ಈ ಹಿಂದೆ ನಿಗದಿಯಾಗಿತ್ತು. ಲಂಡನ್‌ನಲ್ಲಿ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್‌ಗೂ ಅವರು ಅರ್ಹತೆ ಪಡೆದಿದ್ದರು. ಆದರೆ ಇದೀಗ ಈ ವರ್ಷದ ಮುಂದಿನ ಎಲ್ಲ ಟೂರ್ನಿಗಳಿಂದಲೂ ಅವರು ಹಿಂದೆ ಸರಿದಿದ್ದಾರೆ.
ನಡಾಲ್ 2016ರಲ್ಲಿ 53 ಪಂದ್ಯಗಳಲ್ಲಿ ಆಡಿದ್ದಾರೆ. ಈ ಪೈಕಿ 39 ಪಂದ್ಯಗಳಲ್ಲಿ ಜಯಿಸಿದ್ಧಾರೆ. 14 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಮಾಂಟೆ ಕಾರ್ಲೊ ಮಾಸ್ಟರ್ಸ್‌ ಮತ್ತು ಬಾರ್ಸಿಲೋನಾ ಓಪನ್‌ನಲ್ಲಿ ಅವರು ಪ್ರಶಸ್ತಿ ಬಾಚಿಕೊಂಡಿದ್ದರು.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೊಂದಿದ್ದರೂ ಮಣಿಗಂಟಿನ ಗಾಯ ಅವರಿಗೆ ತೊಂದರೆ ಕೊಟ್ಟಿತು. ಬಳಿಕ ವಿಂಬಲ್ಡನ್‌ನಿಂದಲೂ ದೂರ ಸರಿದರು.
 ರಿಯೋ ಒಲಿಂಪಿಕ್ಸ್‌ನಲ್ಲಿ ಸ್ನೇಹಿತ ಮಾರ್ಕ್ ಲೊಪೆಝ್ ಜೊತೆ ಕಣಕ್ಕಿಳಿದು ಡಬಲ್ಸ್‌ನಲ್ಲಿ ಚಿನ್ನ ಗೆದ್ದರು. ಆದರೆ ಸಿಂಗಲ್ಸ್‌ನಲ್ಲಿ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಸೋತು ಕಂಚು ಜಯಿಸುವ ಅವಕಾಶ ಕಳೆದುಕೊಂಡರು.
ಯುಎಸ್ ಓಪನ್‌ನಲ್ಲಿ ನಾಲ್ಕನೆ ಸುತ್ತಿನಲ್ಲೇ ಹೊರ ಬಿದ್ದರು. ನಡಾಲ್‌ಗೆ ಫೆಡರರ್ ದೀರ್ಘಕಾಲದ ಎದುರಾಳಿ. ಫೆಡರರ್ 17 ಬಾರಿ ಗ್ರಾನ್ ಸ್ಲಾಮ್ ಪ್ರಶಸ್ತಿ ಜಯಿಸಿದವರು. ಫೆಡರರ್ ಅವರು ಮೊಣಕಾಲು ನೋವಿನಿಂದಾಗಿ ಜುಲೈನಲ್ಲಿ ಟೆನಿಸ್‌ನಿಂದ ದೂರ ಸರಿದಿದ್ದರು. ಬುಧವಾರ ಮಲ್ಲೊರ್ಕಾದಲ್ಲಿ ನಡಾಲ್‌ರ ಟೆನಿಸ್ ಅಕಾಡಮಿಗೆ ಫೆಡರರ್ ಭೇಟಿ ನೀಡಿದ್ದರು. ನಡಾಲ್ ಅವರು ಫೆಡರರ್‌ಗೆ ತನ್ನ ಅಕಾಡಮಿಗೆ ಬರುವಂತೆ ಆಹ್ವಾನ ನೀಡಿದ್ದರು. 2001ರ ಬಳಿಕ ಮೊದಲ ಬಾರಿ ನಡಾಲ್ ಮತ್ತು ಫೆಡರರ್ ವರ್ಲ್ಡ್ ಟೂರ್ ಫೈನಲ್ಸ್‌ನಿಂದ ದೂರ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News