ನೀರಿನ ಪಂಪ್ ಮಾರಾಟಗಾರನಿಗೆ ಈಗ ಜಾಗತಿಕ ಖ್ಯಾತಿ

Update: 2016-10-22 04:35 GMT

ಚಂಡೀಗಢ, ಅ.22:  ಚಂಡೀಗಢ ಮೂಲದ ಉದ್ಯಮಿ ಕೆ.ಎಸ್. ಭಾಟಿಯಾ ಕಳೆದ ರವಿವಾರ ಏಳುವಾಗ ಅವರ ಮೊಬೈಲ್ ಫೋನಿನಲ್ಲಿ ಕನಿಷ್ಠ 50 ಮಿಸ್ಡ್ ಕಾಲ್ ಗಳು ದಾಖಲಾಗಿದ್ದವು. ಆನ್ ಲೈನ್ ಮೂಲಕ ನೀರಿನ ಪಂಪ್ ಮಾರಾಟಮಾಡುವ ಅವರ ಯಶೋಗಾಥೆಯನ್ನು ಗೂಗಲ್ ಸಿಇಒ ಸುಂದರ್ ಪಿಚೈ ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಹಾಗೂ ಅತ್ಯುನ್ನತ ಟೆಕ್ ಕಂಪೆನಿಗಳ ಸಿಇಒಗಳ ಸಮ್ಮುಖದಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿ ಆಯೋಜಿಸಲಾಗಿದ್ದ ಡಿಜಿಟಲ್ ಇಂಡಿಯಾ ಔತಣಕೂಟದಲ್ಲಿ ಉಲ್ಲೇಖಿಸಿದ್ದೇ ಇದಕ್ಕೆ ಕಾರಣ.

45 ವರ್ಷದ ಭಾಟಿಯಾ ಅವರು ಕೆಮಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು ಪಂಪ್‌ಕಾರ್ಟ್.ಕಾಂ ಎಂಬ ಕಂಪೆನಿಯ ಸ್ಥಾಪಕ, ಸಿಇಒ ಕೂಡ ಆಗಿದ್ದಾರೆ. ಇಂಟರ್ನೆಟ್ ಚತುರನಾಗಿರುವ ಅವರ 14 ವರ್ಷದ ಪುತ್ರ ಉಪಯೋಗವಾಗದೇ ಬಿದ್ದಿದ್ದ ಈ ಡೊಮೈನನ್ನು ತನಗೆ ಎರಡು ವರ್ಷಗಳ ಹಿಂದೆ ಉಡುಗೊರೆಯಾಗಿ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ ಹಾಗೂ ಪಂಪ್‌ಕಾರ್ಟ್.ಕಾಂ ತಮ್ಮ ಮಗನ ಐಡಿಯಾ ಎಂದು ಒಪ್ಪಿಕೊಂಡಿದ್ದಾರೆ.

ಸರ್ಚ್ ಇಂಜಿನ್ ಆಪ್ಟಿಮೈಸೇಶನ್ ಗೆ ಒಂದು ತಂಡ ಸೃಷ್ಟಿಸಿ ಗೂಗಲ್ ಆಡ್‌ವರ್ಡ್ಸ್ ನಲ್ಲೂ ಹೂಡಿಕೆ ಮಾಡಲಾಯಿತು. ಇಂದು ಗೂಗಲ್ ಸರ್ಚ್ ಇಂಜಿನ್ನಿನಲ್ಲಿ ವಾಟರ್ ಪಂಪ್ ಪದವನ್ನು ಟೈಪ್ ಮಾಡಿದರಷ್ಟೇ ಸಾಕು, ಪಂಪ್‌ಕಾರ್ಟ್ ಹೆಸರು ಮೇಲೆ ಕಾಣುತ್ತದೆ. ನಮ್ಮಹೆಚ್ಚುತ್ತಿರುವ ಜನಪ್ರಿಯತೆಯನ್ನು ನೋಡಿ ಪ್ರಮುಖ ಇ-ಕಾಮರ್ಸ್ ಕಂಪೆನಿಗಳೂ ವಾಟರ್ ಪಂಪುಗಳನ್ನು ತಾವು ಮಾರಾಟ ಮಾಡುವ ಉತ್ಪನ್ನಗಳಲ್ಲಿ ಸೇರಿಸಲಾರಂಭಿಸಿದವು.

ಆರಂಭದಲ್ಲಿ ಪಂಪ್‌ಸ್ಟಾಕ್ ಮಾಡಲು ಆರಂಭಿಸಿದರೂ ಬಹಳ ಬೇಗನೇ ಆನ್ ಲೈನ್ ಪಂಪ್ ಮಾರಾಟದಲ್ಲಿ ನಮಗೆ ಪ್ರಮುಖ ಸ್ಥಾನ ದೊರೆಯಿತು. ಇಂದು ನಮ್ಮಲ್ಲಿ 200 ಬ್ರ್ಯಾಂಡುಗಳು ಲಭ್ಯವಿವೆ, ಎಂದು ಭಾಟಿಯಾ ಹೆಮ್ಮೆಯಿಂದ ಹೇಳುತ್ತಾರೆ.

ದೇಶದ ನೀರಿನ ಪಂಪ್ ಮಾರುಕಟ್ಟೆ ಮೌಲ್ಯ ರೂ 2,600 ಆಗಿದ್ದರೂ, ಈ ಕ್ಷೇತ್ರ ಶೇ. 70 ರಷ್ಟು ಅಸಂಘಟಿತವಾಗಿದೆ. ಭಾಟಿಯಾ ಅವರು ನೀರಿನ ಪಂಪ್ ಗಳನ್ನು 17 ವರ್ಷಗಳಿಂದ ಮಾರಾಟ ಮಾಡುತ್ತಿದ್ದರೂ ಅವರ ಆನ್ ಲೈನ್ ಮಾರಾಟವೇ ಹೆಚ್ಚಾಗಿ ಕ್ಲಿಕ್ ಆಗಿತ್ತು.

ಗೂಗಲ್ ಇಂಡಿಯಾ ಇತ್ತೀಚೆಗೆ ಪಂಪ್‌ಕಾರ್ಟ್.ಕಾಂ ಬಗ್ಗೆ ಅಧ್ಯಯನ ನಡೆಸಿತ್ತಲ್ಲದೆ, ಅದು ಆಯೋಜಿಸಿದ್ದ ಎಸ್‌ಎಂಇ ಹೀರೋಸ್ ಚ್ಯಾಲೆಂಜ್ 2014 ರಲ್ಲಿ ಪ್ರಾದೇಶಿಕ ವಲಯದಲ್ಲಿ ಪಂಪ್‌ಕಾರ್ಟ್ ವಿಜಯಿಯೂ ಆಗಿತ್ತು.

‘‘ಚಂಡೀಗಢದಲ್ಲಿ ನೀರಿನ ಪಂಪ್ ಮಾರಾಟ ಮಾಡುತ್ತಿದ್ದ ರಿಟೇಲರ್ ಒಬ್ಬರು ತಮ್ಮ ಉದ್ಯಮವನ್ನುಆನ್ ಲೈನ್ ಗೊಳಿಸಿ ಈಗ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ನೀರಿನ ಪಂಪ್ ಗಳ ದೊಡ್ಡ ರಿಟೇಲರ್ ಆಗಿದ್ದಾರೆ’’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ಭಾಷಣದಲ್ಲಿ ಭಾಟಿಯಾ ಕಂಪೆನಿಯನ್ನು ಹೊಗಳುತ್ತಾ ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News