ಅಪೂರ್ವಚಂದ್ರ ವರದಿ ಜಾರಿಗೆ ಆಗ್ರಹಿಸಿ ನ.3, 4ರಂದು ಪೆಟ್ರೋಲ್, ಡೀಸೆಲ್ ಡೀಲರ್‌ಗಳ ಮುಷ್ಕರ

Update: 2016-10-25 13:39 GMT

ಬೆಂಗಳೂರು, ಅ.25: ಅಪೂರ್ವಚಂದ್ರ ವರದಿಯನ್ನು ಜಾರಿ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನ.3 ಮತ್ತು 4 ರಂದು ಪ್ರೆಟ್ರೋಲ್ ಮತ್ತು ಡೀಸೆಲ್ ಡೀಲರ್ಸ್‌ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬೆಂಗಳೂರು ಪೆಟ್ರೋಲ್ ಮತ್ತು ಡೀಸೆಲ್ ಡೀಲರ್ಸ್‌ ಅಸೋಸಿಯೇಷನ್ ಹಾಗೂ ಚಾಲಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೀಲರ್ಸ್‌ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರನಾಥ್, ಮುಷ್ಕರದ ಭಾಗವಾಗಿ ಅಂದು ಎರಡು ದಿನಗಳ ಕಾಲ ದೇಶದ ಯಾವುದೆ ತೈಲ ಕಂಪನಿಯಿಂದ ಡೀಸೆಲ್ ಮತ್ತು ಪೆಟ್ರೊಲ್ ಖರೀದಿಸುವುದಿಲ್ಲ. ಈ ಮುಷ್ಕರದಲ್ಲಿ ನಗರ ಹಾಗೂ ಸುತ್ತಮುತ್ತಲಿರುವ ಸುಮಾರು 5 ಸಾವಿರ ಪೆಟ್ರೋಲ್ ಮತ್ತು ಡಿಸೇಲ್ ಬಂಕ್‌ಗಳು ಸೇರಿದಂತೆ ರಾಜ್ಯದ ಸುಮಾರು 7 ಸಾವಿರಕ್ಕೂ ಅಧಿಕ ಬಂಕ್‌ಗಳು ಭಾಗವಹಿಸುತ್ತಿವೆ ಎಂದು ಹೇಳಿದರು.

ಸಾವಿರಾರು ರೂಪಾಯಿಗಳು ಅಧಿಕಾರಿಗಳಿಗೆ ಸಂಬಳ ನೀಡುವ ಕಂಪೆನಿಗಳು ಡೀಲರ್‌ಗಳಿಗೆ ಸರಿಯಾದ ಕಮೀಷನ್ ನೀಡುತ್ತಿಲ್ಲ. ಕಂಪೆನಿಗಳು ನೀಡುವ ಕಮೀಷನ್‌ನಲ್ಲಿ ವಾಹನ ಚಲಾಯಿಸಲು ಬೇಕಾಗುವ ಪೆಟ್ರೋಲ್‌ಗೆ ಸಾಕಾಗುತ್ತಿಲ್ಲ. ಇದರಿಂದಾಗಿ ಬಂಕ್‌ಗಳಿಗೆ ಡೀಸೆಲ್, ಪೆಟ್ರೊಲ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ವಾಹನ ಚಾಲಕರಿಗೆ ಕನಿಷ್ಠ ವೇತನ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದರು.

ತೈಲ ಕಂಪೆನಿಗಳು ಅನುಸರಿಸುತ್ತಿರುವ ಕ್ರಮವನ್ನು ಖಂಡಿಸಿ ಈಗಾಗಲೇ ಅ.19 ರಂದು ಸಂಜೆ 7 ರಿಂದ 7.15 ರವರೆಗೆ ವಿದ್ಯುತ್ ದೀಪಗಳನ್ನು ಬಂದ್ ಮಾಡಲಾಗಿತ್ತು ಹಾಗೂ ನಾಳೆ ಸಂಜೆ 7 ರಿಂದ 7.15 ರವರೆಗೆ ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ ಎಂದರು.

ಮುಷ್ಕರದ ಮುಂದುವರಿದ ಭಾಗವಾಗಿ ನ.5 ರಿಂದ ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿದಿನ ಬೆ.9 ರಿಂದ ಸಂಜೆ 6 ರವರೆಗೆ ಏಕಪಾಳಿ ಮಾತ್ರ ಕೆಲಸ ನಿರ್ವಹಿಸಲಾಗುತ್ತದೆ. ಉಳಿದಂತೆ ರಜಾದಿನಗಳಲ್ಲಿ ಹಾಗೂ 2 ನೆ ಶನಿವಾರ, ಎಲ್ಲ ಭಾನುವಾರಗಳಂದು ಎಲ್ಲ ಬಂಕ್‌ಗಳಲ್ಲಿ ಕೆಲಸ ಸ್ಥಗಿತ ಮಾಡಲಾಗುತ್ತದೆ ಎಂದು ಹೇಳಿದರು.

ನಗರದಲ್ಲಿ ಕಳೆದ 10 ವರ್ಷಗಳ ಹಿಂದೆ ಕಡಿಮೆ ಪ್ರಮಾಣದಲ್ಲಿ ಗ್ಯಾಸ್ ಬಳಸಿ ಚಲಾಯಿಸುವ ವಾಹನಗಳಿದ್ದವು. ಈ ಸಂದರ್ಭದಲ್ಲಿ ಕಡಿಮೆ ಕಮೀಷನ್ ನೀಡುತ್ತಿದ್ದರೂ ಸರಿದೂಗಿಸಿಕೊಳ್ಳಲಾಗುತ್ತಿತ್ತು. ಆದರೆ, ಈಗ ಗ್ಯಾಸ್ ವಾಹನಗಳು ಜಾಸ್ತಿಯಾಗಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಬಳಕೆ ಕಡಿಮೆಯಾರುವುದರಿಂದ ಮಾರಾಟ ಕಡಿಮೆಯಾ ಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಕಡಿಮೆ ಕಮೀಷನ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಡೀಲರ್ಸ್‌ಗಳ ಬೇಡಿಕೆಗಳಿಗನುವಾಗಿ ಸರಕಾರ 2011 ರಲ್ಲಿ ರಚಿಸಿದ್ದ ಅಪೂರ್ವಚಂದ್ರ ಸಮಿತಿ ವರದಿ ಜಾರಿಗೊಳಿಸಬೇಕು. ಡೀಲರ್ಸ್‌ಗಳಿಗೆ ದೊರೆಯುತ್ತಿರುವ ಕಮಿಷನ್‌ಹೆಚ್ಚಳ ಮಾಡಬೇಕು.ಲ್ಯೂಬ್ ಡಂಪಿಂಗ್‌ಅನ್ನು ಸ್ಥಗಿತಗೊಳಿಸಬೇಕು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಣಿಕೆ ವೆಚ್ಚವನ್ನು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಭಾಕರ್, ತಾರಾನಾಥ್, ಗೋಪಾಲ್, ಶ್ರೀರಾಮ್, ವೆೀಲುಮುರುಗನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News