ಲೋಕಾಯುಕ್ತರ ನೇಮಕಕ್ಕೆ ಪಟ್ಟು: ಆರ್‌ಟಿಐ ಕಾರ್ಯರ್ತರ ಬಂಧನ

Update: 2016-10-25 13:44 GMT

ಬೆಂಗಳೂರು, ಅ. 25: ರಾಜ್ಯ ಸರಕಾರ ಈ ಕೂಡಲೇ ಕರ್ನಾಟಕ ಲೋಕಾಯುಕ್ತ ಸ್ಥಾನಕ್ಕೆ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಆರ್‌ಟಿಐ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಎಂಎಸ್ ಬಿಲ್ಡಿಂಗ್‌ನಲ್ಲಿರುವ ಕರ್ನಾಟಕ ಲೋಕಾಯುಕ್ತ ಪ್ರಧಾನ ಕಚೇರಿ ಮುಂಭಾಗ ಆರ್‌ಟಿಐ ಕಾರ್ಯಕರ್ತರು, ಕಪ್ಪು ಬಟ್ಟೆ ಧರಿಸಿ ಎಸಿಬಿ ಹಠಾವೋ, ಲೋಕಾಯುಕ್ತ ಬಚಾವೋ ಘೋಷಣೆ ಕೂಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ, ಲೋಕಾಯುಕ್ತ ಸಂಸ್ಥೆಯಲ್ಲಿ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಲಂಚ ಕೊಟ್ಟವರು ಹಾಗೂ ಪಡೆದವರನ್ನು ಬಂಧಿಸಿಲ್ಲವೇಕೆ? ಇಬ್ಬರೂ ಉಪ ಲೋಕಾಯುಕ್ತರು ಈ ಬಗ್ಗೆ ಗಮನ ಹರಿಸಲಿ. ನಿವೃತ್ತ ಲೋಕಾಯುಕ್ತ ಭಾಸ್ಕರ್ ರಾವ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ಮಾತನಾಡಿ, ಸರಿ ಸುಮಾರು ಹತ್ತು ತಿಂಗಳಿನಿಂದ ಕರ್ನಾಟಕ ಲೋಕಾಯುಕ್ತ ಅವರನ್ನು ನೇಮಕ ಮಾಡದೆ, ಸಂಸ್ಥೆಯನ್ನು ರಾಜ್ಯ ಸರಕಾರ ದುರ್ಬಲಗೊಳಿಸಲು ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ವಿರೋಧ ಪಕ್ಷಗಳಿಗೂ ಲೋಕಾಯುಕ್ತರ ನೇಮಕ ಅಗತ್ಯವಿಲ್ಲ. ಅಲ್ಲದೆ, ಎಲ್ಲರೂ ಒಗ್ಗೂಡಿ ಈ ಸಂಸ್ಥೆಯನ್ನು ಮುಚ್ಚಲು ಮುಂದಾಗಿದ್ದಾರೆ ಎಂದ ಅವರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಮತ್ತು ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಹೀಗಾಗಿ, ಪ್ರಭಾವಿ ವ್ಯಕ್ತಿಗಳು ಪಾರಾಗಲು ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಬಂಧನ-ಬಿಡುಗಡೆ: ಇದು ಸಾಂಕೇತಿಕ ಹಾಗೂ ತೊಂದರೆ ಆಗದ ರೀತಿ ನಡೆಸುತ್ತಿರುವ ಪ್ರತಿಭಟನೆ ಎಂದು ಪ್ರತಿಭಟನಾನಿರತ ಆರ್‌ಟಿಐ ಕಾರ್ಯಕರ್ತರು ಪೊಲೀಸರಿಗೆ ಮನವಿ ಮಾಡಿದರೂ, ಬಂಧನ ಮಾಡಿ ಒಂದು ಗಂಟೆ ಬಳಿ ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಜಯಕುಮಾರ್ ಹಿರೇಮಠ, ಸುಧಾ, ಉಮಾಪತಿ, ಆರ್‌ಟಿಐ ಕಾರ್ಯಕರ್ತ ಸುರೇಶ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News