ಪಾಕ್ ವಶದಲ್ಲಿರುವ ಯೋಧನ ಬಿಡುಗಡೆಗೆ ಭಾರತ ಭಾರೀ ಪ್ರಯತ್ನ

Update: 2016-11-01 05:41 GMT

ಹೊಸದಿಲ್ಲಿ, ನ.1: ಪ್ರಮಾದವಶಾತ್ ಸೆ.29 ರಂದು ಪಾಕಿಸ್ತಾನ ಗಡಿಯೊಳಗೆ ಪ್ರವೇಶಿಸಿದ್ದ ಭಾರತದ ಯೋಧ ಚಂದು ಬಾಬುಲಾಲ್ ಚವಾಣ್‌ರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಕೇಂದ್ರ ಸರಕಾರ ರಾಜತಾಂತ್ರಿಕ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದೆ.

ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸರ್ಜಿಕಲ್‌ ಸ್ಟ್ರೈಕ್(ಸೀಮಿತ ದಾಳಿ) ನಡೆಸಿದ ದಿನದಂದೇ ಯೋಧ ಚವಾಣ್ ಪಿಒಕೆ ದಾಟಿದ್ದರು.

 ಪಾಕಿಸ್ತಾನದ ವಶದಲ್ಲಿರುವ ಚವಾಣ್‌ರನ್ನು ಬಿಡುಗಡೆಗೊಳಿಸಲು ಭಾರತೀಯ ಸೇನೆಯ ಡಿಜಿಎಂಒ ರಣಬೀರ್ ಸಿಂಗ್ ಪ್ರಯತ್ನ ನಡೆಸುತ್ತಿದ್ದಾರೆ. ಚವಾಣ್‌ರನ್ನು ಬಿಡುಗಡೆ ಮಾಡಬೇಕೆಂಬ ಭಾರತದ ಕೋರಿಕೆಗೆ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಎದುರು ಪ್ರಸ್ತಾವಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ವಿದೇಶಾಂಗ ವ್ಯವಹಾರ ಸಚಿವಾಲಯ ಚವಾಣ್‌ರನ್ನು ದೇಶಕ್ಕೆ ಕರೆತರುವ ವಿಷಯಕ್ಕೆ ಸಂಬಂಧಿಸಿದ ಎಲ್ಲ ಜವಾಬ್ದಾರಿಯನ್ನು ಸೇನಾಪಡೆಗೆ ವಹಿಸಿಕೊಟ್ಟು ಸುಮ್ಮನೆ ಕುಳಿತಿದೆ. ರಾಷ್ಟ್ರೀಯ ರೈಫಲ್ ಸಿಪಾಯಿ ಚವಾಣ್ ಜಮ್ಮು-ಕಾಶ್ಮೀರದ ಮೆಂಧಾರ್ ಸೆಕ್ಟರ್‌ನಿಂದ ಸರ್ಜಿಕಲ್ ಸ್ಟ್ರೈಕ್ ನಡೆದ ಕೆಲವೇ ಗಂಟೆಗಳ ಬಳಿಕ ನಾಪತ್ತೆಯಾಗಿದ್ದರು.

ಡಿಜಿಎಂಒ ಮೂಲಕ ಚವಾಣ್‌ರನ್ನು ಬಿಡುಗಡೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕರ್ ಅ.2 ರಂದು ಆಶ್ವಾಸನೆ ನೀಡಿದ್ದರು. ಉಭಯ ದೇಶಗಳಲ್ಲಿ ಬಿಗುವಿನ ವಾತಾವರಣವಿರುವ ಕಾರಣ ಚವಾಣ್ ಬಿಡುಗಡೆ ವಿಳಂಬವಾಗಬಹುದು ಎಂದು ಪಾರಿಕರ್ ಹೇಳಿದ್ದರು.

ಸೀಮಿತ ದಾಳಿಗೂ, ಚವಾಣ್ ನಾಪತ್ತೆಯಾಗಿರುವುದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಉಭಯ ದೇಶಗಳ ಸೈನಿಕರು ಹಾಗೂ ನಾಗರಿಕರು ಪ್ರಮಾದವಶಾತ್ ಗಡಿ ನಿಯಂತ್ರಣ ರೇಖೆ ದಾಟುವುದು ಸರ್ವೇಸಾಮಾನ್ಯವಾಗಿದೆ. ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಮೂಲಕವೇ ಅವರನ್ನು ವಾಪಸ್ ಕರೆ ತರಬೇಕು.

ಮಹಾರಾಷ್ಟ್ರದ ಧುಳೆ ಜಿಲ್ಲೆಯ ಚವಾಣ್‌ರನ್ನು ಪಾಕಿಸ್ತಾನ ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಲಿದೆ ಎಂದು ಭಾರತೀಯ ಸೇನೆ ವಿಶ್ವಾಸದಲ್ಲಿದೆ.

 ಚವಾಣ್ ತಮ್ಮ ಕಸ್ಟಡಿಯಲ್ಲಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಡಿಜಿಎಂಒ ತಿಳಿಸಿದ್ದಾಗಿ ಕೇಂದ್ರ ಸರಕಾರಿ ಅಧಿಕಾರಿಗಳು ಅ.13 ರಂದು ತಿಳಿಸಿದ್ದರು.

ಚವಾಣ್ ಸುರಕ್ಷತೆಯ ಬಗ್ಗೆ ಅವರ ಕುಟುಂಬ ಸದಸ್ಯರು ಆತಂಕವ್ಯಕ್ತಪಡಿಸಿದ್ದು, ಪಾಕಿಸ್ತಾನ ಚವಾಣ್‌ಗೆ ಮಾನಸಿಕ ಕಿರುಕುಳ ನೀಡುವ ಸಾಧ್ಯತೆಯಿದೆ. ಸೇನಾಪಡೆ ಅವರ ಬಗ್ಗೆ ಯಾವುದೇ ನಿಗಾವಹಿಸಿಲ್ಲ. ಚವಾಣ್ ಜೀವಕ್ಕೆ ಅಪಾಯವಿದೆ ಎಂದು ಚವಾಣ್‌ರ ಸಹೋದರ, ಮರಾಠ ಇನ್‌ಫ್ಯಾಂಟ್ರಿಯ ಯೋಧ ಭೂಷಣ್ ಚವಾಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News