ಅಲಿಗಢ: ಕೋಮು ಹಿಂಸಾಚಾರಕ್ಕೆ ಎರಡು ಬಲಿ

Update: 2016-11-01 14:59 GMT

ಅಲಿಗಢ, ನ.1: ಕಳೆದೆರಡು ದಿನಗಳಲ್ಲಿ ಇಲ್ಲಿ ಕೋಮು ಹಿಂಸಾಚಾರದ ಎರಡು ಘಟನೆಗಳಲ್ಲಿ ತಂದೆ-ಮಗ ಕೊಲ್ಲಲ್ಪಟ್ಟಿದ್ದು, ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆಯ ನಗರ ಮತ್ತು ಜಿಲ್ಲೆಯ ಕೆಲವೆಡೆಗಳಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.

 ನಿನ್ನೆ ರಾತ್ರಿ ಬಾಬ್ರಿ ಮಂಡಿ ಪ್ರದೇಶದಲ್ಲಿ ಕ್ಷುಲ್ಲಕ ಬೀದಿ ಜಗಳದ ಹಿನ್ನೆಲೆಯಲ್ಲಿ ಎರಡು ಸಮುದಾಯಗಳು ಹೊಡೆದಾಡಿಕೊಂಡ ಪರಿಣಾಮ ಹಿಂಸೆ ಭುಗಿಲ್ಲೆದ್ದಿತ್ತು. ಉಭಯ ಗುಂಪುಗಳು ಪರಸ್ಪರರತ್ತ ಗುಂಡು ಹಾರಾಟ ಮತ್ತು ಇಟ್ಟಿಗೆ ತೂರಾಟದಲ್ಲಿ ತೊಡಗಿದ್ದು, ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಬೇಕಾಯಿತು. ಕಲ್ಲು ತೂರಾಟದಲ್ಲಿ ಶಶಿ ಎಂಬ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.

ಕೆಲವರು ರಸ್ತೆಯಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದನ್ನು ದಾರಿಹೋಕರು ಆಕ್ಷೇಪಿಸಿದ್ದು ಘರ್ಷಣೆಗೆ ಕಾರಣವಾಗಿತ್ತು ಎಂದು ಜಿಲ್ಲಾಧಿಕಾರಿ ರಾಜಮಣಿ ಯಾದವ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದರು.

   ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ಪ್ರತ್ಯೇಕ ಘಟನೆಯಲ್ಲಿ ರವಿವಾರ ಅಪಘಾತವೊಂದರ ಬಳಿಕ ಭುಗಿಲ್ಲೆದ್ದ ಹಿಂಸಾಚಾರದಲ್ಲಿ ಬಂಡು ಖಾನ್(60) ಮತ್ತು ಅವರ ಪುತ್ರ ಮೊಹಬ್ಬತ್(18) ಕೊಲ್ಲಲ್ಪ ಟ್ಟಿದ್ದಾರೆ. ಪೇಟೆಯಿಂದ ಖರೀದಿ ಮುಗಿಸಿಕೊಂಡು ತಂದೆ-ಮಗ ಮನೆಗೆ ಮರಳುತ್ತಿದ್ದಾಗ ಅವರ ಸ್ಕೂಟರ್ ಕೈಗಾಡಿಯೊಂದಕ್ಕೆ ಡಿಕ್ಕಿ ಹೊಡೆದಿತ್ತು. ಇದು ವಾಗ್ವಾದಕ್ಕೆ ಕಾರಣವಾಗಿ ಹಿಂಸೆಗೆ ತಿರುಗಿತ್ತು. ಈ ಸುದ್ದಿ ಹರಡಿದಾಗ ಉಭಯ ಸಮುದಾಯಗಳಿಗೆ ಸೇರಿದ ಪ್ರತಿಭಟನಾಕಾರರು ಸ್ಥಳದಲ್ಲಿ ಗುಂಪು ಸೇರಿದ್ದು,ಇದರಲ್ಲಿ ಆಸುಪಾಸಿನ ಹಳ್ಳಿಗರೂ ಇದ್ದರು. ಘರ್ಷಣೆಗಳಲ್ಲಿ ಬಂಡು ಖಾನ್ ಮತ್ತು ಮೊಹ್ಹಬ್ಬತ್ ಕೊಲ್ಲಟ್ಪಟ್ಟಿದ್ದು, ಭಾರೀ ಸಂಖ್ಯೆಯಲ್ಲಿ ಪೊಲೀಸರು ಮತ್ತು ಅರೆ ಸೇನಾಪಡೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಯನ್ನು ನಿಯಂತ್ರಿಸಿದರು. ಘಟನೆಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.

ಮೃತರ ಅಂತ್ಯಸಂಸ್ಕಾರವನ್ನು ಇಲ್ಲಿಂದ ಸುಮಾರು 30 ಕಿ.ಮೀ.ದೂರದ ಅವರ ಸ್ವಗ್ರಾಮ ಕೌರಿಯಾಗಂಜ್‌ನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ನಡುವೆ ನಡೆಸಲಾಯಿತು. ತಂದೆ-ಮಗನ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News