ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್‌ಗೆ ಭಾರತ ತಂಡ ಪ್ರಕಟ

Update: 2016-11-02 17:42 GMT

ಮುಂಬೈ, ನ.2: ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಹಿರಿಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಎಂಎಸ್‌ಕೆ ಪ್ರಸಾದ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಬುಧವಾರ ಇಲ್ಲಿ ಸಭೆ ಸೇರಿ ಇಂಗ್ಲೆಂಡ್ ವಿರುದ್ಧ ನ.9 ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ 15 ಸದಸ್ಯರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿದೆ.

ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಗಾಯದ ಸಮಸ್ಯೆಯಿಂದಾಗಿ ಆರರಿಂದ 8 ವಾರ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಕಾರಣ ಆಯ್ಕೆಗಾರರು ಹಾರ್ದಿಕ್ ಪಾಂಡ್ಯಗೆ ಮಣೆ ಹಾಕಿದ್ದಾರೆ. 22ರ ಪ್ರಾಯದ ಪಾಂಡ್ಯ ಈ ವರ್ಷ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದು, ಇದೇ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಬರೋಡಾದ ಆಲ್‌ರೌಂಡರ್ 16 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 727 ರನ್ ಗಳಿಸಿದ್ದು, ಒಟ್ಟು 22 ವಿಕೆಟ್ ಪಡೆದಿದ್ದಾರೆ.

ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಇಶಾಂತ್ ಶರ್ಮ ಹಾಗೂ ಶಿಖರ್ ಧವನ್ ಬದಲಿಗೆ ತಂಡವನ್ನು ಸೇರಿಕೊಂಡಿದ್ದ ಹರ್ಯಾಣದ ಆಲ್‌ರೌಂಡರ್ ಜಯಂತ್ ಯಾದವ್ ಹಾಗೂ ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ತಂಡದಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ.

ನ್ಯೂಝಿಲೆಂಡ್ ವಿರುದ್ಧ ಸರಣಿಯ ವೇಳೆ ಚಿಕುನ್‌ಗುನ್ಯಾ ವೈರಸ್‌ಗೆ ಒಳಗಾಗಿ ಸರಣಿಯಿಂದ ಹೊರಗುಳಿದಿದ್ದ ವೇಗದ ಬೌಲರ್ ಇಶಾಂತ್ ಶರ್ಮ ತಂಡಕ್ಕೆ ವಾಪಸಾಗಿದ್ದಾರೆ. ಇನ್ನೋರ್ವ ವೇಗಿ ಭುವನೇಶ್ವರ ಕುಮಾರ್ ಫಿಟ್‌ನೆಸ್ ಸಾಬೀತು ಪಡಿಸಲು ವಿಫಲರಾಗಿದ್ದಾರೆ. ಭಾರತೀಯ ತಂಡದ ಫಿಜಿಯೋ ಪ್ಯಾಟ್ರಿಕ್ ಎರ್ಹರ್ಟ್ ನೀಡಿದ ಫಿಟ್‌ನೆಸ್ ವರದಿಯನ್ನು ಆಧರಿಸಿ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ. ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ರಾಹುಲ್(ಸ್ನಾಯು ಸೆಳೆತ) ಹಾಗೂ ಧವನ್(ಹೆಬ್ಬೆರಳು ಬಿರುಕು) ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಕಳೆದ ತಿಗಳು ಕೋಲ್ಕತಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 2ನೆ ಟೆಸ್ಟ್ ಪಂದ್ಯಕ್ಕೆ ಗಂಭೀರ್ ಆಯ್ಕೆಯಾಗಿದ್ದರು. ದಿಲ್ಲಿ ಬ್ಯಾಟ್ಸ್‌ಮನ್ ಸುಮಾರು 2 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು.

ಕೊಹ್ಲಿ ನೇತೃತ್ವದ ಭಾರತ ತಂಡ ವಿಶ್ವದ ನಂ.1 ತಂಡವಾಗಿದ್ದು, ಇಂಗ್ಲೆಂಡ್ ನಾಲ್ಕನೆ ಸ್ಥಾನದಲ್ಲಿದೆ. ಆಂಗ್ಲರು 2012ರಲ್ಲಿ ಭಾರತಕ್ಕೆ ಕೊನೆಯ ಬಾರಿ ಪ್ರವಾಸ ಕೈಗೊಂಡಿದ್ದರು. ಅಹ್ಮದಾಬಾದ್‌ನಲ್ಲಿ ನಡೆದಿದ್ದ ಮೊದಲ ಪಂದ್ಯ ಸೋತಿದ್ದ ಇಂಗ್ಲೆಂಡ್ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು.

ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ನ.9 ರಂದು ರಾಜ್‌ಕೋಟ್‌ನಲ್ಲಿ ಆರಂಭವಾಗಲಿದ್ದು, ವಿಶಾಖಪಟ್ಟಣ(ನ.17-21), ಮೊಹಾಲಿ(ನ.26-30), ಮುಂಬೈ(ಡಿ.8-12) ಹಾಗೂ ಚೆನ್ನೈನಲ್ಲಿ(ಡಿ.16-20) ಉಳಿದ ಪಂದ್ಯಗಳು ನಡೆಯುತ್ತವೆ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಗೌತಮ್ ಗಂಭೀರ್, ಆರ್.ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ವೃದ್ದಿಮಾನ್ ಸಹಾ(ವಿಕೆಟ್‌ಕೀಪರ್), ಇಶಾಂತ್ ಶರ್ಮ, ಮುರಳಿ ವಿಜಯ್, ಉಮೇಶ್ ಯಾದವ್, ಮುಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News