ಎನ್‌ಡಿಟಿವಿ ವಾಹಿನಿ ಪ್ರಸಾರ ಸ್ಥಗಿತ: ಬೀದಿಗಿಳಿದ ಪತ್ರಕರ್ತರು
ಬೆಂಗಳೂರು, ನ.5: ಒಂದು ದಿನದ ಮಟ್ಟಿಗೆ ಎನ್‌ಡಿಟಿವಿ ವಾಹಿನಿಯನ್ನು ಸ್ಥಗಿತಗೊಳಿಸಿ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡಲು ಹೊರಟಿರುವ ಕೇಂದ್ರ ಸರಕಾರದ ನಿಲುವನ್ನು ಖಂಡಿಸಿ ಇಂದು ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪ್ರೆಸ್‌ಕ್ಲಬ್ ಮತ್ತು ಪತ್ರಕರ್ತರ ಅಧ್ಯಯನ ಕೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ಪತ್ರಕರ್ತರು ಪಾಲ್ಗೊಂಡು, ಕೇಂದ್ರ ಸರಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎನ್‌ಡಿಟಿವಿ ವಾಹಿನಿಯನ್ನು ಸ್ಥಗಿತಗೊಳಿಸುವ ಕ್ರಮದಿಂದ ಸರಕಾರ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದರು.
ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ಭಯೋತ್ಪಾದಕರ ದಾಳಿ ಸಂದರ್ಭದಲ್ಲಿ ಗೌಪ್ಯ ಮಾಹಿತಿಯನ್ನು ಪ್ರಸಾರ ಮಾಡಿದೆ ಎಂದು ಆರೋಪಿಸಿ ಎನ್‌ಡಿಟಿವಿ ವಾಹಿನಿ ಯನ್ನು ಸ್ಥಗಿತಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿರುವುದು ಖಂಡನೀಯ. ಎನ್‌ಡಿಟಿವಿ ದೇಶ ದ್ರೋಹದ ಕೆಲಸವನ್ನೇನೂ ಮಾಡಿಲ್ಲ. ಆದರೂ ಕೇಂದ್ರ ಸರಕಾರ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.ರ ತುರ್ತು ಪರಿಸ್ಥಿತಿಯ ವಾತಾವರಣವನ್ನು ದೇಶದಲ್ಲಿ ಸೃಷ್ಟಿಸಲು ಕೇಂದ್ರ ಸರಕಾರ ಉತ್ಸುಕತೆ ತೋರುತ್ತಿದೆ. ಬಿಜೆಪಿ ಸರಕಾರ ಮತ್ತೆ ರಾಷ್ಟ್ರದಲ್ಲಿ ಅರಾಜಕತೆ ಸೃಷ್ಟಿಸುವ ತವಕದಲ್ಲಿದೆ. ಕೇಂದ್ರ ಸರಕಾರಕ್ಕೆ ಈ ನಿರ್ಧಾರವನ್ನು ಕೈಬಿಡುವಂತೆ ರಾಷ್ಟ್ರಪತಿ ಸೂಚಿಸಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.