ನೋಟು ರದ್ದತಿಯ ದೌಲತ್!

Update: 2016-11-09 18:36 GMT

ಶ್ರೀ ಮಂತರನ್ನೂ ಬಡವರನ್ನೂ ಏಕಕಾಲಕ್ಕೆ ನಡುಗಿಸುವ, ಭೂಕಂಪದಂತಹ ಸುದ್ದಿ ಪ್ರಕಟವಾಗಿದೆ. (ಇಂದಿರಾ ಗಾಂಧಿ 1969ರಲ್ಲಿ ಬ್ಯಾಂಕುಗಳನ್ನು, ದೇವರಾಜ ಅರಸು 1973ರಲ್ಲಿ ಭೂಸುಧಾರಣಾ ಕಾಯ್ದೆಯನ್ನು ತಂದಾಗ ಮತ್ತು 1976ರಲ್ಲಿ ಖಾಸಗಿ ಬಸ್‌ಗಳನ್ನು ರಾಷ್ಟ್ರೀಕರಣ ಮಾಡಿದಾಗ ಬಡವರಿಗೆ ಸಂತೋಷವಾಗಿತ್ತು; ಶ್ರೀಮಂತರು ಮಾತ್ರ ನಡುಗಿದ್ದರು.) ಸರಕಾರವು 2016ರ ನವೆಂಬರ್ 8ರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ದೇಶಾದ್ಯಂತ 500 ಮತ್ತು 1,000 ರೂಪಾಯಿಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಅನರ್ಹಗೊಳಿಸಿದೆ. ನವೆಂಬರ 9ರಂದು (ಮತ್ತು ಕೆಲವೆಡೆ 10ರಂದೂ) ಬ್ಯಾಂಕುಗಳು ವ್ಯವಹಾರ ನಿಲ್ಲಿಸುತ್ತವೆ; ಎಟಿಎಂಗಳು ಬಾಯಿಮುಚ್ಚಿ ಕೂರುತ್ತವೆ. ಮೂರು ದಿನಗಳ ಕಾಲ ಈ ನೋಟುಗಳನ್ನು ಆಸ್ಪತ್ರೆ, ಔಷಧಿ ಅಂಗಡಿ, ಪೆಟ್ರೋಲ್ ಬಂಕ್, ಅಂಚೆ ಕಚೇರಿ ಮುಂತಾದ (ಅಗತ್ಯ ಸೇವೆಯನ್ನು ನೀಡುವ) ಕೇಂದ್ರಗಳಲ್ಲಿ ಮತ್ತು ಕೇಂದ್ರ ಸರಕಾರದ ಕಚೇರಿಗಳಲ್ಲಿ ನೀಡಬಹುದು. ಮುಂದೆ ಡಿಸೆಂಬರ್ 30ರ ವರೆಗೂ ಈ ನೋಟುಗಳನ್ನು ಬ್ಯಾಂಕಿನಲ್ಲಿ ಮತ್ತು ನಿಗದಿತ ಇತರ ಕೇಂದ್ರಗಳಲ್ಲಿ ಆಧಾರ್ ಅಥವಾ ಪ್ಯಾನ್ ಕಾರ್ಡ್‌ಗಳಂತಹ ಗುರುತಿನ ಚೀಟಿಗಳನ್ನು ತೋರಿಸಿ ಬದಲಾಯಿಸಿಕೊಳ್ಳಬಹುದು. ಸರಕಾರವು 500 ರೂಪಾಯಿಗಳ ಮತ್ತು 2,000 ರೂಪಾಯಿಗಳ ಮಹಾತ್ಮಾ ಗಾಂಧಿ ಹೊಸ ಶ್ರೇಣಿಯ ಮಂಗಳಯಾನ, ಕೆಂಪುಕೋಟೆಗಳ ಹೊಸ ವಿನ್ಯಾಸದ ನೋಟುಗಳನ್ನು ಚಲಾವಣೆಗೆ ತರಲಿದೆ. ಹಲವು ನಿಯಮಗಳನ್ನು ಹೇರಿದ್ದು ಇವೆಲ್ಲವನ್ನೂ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ಪ್ರಕಟಿಸಿವೆ.

ರೇಡಿಯೊದಲ್ಲಿ ಈ ಸುದ್ದಿಯನ್ನು ಕೇಳಿದವರು ದಿಗ್ಭ್ರಮೆಗೊಂಡು ದಂಗಾಗಿ ಕುಳಿತಿರಬಹುದು. ಟಿವಿಯಲ್ಲಿ ಈ ಸುದ್ದಿಯನ್ನು ನೋಡಿದವರು ತಕ್ಷಣ ತಮ್ಮಲ್ಲಿರುವ ಅಷ್ಟಿಷ್ಟು 500-1000ದ ನೋಟುಗಳನ್ನು ಠೇವಣಿಯಿಡಲು, ಮತ್ತು ನೂರರ ನೋಟುಗಳನ್ನು ಪಡೆಯಲು ರಾತ್ರಿಯೆಂದು ಲೆಕ್ಕಿಸದೆ ಎಟಿಎಂಗಳತ್ತ ಧಾವಿಸಿದರು. ಎಲ್ಲಾ ಎಟಿಎಂಗಳೆದುರು ಠೇವಣಿಯಿಡು ವುದಕ್ಕಿಂತಲೂ ಹೆಚ್ಚಾಗಿ ನೂರರ ನೋಟುಗಳನ್ನು ಪಡೆಯಲು ಭಾರೀ ಕ್ಯೂ ಇರುವುದು ಕಂಡುಬರುತ್ತಿತ್ತು. ಟಿವಿ ಚಾನೆಲ್‌ಗಳು ಎಂದಿನಂತೆಯೇ ಫಲಾಫಲಗಳ ವಿವೇಚನೆಗಳನ್ನು ಬಿಟ್ಟು ತಮ್ಮ ಮಾನ-ಸನ್ಮಾನಪತ್ರಗಳನ್ನೋದುತ್ತಿದ್ದರು. ಸ್ವಾತಂತ್ರ್ಯಾನಂತರ ನಡೆದ ಅಭೂತಪೂರ್ವ ಘಟನೆಯೆಂಬಂತೆ ಈ ಬೆಳವಣಿಗೆಯನ್ನು ವಿವರಿಸುತ್ತಿದ್ದರು. ಅರ್ಥಶಾಸ್ತ್ರಜ್ಞರು ಈ ಬಗ್ಗೆ ಸರಿಯಾದ ಮಾಹಿತಿ ಮತ್ತು ಅರಿವು ನೀಡಬಲ್ಲ ರೆಂದು ನನಗನ್ನಿಸುವುದಿಲ್ಲ. ಒಂದು ಕಾಲವಿತ್ತು: ತಜ್ಞರು ತಮಗನ್ನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳುತ್ತಿದ್ದರು. ಅದರ ಪರಿಣಾಮವನ್ನೆದುರಿಸಲು ಸಿದ್ಧರಾಗಿದ್ದರು. ಆದರೆ ಈಗ ಎಲ್ಲ ತಜ್ಞರನ್ನೂ ಸಂಶಯದಿಂದಲೇ ಕಾಣುವಂತೆ ಅವರು ಪ್ರವಾಹದೊಂದಿಗಿನ ಅಭಿಮತವನ್ನೇ ಹೇಳುತ್ತಾರೆ; ಹಿಸ್ ಮಾಸ್ಟರ್ಸ್ ವಾಯ್ಸಾ ಆಗಿದ್ದಾರೆ. ಆದ್ದರಿಂದ ಜನಸಾಮಾನ್ಯರು ತಮ್ಮ ಮೇಲೆ ಈ ಬೆಳವಣಿಗೆ ಮಾಡಿರುವ ಪ್ರಭಾವವನ್ನು ಸ್ವತಂತ್ರವಾಗಿಯೇ ಕಾಣುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ.

 
ಕಪ್ಪುಹಣವನ್ನು ಹೊರಗೆಳೆಯುವುದಕ್ಕಾಗಿ ಈ ನಿರ್ಧಾರವೆಂದು ಪ್ರಧಾನಿ ಹೇಳಿದ್ದಾರೆ. ಜೊತೆಗೇ ನ್ಯಾಯಸಮ್ಮತ ನೋಟುಗಳೊಂದಿಗೇ ಕಳ್ಳಹಣದ ಚಲಾವಣೆಯೂ (10 ಲಕ್ಷ ನೋಟುಗಳಲ್ಲಿ 250 ನೋಟುಗಳು) ಸಮ ಪ್ರಮಾಣದಲ್ಲಿ ಆಗುತ್ತಿದ್ದುದರಿಂದ ಈ ನಿರ್ಧಾರ ಅನಿವಾರ್ಯವಾಯಿತೆಂದು ಹೇಳಿದ್ದನ್ನು ಕೇಳಿದಾಗ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನಾಚಿಕೆಯಾಗಬೇಕು. ನಮ್ಮ ದೇಶವೆಂದರೆ ದೇವರುಗಳ ಮಾತ್ರವಲ್ಲ, ಕಳ್ಳಸಾಗಣೆದಾರರ ಸ್ವರ್ಗವೂ ಹೌದೆಂಬುದು ಸಾಬೀತಾಗಿದೆ. ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಮತ್ತು ಕೆಲವು ದಕ್ಷಿಣ ಏಷ್ಯಾದ ದೇಶಗಳಲ್ಲಿ ಗಾಂಜಾ ಮುಂತಾದ ಡ್ರಗ್‌ಗಳ ಕಳ್ಳಸಾಗಣೆ ದೇಶದ ಒಟ್ಟು ಬಜೆಟಿಗಿಂತಲೂ ಹೆಚ್ಚಿದೆಯೆಂದು ಕೇಳಿದ್ದೆವು. ಈಗ ಇಂತಹ ಕಳ್ಳಹಣದ ಚಲಾವಣೆಯು ಭಾರತದಲ್ಲಿ ಇಷ್ಟೊಂದು ಪ್ರಮಾಣದಲ್ಲಿದೆಯೆಂದರೆ ನಾವು ನಮ್ಮನ್ನೇ ಕಂಡು ಭಯಭೀತರಾಗಬೇಕು. ಆದರೆ ಸರಕಾರವು ಒಂದು ಕೇವಿಯಟ್‌ನೊಂದಿಗೆ ಈ ಸುದ್ದಿಯನ್ನು ಪ್ರಕಟಿಸಿದೆ. ಅದೆಂದರೆ ಈ ಕಳ್ಳಹಣ ಅಥವಾ ಕಪ್ಪುಹಣದ ಚಲಾವಣೆಗೆ ನೆರೆಯ ಭಯೋತ್ಪಾದಕರು ಕಾರಣವೆಂದು ಹೇಳಲಾದದ್ದು. ಕಳೆದ ಎರಡೂವರೆ ವರ್ಷಗಳಲ್ಲಿ ದೇಶದ ಎಲ್ಲ ಅನಿಷ್ಟಗಳು ದೂರವಾ ಗುತ್ತದೆಂದು ತಿಳಿದಿದ್ದೆವು. ಸ್ವಿಸ್ ಬ್ಯಾಂಕಿನಲ್ಲಿಟ್ಟ ಭಾರತೀಯರ ಹಣವನ್ನು ಹೊರಗೆಳೆದು ಪ್ರತಿಯೊಬ್ಬರ ಕಿಸೆಯನ್ನು 15 ಲಕ್ಷದಷ್ಟು ದಪ್ಪಗಾಗಿಸುತ್ತದೆಂದು, ಡಾಲರ್‌ನೆದುರು ರೂಪಾಯಿ 35 ರೂಪಾಯಿಗೆ ಏರಬಹುದೆಂದು, ತೈಲ ಬೆಲೆ ನೆಲಕ್ಕಿಳಿಯುತ್ತದೆಂದು ಹೇಳಲಾಗಿತ್ತು. ಆದರೆ ಅವೆಲ್ಲ ಆವಿಯಾಗಿ ಜನಸಾಮಾನ್ಯನ ಅಪೇಕ್ಷೆಯನ್ನು ನಿರೀಕ್ಷೆಯನ್ನು ಪೂರೈಸಲು ವಿದೇಶೀ ಕೈವಾಡವೆಂಬ (ಇಂದಿರಾ-ರಾಜೀವ್ ಗಾಂಧಿ ಸರಕಾರದ ಮಂತ್ರವೂ ಅದೇ ಆಗಿತ್ತು!) ಮಂತ್ರದ ಮಾವಿನಕಾಯಿಯನ್ನು ಸೃಷ್ಟಿಸಲಾಗಿತ್ತು. ಜಾತಿ-ಮತ-ಧರ್ಮ ಮುಂತಾದ ವೇಷಗಳು ರಸಿಕರನ್ನು ಆಕರ್ಷಿಸದಾಗ ಇನ್ನೇನೋ ತಂತ್ರವನ್ನು ಹೂಡುವುದು ಅಗತ್ಯವಾಗಿತ್ತು. ಕೊನೆಗೂ ಸರಕಾರ ಅಂತರ್ಮುಖಿಯಾಯಿತು. ಸ್ವಿಸ್ ಬ್ಯಾಂಕು, ಪಾಕಿಸ್ತಾನ, ಬ್ರಿಟನ್‌ನಲ್ಲಿ ಅಡಗಿದ ಭಾರತೀಯ ಶ್ರೇಷ್ಠರನ್ನು ಮರಳಿ ತರುವ ಯತ್ನ, ಮುಂತಾದ ಹೊರಗಿನ ಎಲ್ಲ ಅನಿಷ್ಟಗಳನ್ನು ಒಳ ತರುವ ತಂತ್ರಗಳನ್ನು ಮರೆತು ಒಳಗಿನ ಅನಿಷ್ಟಗಳನ್ನು ಹೊರಗೆಳೆಯುವ (ನಮ್ಮ ಮಕ್ಕಳನ್ನೇ ಬಾವಿಗೆ ತಳ್ಳಿ ಆಳ ನೋಡುವ) ತಂತ್ರ ಯಶಸ್ವಿಯಾಯಿತು. ಪರಿಣಾಮವಾಗಿ ಕಪ್ಪುಹಣವನ್ನು ಬಿಳಿಮಾಡುವ 2016ರ ಘೋಷಣಾ ಯೋಜನೆಯಲ್ಲಿ ಸಾಕಷ್ಟು ಹಣವನ್ನು ಹೊರಗೆಳೆಯಿತು; ಅದರ ಮುಂದುವರಿದ ಭಾಗದಂತೆ ಈಗ ದೊಡ್ಡ ನಿಶಾನಿಯ ನೋಟುಗಳನ್ನು ರದ್ದುಮಾಡಲಾಗಿದೆ. ಇದು ಕಪ್ಪುಹಣವನ್ನು ಹೊರಗೆಳೆಯುತ್ತದೆ, ನಿಜ. ಆದರೆ ಶ್ರೀಮಂತರನ್ನಷ್ಟೇ ಘಾಸಿಗೊಳಿಸಬಲ್ಲ ಯೋಜನೆಯಾಗಿದ್ದರೆ ಎಲ್ಲವೂ ಸುರಳೀತವಾಗುತ್ತಿತ್ತು. ಆದರೆ ಈ ನಿರ್ಧಾರದ ತಕ್ಷಣದ ಪರಿಣಾಮವು ಬಡ ಮತ್ತು ಮಧ್ಯಮ ವರ್ಗದ ಮೇಲೆ ಮಾತ್ರ ಆಗುತ್ತದೆಯೆಂದು ಶ್ರೀಸಾಮಾನ್ಯನ ಪ್ರತಿಕ್ರಿಯೆಯಿಂದ ಗೊತ್ತಾಗುತ್ತದೆ. ನಡುರಾತ್ರಿಯ ವರೆಗೂ ಎಟಿಎಂಗಳೆದುರು ಕೇವಲ 400 ರೂಪಾಯಿಗಳಿಗಾಗಿ (ಏಕೆಂದರೆ ಅದಕ್ಕಿಂತ ಹೆಚ್ಚಿನ ಹಣವನ್ನು ಬೇಡಿದರೆ 500ರ ನೋಟು ಪ್ರತ್ಯಕ್ಷವಾಗುತ್ತದೆ-ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲ್ಲಿ ಎಂದಂತೆ!) ಯಾರೊ ಒಬ್ಬರು ಹೊಟೆಲ್‌ನಲ್ಲಿ ಬಿಲ್ಲು ಕೊಡಲೋಸುಗ ತನ್ನ ಪತ್ನಿಯನ್ನು ಅಲ್ಲೇ ಬಿಟ್ಟು (ಒತ್ತೆಯಿಡುವ ಪ್ರಸಂಗ ನೆನಪಾಗಬೇಕು!) ಎಟಿಎಂನಿಂದ ಎಲ್ಲಾ ಡೆೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ತಡವಿ ಕೊನೆಗೂ 4,000 ರೂಪಾಯಿ ಜೊತೆ ಮಾಡಿಕೊಂಡು ಹೋದ್ದನ್ನು ಟಿವಿ ಚಾನೆಲ್ ಒಂದು ತೋರಿಸುತ್ತಿತ್ತು. ಸಕ್ಕರೆ-ಸೀಮೆಎಣ್ಣೆ ಕ್ಯೂ ನೆನಪಾಗುತ್ತಿತ್ತು! ಮಡಿ ಕೇರಿಯಂತಹ ಪ್ರವಾಸಿತಾಣದ ಕತ್ತಲೆಯ ಗವಿಯಂತಹ ಇರುಳಿನಲ್ಲಿ ಪ್ರವಾಸಿಗಳು ಕಂಗಾಲಾಗಿ ಎಟಿಎಂಗಳನ್ನು ಹುಡುಕುತ್ತಿದ್ದ ದೃಶ್ಯ ಎದೆ ಕಲಕುವಂತಿತ್ತು.
 
ಇದೊಂದು ಭಾರೀ ಕ್ರಾಂತಿಯಂತೆ ಕಾಣುವುದು ಸಹಜ. ಆದರೆ ಇದೊಂದು ಹತಾಶ ಹೆಜ್ಜೆಯೆಂಬುದು ಗೊತ್ತ್ತಾಗಬೇಕಾದರೆ ಇದರ ಭವಿಷ್ಯವನ್ನು ಗಮನಿಸಬೇಕು. ಕಳ್ಳಹಣದ ಚಲಾವಣೆಯನ್ನು ನಿಲ್ಲಿಸಲಾಗುತ್ತಿಲ್ಲವೆಂದು ಸರಕಾರ ತನ್ನ ವೈಫಲ್ಯವನ್ನು ಬಹಿರಂಗಗೊಳಿಸಿದೆ. ಬೇರೆ ದಾರಿಯಿಲ್ಲದಿದ್ದಾಗಷ್ಟೇ ಇಂತಹ ಹಾದಿ ಅನಿವಾರ್ಯವಾಗುತ್ತದೆ. ಇದೊಂದು ರೀತಿಯಲ್ಲಿ ಗ್ಯಾಂಗ್ರೀನ್ ಆದ ಕಾಲನ್ನು ಕತ್ತರಿಸಿದಂತೆ ಅಥವಾ ಶೀತವಾಯಿತೆಂದು ಮೂಗನ್ನೇ ಕತ್ತರಿಸಿದಂತೆ. ಮತ್ತೆ ತರುವ ಹೊಸ ನೋಟುಗಳಂತಹ ಕಳ್ಳ ನೋಟುಗಳು ಬರಲಾರವೆಂಬ ಗ್ಯಾರಂಟಿಯೆಲ್ಲಿದೆ? ವಿಷಾದದ ಸಂಗತಿಯೆಂದರೆ ನಮ್ಮ ಮಾಧ್ಯಮಗಳು ಇದೊಂದು ಅನನ್ಯ ಸಾಧನೆಯೆಂಬಂತೆ ಸುದ್ದಿಯನ್ನು ಪ್ರಸಾರಮಾಡುತ್ತಿದ್ದ ರೀತಿ. ಒಂದೇ ಏಟಿಗೆ ಇಡೀ ಕಪ್ಪು ಹಣವನ್ನು ಮತ್ತು ಭ್ರಷ್ಟಾಚಾರವನ್ನು ಕೇಂದ್ರ ಸರಕಾರವು ನಿರ್ಮೂಲನ ಮಾಡಿದೆಯೆಂದು ಒಬ್ಬೊಬ್ಬರೂ ಕೊರಳ ಅಪ/ಅಭಿಧಮನಿಯನ್ನು ಹಿಗ್ಗಿಸಿ ಮಾತನಾಡುತ್ತಿದ್ದರು. ಈ ದೇಶದಲ್ಲಿ ಇವೆರಡನ್ನು ನಿವಾರಿಸುವುದು ಅಸಾಧ್ಯವೆಂದು ಎಲ್ಲರೂ ಬಲ್ಲರು. ನಮ್ಮ ಕಾನೂನು ಪಾಲನೆ ಶಕ್ತವಾಗುವ ವರೆಗೆ ಯಾವ ದಿಟ್ಟ ಹೆಜ್ಜೆಯೂ ಒಂದು ಕುಂಟುಗಾಲಿನ ಓಟ ಇಲ್ಲವೇ ನಡಿಗೆಯಾದಿತೇ ವಿನಾ ಪ್ರಗತಿಯತ್ತ ಸಾಗದು. ಅದಕ್ಕೇ ಈ ದೇಶವು ಸುತ್ತಮುತ್ತಲಿನ ಕೆಲವು ಅಂದರೆ ಸಿಂಗಾಪುರ, ಜಪಾನ್ ಮುಂತಾದ ದೇಶಗಳ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್ ಮುಂತಾದ ಬಸವನಹುಳಗಳೊಂದಿಗೆ ನಾಯಕತ್ವದ ಪೈಪೋಟಿ ನಡೆಸುತ್ತಿದೆ. ವಿಶ್ವಕ್ಕೆ ಯೋಗದ ಹೆಸರಿನಲ್ಲಿ ದೈಹಿಕ ವ್ಯಾಯಾಮಗಳನ್ನು ಪ್ರದರ್ಶಿಸುತ್ತಿದೆ. ವಿಶ್ವದ ಮುಂದುವರಿದ ದೇಶಗಳಿಗೂ ತಮ್ಮದೇ ಆದ ಸಮಸ್ಯೆಗಳಿವೆಯಾದರೂ ಅವು ಈ ರೋಗರುಜಿನಗಳನ್ನು ಮೀರಿ ದಾರಿಸಾಗಿಸುತ್ತವೆ. ಮತ್ತು ವಿಶ್ವ ರಾಜಕಾರಣದಲ್ಲಿ ವ್ಯಾಪಾರೀ ತಂತ್ರವನ್ನು ಹೂಡಿ ಕಿಸೆತುಂಬಿಸಿಕೊಳ್ಳುತ್ತಿವೆ. (ಉದಾಹರಣೆಗೆ ಅಮೆರಿಕವು ಎಲ್ಲರಿಗೂ ಗೊತ್ತಿರುವಂತೆ ಶಸ್ತ್ರಾಸ್ತ್ರ ಮಾರಾಟದಲ್ಲಿ ನಿಪುಣ. ರಶ್ಯಾದ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಂದು ಸುಮಾರು 72 ಸಾವಿರ ಕೋಟಿ ರೂಪಾಯಿ ವ್ಯಾಪಾರಕ್ಕೆ ಒಪ್ಪಿಗೆ ಪಡೆದು ಹೋದರು. ಮತ್ತು ಪಾಕಿಸ್ತಾನದೊಂದಿಗೆ ಮಿಲಿಟರಿ ಕವಾಯತು ನಡೆಸಿದರು. ಬ್ರಿಟನ್ ಪ್ರಧಾನಿ ಥೆರೆಸಾ ಮೇ ಈಗ ಭಾರತಕ್ಕೆ ಬಂದು ಅದಕ್ಕೂ ಹೆಚ್ಚು ಅಂದರೆ ಸುಮಾರು 82 ಸಾವಿರ ಕೋಟಿ ರೂಪಾಯಿ ವ್ಯಾಪಾರವನ್ನು ಸಂಪಾದಿಸಿದರೂ ಭಾರತೀಯರಿಗೆ ವೀಸಾ ರಿಯಾಯಿತಿ ನೀಡುವ ಬಗ್ಗೆ ಯಾವುದೇ ಭರವಸೆ ನೀಡಲು ಒಪ್ಪಲಿಲ್ಲ. ನಾವು ಈ ಸಾವಿರಾರು ಕೋಟಿ ರೂಪಾಯಿಯ ರಕ್ಷಣಾ ಯಂತ್ರ-ತಂತ್ರಗಳ ಖರೀದಿಗೆ ಒಪ್ಪಿಕೊಂಡರೂ ನಮ್ಮಲ್ಲಿಂದ ಅಷ್ಟೇ ಪ್ರಮಾಣದ ರಫ್ತನ್ನು ವ್ಯವಸ್ಥೆಮಾಡಲು ಅಸಮರ್ಥರಾದೆವು. ಚೀನಾದೊಂದಿಗಂತೂ 20: 80 ಪ್ರಮಾಣದಲ್ಲಿ ನಮ್ಮ ರಫ್ತು-ಆಮದು ನಡೆಯುತ್ತಿದೆ. ಚೀನಾದ ವಸ್ತುಗಳನ್ನು ನಾವೆಷ್ಟೇ ಟೀಕೆ ಮಾಡಿದರೂ ಅವರ ವ್ಯಾಪಾರ ನಮ್ಮಲ್ಲಿ ಭರ್ಜರಿಯಾಗಿ ನಡೆಯುತ್ತಲೇ ಇದೆ. ನಾವು ನಡೆಸುವ ಒಟ್ಟು ವ್ಯವಹಾರವು ಚೀನಾದ ಒಟ್ಟು ಅಂತಾರಾಷ್ಟ್ರೀಯ ವ್ಯವಹಾರದ ಕೇವಲ ಶೇ. 2 ಎಂಬುದನ್ನು ನೆನಪಿಸಿಕೊಂಡರೆ ಅವರ ಜಾಗತಿಕ ವ್ಯವಹಾರದ ಗಾತ್ರ ಅರಿವಾದೀತು!)
ಇತರ ದೇಶಗಳನ್ನು ಹೊಗಳಿ ನಮ್ಮ ದೇಶವನ್ನು ಕಿರಿದಾಗಿಸುವ ಉದ್ದೇಶದಿಂದ ಹೀಗೆ ಹೇಳುತ್ತಿಲ್ಲ. ಬದಲಾಗಿ ವಾಸ್ತವಕ್ಕೆ ಬೆನ್ನು ಹಾಕಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡರೆ ಬೆನ್ನಿನ ಕಲೆಗೆ ಕಾರಣ ನಾವು ತಟ್ಟಿದ್ದರಿಂದ ಆದದ್ದೋ ಅಥವಾ ಬೇರೆಯವರು ಹೊಡೆದದ್ದರಿಂದ ಆದದ್ದೋ ಎಂಬುದೇ ಗೊತ್ತಾಗಲಿಕ್ಕಿಲ್ಲ. ದೇಶದ ರಾಜಕೀಯ ನೊಗವನ್ನು ಹೊತ್ತವರು ತಮ್ಮ ಸಾಧನೆಗಳಿಂದ ಕೊನೆಯ ಬಡವನಿಗೂ ಎಷ್ಟು ಸಹಾಯ ವಾಗಿದೆಯೆಂಬುದನ್ನು ಅಭ್ಯಸಿಸಬೇಕು- ಅನ್ ಟು ದಿ ಲಾಸ್ಟ್ ಎಂಬ ಹಾಗೆ.
ತುಘಲಕ್ ದಿಲ್ಲಿಯಿಂದ ದೇವಗಿರಿಗೆ ತನ್ನ ರಾಜಧಾನಿಯನ್ನು ವರ್ಗಾ ಯಿಸಹೊರಟ. ಸಾವಿರಾರು ಜನರು ಮನೆಮಠ ಬಿಟ್ಟು ಅವನೊಂದಿಗೆ ತೆರಳಿದರು. ಹಾದಿಯುದ್ದಕ್ಕೂ ನರಳಿದರು; ಬಹಳಷ್ಟು ಜನರು ಜೀವ ಕಳೆದುಕೊಂಡರು. ದೇವಗಿರಿ ತಲುಪಿದ ತುಘಲಕ್ ಅಲ್ಲಿ ಜಲಾಶ್ರಯ ಸಿಕ್ಕದೆ ಬಾಳಲಸಾಧ್ಯವಾದಾಗ ಮರಳಿ ದಿಲ್ಲಿಗೆ ಮುಖಮಾಡಿದ. ಮತ್ತೆ ಉಳಿದ ಅಷ್ಟೂ ಜನ ಅವನೊಂದಿಗೆ ಹೊರಟರು. ಪ್ರಯಾಣದಲ್ಲಿ ಎಲ್ಲ ಕಷ್ಟ-ಬವಣೆಗಳನ್ನು ಅನುಭವಿಸಿ ಜೀವ ತೆತ್ತರು. ಕೊನೆಗೆ ಆತನೊಬ್ಬನೇ ತನ್ನ ಕೆಲವೇ ಬೆಂಬಲಿಗರೊಂದಿಗೆ ದಿಲ್ಲಿ ತಲುಪಿದ ಕಥೆ ಕರಾಳ. ಚಲಾ ವಣೆಯ ನಾಣ್ಯಗಳನ್ನು ತ್ಯಜಿಸಿ ಚರ್ಮದ ನಾಣ್ಯವನ್ನು ಮಾಡಿದ ಕಥೆಯೂ ಹೀಗೆಯೇ. ಆ ಕಾಲದಲ್ಲಿ ಆತ ಮಾಡಿದ್ದೂ ನಭೂತೋ ನಭವಿಷ್ಯತಿ. ಅದು ತಪ್ಪೆಂದು ಹೇಳಬೇಕಾಗಿ ಬಂದದ್ದು ಆತನ ಭವಿಷ್ಯದ ಇತಿಹಾಸದ ದುರದೃಷ್ಟ. ನಮ್ಮ ಗತಿಯನ್ನೂ ಕಥೆಯನ್ನೂ ಭವಿಷ್ಯ ಹೀಗೆಯೇ ಹೇಳದಿದ್ದರೆ ಸಾಕು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News