ಸಂಸತ್ ಕಲಾಪ ಮುಂದೂಡಿಕೆ: ನಾಳೆ ಸಂಸತ್ ಹೊರಗೆ ಧರಣಿ ನಡೆಸಲು ವಿಪಕ್ಷಗಳ ನಿರ್ಧಾರ

Update: 2016-11-22 15:07 GMT

ಹೊಸದಿಲ್ಲಿ, ನ.22: ನೋಟು ಅಮಾನ್ಯ ನಿರ್ಧಾರದ ವಿಷಯದಲ್ಲಿ ಉಭಯ ಸದನಗಳಲ್ಲಿ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಈ ಮಧ್ಯೆ ಸರಕಾರದ ವಿರುದ್ಧ ದಾಳಿಯನ್ನು ತೀವ್ರಗೊಳಿಸುವ ಇರಾದೆಯಲ್ಲಿರುವ ವಿಪಕ್ಷಗಳು ಇಂದು (ಬುಧವಾರ) ಸಂಸತ್‌ನ ಹೊರಗೆ ಧರಣಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ನೋಟು ಅಮಾನ್ಯಗೊಳಿಸುವ ಸರಕಾರದ ನಿರ್ಧಾರವನ್ನು ಸಮರ್ಥಿಸಿ ಬಿಜೆಪಿ ಸಂಸದೀಯ ಪಕ್ಷ ನಿರ್ಣಯವನ್ನು ಅಂಗೀಕರಿಸಿದೆ. ಗೃಹ ಸಚಿವ ರಾಜನಾಥ್ ಸಿಂಗ್ ನಿರ್ಣಯ ಮಂಡಿಸಿದ್ದರು. ರಾಜ್ಯಸಭೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ನೋಟು ಅಮಾನ್ಯ ನಿರ್ಧಾರದ ಬಗ್ಗೆ ಪ್ರಸ್ತಾವಿಸಿದ ಬಿಎಸ್‌ಪಿ ನಾಯಕಿ ಮಾಯಾವತಿ, ಸರಕಾರ ಆರ್ಥಿಕ ತುರ್ತು ಪರಿಸ್ಥಿತಿಯ ಸನ್ನಿವೇಶ ಸೃಷ್ಟಿಸಿದೆ. ಜನರು ಸರದಿ ಸಾಲಿನಲ್ಲಿ ನಿಂತು ಬಸವಳಿದಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸದನಕ್ಕೆ ಕರೆಸಿಕೊಳ್ಳಬೇಕು ಎಂದರು. ಈ ವೇಳೆ ಗದ್ದಲ ಜೋರಾದ ಕಾರಣ ಕಲಾಪವನ್ನು 11.30 ಗಂಟೆಗೆ ಮುಂದೂಡಲಾಯಿತು. 11.30ಕ್ಕೆ ಸದನ ಮತ್ತೆ ಸಮಾವೇಶಗೊಂಡಾಗಲೂ ಗದ್ದಲ ಮುಂದುವರಿದ ಕಾರಣ ಕಾರ್ಯಕಲಾಪಕ್ಕೆ ವಿಘ್ನವಾಯಿತು. ಈ ವೇಳೆ ಮಾತಾಡಿದ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಚರ್ಚೆ ನಡೆಸಬೇಕು ಎಂಬ ಬೇಡಿಕೆಯಿತ್ತು. ಈಗ ಚರ್ಚೆ ಆರಂಭವಾಗಿದೆ. ಆದರೆ ಚರ್ಚೆಯಿಂದ ವಿಮುಖರಾಗುವುದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಸದನದ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ವಿಪಕ್ಷಗಳು ಚರ್ಚೆಗೆ ಸಿದ್ಧವಿದೆ. ಆದರೆ ಪ್ರಧಾನಿ ಸದನಕ್ಕೆ ಆಗಮಿಸಿ ಸದಸ್ಯರ ಹೇಳಿಕೆಗಳನ್ನು ಆಲಿಸಬೇಕು ಎಂದು ಹೇಳಿದರು. ಈ ವೇಳೆ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾದಾಗ ಕಲಾಪವನ್ನು 12 ಗಂಟೆಯವರೆಗೆ ಮುಂದೂಡಲಾಯಿತು. ಪ್ರಶ್ತೋತ್ತರ ಅವಧಿಗಾಗಿ 12.30ಕ್ಕೆ ಮತ್ತೆ ಸದನದ ಕಲಾಪ ಆರಂಭವಾಯಿತು. ಈ ವೇಳೆ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಜೆಡಿ(ಯು), ಸಿಪಿಐ ಮತ್ತು ಸಿಪಿಐ(ಎಂ) ಸೇರಿದಂತೆ ವಿಪಕ್ಷ ಸದಸ್ಯರು ತಮ್ಮ ಆಸನ ಬಿಟ್ಟೆದ್ದು ಸರಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ನೋಟು ಅಮಾನ್ಯಗೊಳಿಸಿದ ಕಾರಣದಿಂದ ದೇಶದಾದ್ಯಂತ ನಡೆದ ಸಾವು-ನೋವುಗಳಿಗೆ ಕೇಂದ್ರ ಸರಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಈ ಮಧ್ಯೆ , ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಯ ಕೊರತೆಯ ಬಗ್ಗೆ ಪ್ರಶ್ನೆ ಕೇಳುವಂತೆ ಸದನದ ಅಧ್ಯಕ್ಷ ಹಮೀದ್ ಅನ್ಸಾರಿ ಆರ್‌ಜೆಡಿ ಸದಸ್ಯ ಪ್ರೇಮ್‌ಚಂದ್ ಗುಪ್ತಾರಿಗೆ ಸೂಚಿಸಿದರು. ಆದರೆ ವಿಪಕ್ಷ ಸದಸ್ಯರ ಗದ್ದಲದಲ್ಲಿ ಇದು ಕೇಳಲೇ ಇಲ್ಲ. ನೋಟು ಅಮಾನ್ಯ ನಿರ್ಧಾರದ ಬಳಿಕ ದೇಶದಾದ್ಯಂತ ಇದುವರೆಗೆ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು ಇದಕ್ಕೆ ಯಾರು ಹೊಣೆ ಮತ್ತು ಸರಕಾರ ಏನು ಮಾಡುತ್ತಿದೆ ಎಂದು ಜೆಡಿ(ಯು) ನಾಯಕ ಶರದ್ ಯಾದವ್ ಪ್ರಶ್ನಿಸಿದರು. ಕೋಲಾಹಲ, ಗದ್ದಲ ಜೋರಾದಾಗ ಅನ್ಸಾರಿ ಸದನದ ಕಲಾಪವನ್ನು ಅಪರಾಹ್ನ 2ಕ್ಕೆ ಮುಂದೂಡಿದರು.

ಅಪರಾಹ್ನ ಸದನ ಸಮಾವೇಗೊಂಡಾಗಲೂ ವಿಪಕ್ಷಗಳ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

  

ಲೋಕಸಭೆಯಲ್ಲಿ: ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಆರಂಭಿಸಿದಾಗ ಸದನ ಗದ್ದಲದ ಗೂಡಾಯಿತು. ಈ ಮಧ್ಯೆ ಮಾತನಾಡಿದ ಸಚಿವ ಕಿರಣ್ ರಿಜಿಜು, ನೋಟು ಅಮಾನ್ಯಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಕಲ್ಲು ತೂರಾಟದ ಘಟನೆ ಬಹುತೇಕ ಸ್ಥಗಿತಗೊಂಡಿದೆ. ಗಡಿಯಾಚೆಗಿಂದ ಉಗ್ರರಿಗೆ ಹರಿದು ಬರುತ್ತಿದ್ದ ಹಣಕಾಸಿನ ನೆರವು ಬತ್ತಿಹೋಗಿದೆ ಎಂದರು. ಆದರೆ ವಿಪಕ್ಷ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದಾಗ ಸ್ಪೀಕರ್ ಸುಮಿತ್ರಾ ಮಹಾಜನ್ , ಸಚಿವರು ಹೇಳಿಕೆ ನೀಡುತ್ತಿರುವಾಗ ಅಡ್ಡಿ ಪಡಿಸುವುದು ಸರಿಯಲ್ಲ ಎಂದರು. ಜನರ ಸಮಸ್ಯೆಯನ್ನು ಪ್ರಸ್ತುತಪಡಿಸುವ ಕ್ರಮ ಇದಲ್ಲ. ಚರ್ಚೆ ನಡೆಸಿ ಎಂದು ವಿಪಕ್ಷ ಸದಸ್ಯರಿಗೆ ತಿಳಿಸಿದರು. ಆದರೆ ವಿಪಕ್ಷಗಳು ಘೋಷಣೆ ಮುಂದುವರಿಸಿದಾಗ, ವಿಪಕ್ಷ ಸದಸ್ಯರ ವರ್ತನೆಯಿಂದ ನೋವಾಗಿದೆ. ಗತ್ಯಂತರವಿಲ್ಲದೆ ಕಲಾಪವನ್ನು 12 ಗಂಟೆಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ಪ್ರಕಟಿಸಿದರು. 12 ಗಂಟೆಗೆ ಕಲಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ನೋಟು ಅಮಾನ್ಯಗೊಳಿಸಿದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ವಿಪಕ್ಷಗಳು ಚರ್ಚೆಗೆ ಸಿದ್ಧವಾಗಿವೆ. ಪ್ರಧಾನಿ ಕೂಡಾ ಸದನದಲ್ಲಿ ಉಪಸ್ಥಿತರಿರಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್, ವಿಪಕ್ಷಗಳು ಚರ್ಚೆಯಿಂದ ಪಲಾಯನ ಮಾಡುತ್ತಿವೆ ಎಂದು ಟೀಕಿಸಿದರು. ಸರಕಾರ ಚರ್ಚೆಗೆ ಸಿದ್ಧವಿದೆ ಎಂದ ಅವರು, ತಮ್ಮ ಆಸನಕ್ಕೆ ತೆರಳುವಂತೆ ವಿಪಕ್ಷ ಸದಸ್ಯರನ್ನು ಮನವಿ ಮಾಡಿಕೊಂಡರು.

ಶೂನ್ಯ ವೇಳೆ ಆರಂಭವಾದಾಗಲೂ ವಿಪಕ್ಷ ಸದಸ್ಯರ ಘೋಷಣೆ ಮುಂದುವರಿಯಿತು. ನೋಟು ಅಮಾನ್ಯ ನಿರ್ಧಾರದ ಕುರಿತ ಚರ್ಚೆಯನ್ನು ಮುಂದೂಡಬೇಕು ಎಂಬ ಬಗ್ಗೆ ವಿಪಕ್ಷಗಳು ನಿರ್ಣಯ ಮಂಡಿಸಲು ಮುಂದಾದಾಗ ಸ್ಪೀಕರ್ ಅವಕಾಶ ನೀಡಲಿಲ್ಲ. ಗದ್ದಲ ಜೋರಾದಾಗ ಸದನದ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News