ಮೊಹಾಲಿ ಟೆಸ್ಟ್‌ಗೆ ಬಟ್ಲರ್ ಪುನರಾಗಮನ?

Update: 2016-11-22 18:15 GMT

ವಿಶಾಖಪಟ್ಟಣ, ನ.22: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ವಾಪಸಾಗಲು ಸಜ್ಜಾಗುತ್ತಿದ್ದಾರೆ.

ವರ್ಷದ ಹಿಂದೆ ವಿಕೆಟ್‌ಕೀಪರ್ ಸ್ಥಾನ ಕಳೆದುಕೊಂಡಿದ್ದ ಬಟ್ಲರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಏಕೈಕ ಪಂದ್ಯ ಆಡಿದ್ದರು. ಇಂಗ್ಲೆಂಡ್ ಮ್ಯಾನೇಜ್‌ಮೆಂಟ್ ಬಟ್ಲರ್ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದೆ. ಹೀಗಾಗಿ ಮೊಹಾಲಿಯಲ್ಲಿ ನಡೆಯಲಿರುವ ಮೂರನೆ ಟೆಸ್ಟ್‌ಗೆ ಬಟ್ಲರ್ ತಂಡಕ್ಕೆ ವಾಪಸಾಗುವ ನಿರೀಕ್ಷೆಯಿದೆ.

 ಬಟ್ಲರ್‌ಗೆ ಬೆನ್ ಡೆಕೆಟ್ ಸ್ಥಾನ ತೆರವು ಮಾಡಬೇಕಾಗಿದೆ. ಇಂಗ್ಲೆಂಡ್ ಕೋಚ್ ಟ್ರೆವರ್ ಬೆಲಿಸ್ ಡೆಕೆಟ್‌ರ ನೈಜ ಪ್ರತಿಭೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಭಾರತ ವಿರುದ್ಧ ಮೂರು ಇನಿಂಗ್ಸ್‌ನಲ್ಲಿ ಕೇವಲ 18 ರನ್ ಗಳಿಸಿರುವ ಡೆಕೆಟ್ ಭಾರತದ ಆಫ್ ಸ್ಪಿನ್ನರ್ ಅಶ್ವಿನ್ ದಾಳಿಯನ್ನು ಎದುರಿಸಲು ಎಡವುತ್ತಿದ್ದಾರೆ. ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದಲ್ಲಿ ಕೇವಲ ಇಬ್ಬರು ಮೀಸಲು ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರುಗಳೆಂದರೆ: ಗ್ಯಾರಿ ಬ್ಯಾಲನ್ಸ್ ಹಾಗೂ ಬಟ್ಲರ್. ಬ್ಯಾಲನ್ಸ್‌ರನ್ನು ಬಾಂಗ್ಲಾದೇಶ ಪ್ರವಾಸದ ಬಳಿಕ ತಂಡದಿಂದ ಕೈಬಿಡಲಾಗಿತ್ತು.

ಬಟ್ಲರ್ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ, ಅವರು ಕಳೆದ 12 ಟೆಸ್ಟ್ ಇನಿಂಗ್ಸ್‌ನಲ್ಲಿ ಒಮ್ಮೆ ಮಾತ್ರ 30 ರನ್ ಗಳಿಸಿದ್ದಾರೆ. ಈ ವೇಳೆ ಅವರು ಗಳಿಸಿದ ಗರಿಷ್ಠ ಸ್ಕೋರ್ 42. ಬಟ್ಲರ್ ಮ್ಯಾಚ್‌ಪ್ರಾಕ್ಟೀಸ್ ಕೊರತೆ ಎದುರಿಸುತ್ತಿದ್ದಾರೆ. ತಿಂಗಳ ಹಿಂದೆ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News