ಯುಎಇ: ಊಟ, ವಸತಿಗೆ ಹಣವಿಲ್ಲದೆ 8 ತಿಂಗಳು ಟೆರೇಸ್‌ನಲ್ಲೇ ಕಳೆದ ಭಾರತೀಯ ಕಾರ್ಮಿಕ

Update: 2016-11-23 15:30 GMT

ಅಬುಧಾಬಿ, ನ. 23: ಯುಎಇಯ ಅಜ್ಮಾನ್ ನಗರದಲ್ಲಿ ಭಾರತೀಯ ಕಾರ್ಮಿಕರೊಬ್ಬರು ಎಂಟು ತಿಂಗಳುಗಳ ಕಾಲ ಕೆಲಸ ಮತ್ತು ಹಣವಿಲ್ಲದೆ ಕಟ್ಟಡವೊಂದರ ಟೆರೇಸ್‌ನಲ್ಲಿ ಕಾಲ ಕಳೆದ ಅಮಾನವೀಯ ಘಟನೆ ವರದಿಯಾಗಿದೆ. ಅವರ ಉದ್ಯೋಗದಾತನು ಸಂಬಳ ನೀಡದಿರುವುದು ಹಾಗೂ ಪಾಸ್‌ಪೋರ್ಟನ್ನು ಹಿಂದಿರುಗಿಸದಿರುವುದು ಇದಕ್ಕೆ ಕಾರಣವಾಗಿದೆ.

ಕೇರಳದ ಕೊಲ್ಲಮ್‌ನ ಸಜೀವ್ ರಾಜನ್ ಶಾರ್ಜಾದಲ್ಲಿರುವ ಕಟ್ಟಡ ನಿರ್ಮಾಣ ಕಂಪೆನಿಯೊಂದರಲ್ಲಿ ಇಲೆಕ್ಟ್ರೀಶಿಯನ್ ಆಗಿ ಕೆಲಸ ಮಾಡುತ್ತಿದ್ದ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರು ಒಂಟಿ ಕಣ್ಣಿನ ಅಂಗವಿಕಲರೂ ಆಗಿದ್ದಾರೆ.

''ನಾನು ಎರಡು ವರ್ಷಗಳ ಕಾಲ ಕಂಪೆನಿ ನೀಡಿದ ಮನೆಯಲ್ಲಿ ವಾಸವಾಗಿದ್ದೇನೆ. ಮಾರ್ಚ್ 11ರಂದು ನನ್ನ ಗುತ್ತಿಗೆ ಕೊನೆಗೊಂಡಿದೆ. ನಾನು ಮನೆಗೆ ಹೋಗಲು ಬಯಸಿದ್ದೆ. ನನಗೆ ತಿಂಗಳಿಗೆ 900 ದಿರ್ಹಮ್ (ಸುಮಾರು 16,800 ರೂಪಾಯಿ) ಸಂಬಳ ನೀಡುತ್ತಿದ್ದರು. ಆದರೆ, ಅದು ನನಗೆ ಸಾಕಾಗುತ್ತಿರಲಿಲ್ಲ'' ಎಂದು 'ಖಲೀಜ್ ಟೈಮ್ಸ್' ಜೊತೆ ಮಾತನಾಡಿದ ರಾಜನ್ ಹೇಳಿದರು.

 ಆರು ಮಹಡಿಗಳ ಕಟ್ಟಡದ ಟೆರೇಸ್‌ನಲ್ಲಿ ಅವರು 237 ದಿನಗಳನ್ನು ಕಳೆದಿದ್ದಾರೆ. ಅವರಲ್ಲಿ ಊಟಕ್ಕೂ ಹಣವಿರಲಿಲ್ಲ. ಸಹ ಕಾರ್ಮಿಕರು, ಸಮೀಪದ ಅಂಗಡಿಗಳವರು ಅವರಿಗೆ ನೆರವು ನೀಡಿದ್ದಾರೆ. ಸ್ಥಳೀಯ ರೆಸ್ಟೋರೆಂಟೊಂದು ಅವರಿಗೆ ಉಚಿತವಾಗಿ ಊಟ ನೀಡುತ್ತಿತ್ತು.

''ನನ್ನಲ್ಲಿ ಊಟಕ್ಕೆ ಹಣವಿಲ್ಲ. ರೆಸ್ಟರಾಂಟ್ ಮಾಲೀಕರೊಬ್ಬರು ನನಗೆ ಆಹಾರ ನೀಡುತ್ತಾರೆ. ಒಬ್ಬ ವ್ಯಕ್ತಿ ನನಗೆ ಬೆಳಗ್ಗಿನ ಉಪಹಾರಕ್ಕಾಗಿ ಪ್ರತಿ ದಿನ 3 ದಿರ್ಹಮ್ ನೀಡುತ್ತಾರೆ'' ಎಂದು ರಾಜನ್ ಹೇಳುತ್ತಾರೆ.

''ದಯವಿಟ್ಟು ನನ್ನನ್ನು ಮನೆಗೆ ಕಳುಹಿಸಿ. ಇಲ್ಲದಿದ್ದರೆ ನಾನು ಇಲ್ಲೇ ಸಾಯುತ್ತೇನೆ. ನನಗೆ ಆಹಾರ ಮತ್ತು ವಸತಿಗೆ ಹಣವಿಲ್ಲ'' ಎಂದರು.
ತಾನು ಹಲವಾರು ಬಾರಿ ಭಾರತೀಯ ಕಾನ್ಸುಲೇಟ್, ಸಮುದಾಯ ಸಂಘಟನೆಗಳು ಹಾಗೂ ಇತರರನ್ನು ಸಂಪರ್ಕಿಸಿದ್ದೇನೆ ಎಂದು ಹೇಳಿದ ಅವರು, ''ಆದರೆ, ನನಗೆ ಯಾರೂ ಸಹಾಯ ಮಾಡಲಿಲ್ಲ'' ಎಂದರು.

ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಬಳಿಕ ಅವರಿಗೆ ಸಹಾಯ ಮಾಡಲು ಹಲವರು ಮುಂದೆ ಬಂದಿದ್ದಾರೆ.


ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ: ಮಾಲೀಕ

ಸಜೀವ್ ರಾಜನ್‌ರನ್ನು ಸ್ವದೇಶಕ್ಕೆ ಕಳುಹಿಸಲು 'ತನ್ನಿಂದಾಗುವ ಎಲ್ಲ ಪ್ರಯತ್ನಗಳನ್ನು' ಮಾಡುತ್ತಿರುವುದಾಗಿ ಅವರ ಉದ್ಯೋಗದಾತ ಪಂಜಾಬ್‌ನ ಎಸ್. ಸಿಂಗ್ 'ಖಲೀಜ್ ಟೈಮ್ಸ್'ಗೆ ಹೇಳಿದ್ದಾರೆ.
''ಕಾರ್ಮಿಕ ನ್ಯಾಯಾಲಯದ ವಿಚಾರಣೆಗೆ ಕಾಯುವುದು ಬಿಟ್ಟು ಬೇರೆ ಆಯ್ಕೆಯಿಲ್ಲ. ವಿಚಾರಣೆ ಯಾವಾಗ ನಡೆಯುತ್ತದೆ ಎಂದು ನನಗೆ ಗೊತ್ತಿಲ್ಲ'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News