ಐಪಿಟಿಎಲ್: ಫೆಡರರ್, ನಡಾಲ್, ಜೊಕೊವಿಕ್ ಅಲಭ್ಯ

Update: 2016-11-25 17:58 GMT

 ಹೊಸದಿಲ್ಲಿ, ನ.25: ವಿಶ್ವದ ನಾಲ್ವರು ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ನೊವಾಕ್ ಜೊಕೊವಿಕ್, ಆ್ಯಂಡಿ ಮರ್ರೆ ಹಾಗೂ ರಫೆಲ್ ನಡಾಲ್ ಮುಂಬರುವ ಇಂಡಿಯನ್ ಪ್ರೀಮಿಯರ್ ಟೆನಿಸ್ ಲೀಗ್(ಐಪಿಟಿಎಲ್)ನಲ್ಲಿ ಭಾಗವಹಿಸುತ್ತಿಲ್ಲ. ಐಪಿಟಿಎಲ್ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದೆ.

ಲೀಗ್ ಯಾವುದೇ ಹಣಕಾಸು ಸಮಸ್ಯೆ ಎದುರಿಸುತ್ತಿಲ್ಲ ಎಂದು ಲೀಗ್‌ನ ಸಂಸ್ಥಾಪಕ ಮಹೇಶ್ ಭೂಪತಿ ಹೇಳಿದ್ದಾರೆ.

 ಭಾರತದ ಪರ ಮೊದಲ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಭೂಪತಿ ಐಪಿಟಿಎಲ್‌ನ್ನು ಆರಂಭಿಸಿದ್ದರು. ಕಳೆದ ವರ್ಷ ಇಂಡಿಯನ್ ಏಸೆಸ್ ತಂಡದ ನಡಾಲ್ ಹಾಗೂ ಯುಎಇ ರಾಯಲ್ಸ್ ತಂಡದ ಫೆಡರರ್ ನಡುವೆ ದಿಲ್ಲಿಯಲ್ಲಿ ನಡೆದ ಐಪಿಟಿಎಲ್ ಪಂದ್ಯ ಹೆಚ್ಚು ಆಕರ್ಷಣೆ ಪಡೆದಿತ್ತು.

 ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಈ ವರ್ಷ ಅಂತಹ ಆಕರ್ಷಣೀಯ ಸ್ಪರ್ಧೆಗಳು ಇರುವುದಿಲ್ಲ. ಸ್ಪೇನ್‌ನ ವಿಶ್ವದ ನಂ.28ನೆ ಆಟಗಾರ ಫೆಸಿಲಿಯಾನೊ ಲೊಪೆಝ್ ಭಾರತೀಯ ತಂಡದಲ್ಲಿರುವ ಗರಿಷ್ಠ ರ್ಯಾಂಕಿನ ಆಟಗಾರ.

ಈ ಋತುವಿನಲ್ಲಿ ನಡಾಲ್ ಹಾಗೂ ಫೆಡರರ್ ಇಬ್ಬರೂ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. 2016ರ ಋತುವಿನಲ್ಲಿ ಹೆಚ್ಚು ಪಂದ್ಯವನ್ನು ಆಡಿಲ್ಲ. ಫೆಡರರ್ ವಿಂಬಲ್ಡನ್ ಬಳಿಕ ಯಾವುದೇ ಪಂದ್ಯ ಆಡಿಲ್ಲ. ದುಬೈನಲ್ಲಿ ನಡೆದ ಮೊದಲ ಆವೃತ್ತಿಯ ಐಪಿಟಿಎಲ್‌ನಲ್ಲಿ ಆಡಿದ್ದ ಜೊಕೊವಿಕ್ 2015ರ ಆವೃತ್ತಿಯಲ್ಲಿ ಭಾಗವಹಿಸಿರಲಿಲ್ಲ.

‘‘ನಾಲ್ವರು ದಿಗ್ಗಜ ಆಟಗಾರರಲ್ಲಿ ಒಬ್ಬರು ಖಂಡಿತಾ ಬರುತ್ತಾರೆ. ನಾವು ಇಂದು ಎಲ್ಲವನ್ನೂ ಬಹಿರಂಗಪಡಿಸಲಾರೆವು.ಮುಂದಿನ 48 ಗಂಟೆಗಳಲ್ಲಿ ತಂಡವನ್ನು ಪ್ರಕಟಿಸುತ್ತೇವೆ’’ ಎಂದು ಭೂಪತಿ ಹೇಳಿದ್ದಾರೆ.

 ಕೆಲವು ಸ್ಟಾರ್ ಆಟಗಾರರು ಲೀಗ್‌ನಿಂದ ಹೊರಗುಳಿಯಲು ವೇತನ ವಿಷಯವೇ ಕಾರಣ ಎಂದು ವರದಿಯಾಗಿದೆ. ಆದರೆ, ಭೂಪತಿ ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

‘‘ಕಳೆದ ವರ್ಷ ಆಡಿರುವ ಎಲ್ಲ ಆಟಗಾರರೂ ಈ ಬಾರಿ ಆಡುತ್ತಾರೆ. ನಮ್ಮಲ್ಲಿ ಆಟಗಾರರ ದೊಡ್ಡ ಪಟ್ಟಿಯೇ ಇದೆ. ಆದರೆ, ಎಲ್ಲರಿಗೂ ಭಾರತಕ್ಕೆ ಬರಲು ಸಾಧ್ಯವಿಲ್ಲ’’ ಎಂದು ಭೂಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News