ಶಾಲೆಯಲ್ಲೇ ಇದ್ದ ಪುಸ್ತಕ ಮನೆಯಿಂದ ತರಲು ವಿದ್ಯಾರ್ಥಿಯನ್ನು 5 ಕಿಮೀ ನಡೆಸಿದ ಶಿಕ್ಷಕಿ !
ಬೆಂಗಳೂರು,ನ. 29: ‘ಮನೆಯಲ್ಲಿಯೇ ಮರೆತು ಬಂದಿದ್ದ ’ನೋಟ್ ಪುಸ್ತಕವನ್ನು ತರಲು 13ರ ಹರೆಯದ ವಿದ್ಯಾರ್ಥಿಯನ್ನು ಶಿಕ್ಷಕಿಯು ಮನೆಗೆ ಕಳುಹಿಸಿದ್ದ ಘಟನೆ ಶುಕ್ರವಾರ ಇಲ್ಲಿಯ ಸಾಂದೀಪನಿ ನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದಿದೆ. ವಿಷಯವೆಂದರೆ ಆ ಹುಡುಗ ಶಿಕ್ಷಕಿಯ ಆಜ್ಞೆಯನ್ನು ಪಾಲಿಸಲು ಬರೋಬ್ಬರಿ ಐದು ಕಿ.ಮೀ.ದೂರವನ್ನು ನಡೆದಿದ್ದಾನೆ. ಮರುದಿನ ಆ ನೋಟ್‌ಪುಸ್ತಕ ಆತನ ತರಗತಿಯಲ್ಲಿಯೇ ಸಿಕ್ಕಿದೆ!
ತನ್ನ ಮಗನನ್ನು ಶಾಲೆಯು ನಡೆಸಿಕೊಂಡಿರುವ ರೀತಿಯನ್ನು ಬಲವಾಗಿ ಆಕ್ಷೇಪಿಸಿರುವ ವಿದ್ಯಾರ್ಥಿಯ ತಂದೆ ಶಂಕರ ಶಿಂಧೆ ಅವರು ಶಾಲೆಯ ಅಧಿಕಾರಿಗಳ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಕ್ಲಾಸ್‌ವರ್ಕ್ ನೋಟ್‌ಪುಸ್ತಕ ತರಗತಿಯಲ್ಲಿಯೇ ಇದೆಯೆಂದು ಬಾಲಕ ಪರಿಪರಿ ಯಾಗಿ ಶಿಕ್ಷಕಿಗೆ ಹೇಳಿದ್ದರೂ ಅದನ್ನು ಆಕೆ ಕಿವಿಗೇ ಹಾಕಿಕೊಂಡಿರಲಿಲ್ಲ. ಕಳೆದ ತಿಂಗಳಷ್ಟೇ ಬಾಲಕ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದು, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾನೆ. ಆತನನ್ನು ಮನೆಯವರೇ ಪ್ರತಿದಿನ ಶಾಲೆಗೆ ಬಿಡುತ್ತಿದ್ದಾರೆ. ಅಂತಹುದರಲ್ಲಿ ಬಾಲಕ ಈ ಶಿಕ್ಷೆ ಅನುಭವಿಸಿದ್ದಾನೆ. ನಡೆದು ನಡೆದು ಪಾದಗಳು ಬಾತಿದ್ದ ಬಾಲಕನನ್ನು ಶಾಲೆಗೆ ಮರಳಿ ಕರೆತಂದಿದ್ದ ಶಿಂದೆಯವರ ಆಕ್ರೋಶಕ್ಕೆ ಶಿಕ್ಷಕಿ,ಹುಡುಗನ ಮನೆ ಅಷ್ಟು ದೂರವಿದೆ ಎಂದು ತನಗೆ ಗೊತ್ತಿರಲಿಲ್ಲ ಎಂದು ಕೂಲಾಗಿ ಉತ್ತರಿಸಿದ್ದಾಳೆ!
ಶಾಲಾ ಆಡಳಿತಕ್ಕೆ ಸಮನ್ಸ್ ಕಳುಹಿಸುವುದಾಗಿ ಮತ್ತು ಘಟನೆಯ ಕುರಿತು ವಿಚಾರಣೆ ನಡೆಸುವುದಾಗಿ ಆಯೋಗದ ಸದಸ್ಯ ವೈ.ಮರಿಸ್ವಾಮಿ ತಿಳಿಸಿದ್ದಾರೆ. ಶಾಲೆಯ ಕ್ರಮವು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣೆ ನೀತಿಗೆ ವಿರುದ್ಧವಾಗಿದೆಯೆಂದು ಅವರು ಕಿಡಿಕಾರಿದ್ದಾರೆ.
ಶಾಲೆಯು ವಿದ್ಯಾರ್ಥಿಯನ್ನು ದಂಡಿಸುವ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯ ಕಲಂ 17ನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮಕ್ಕಳ ಹಕ್ಕುಗಳ ತಜ್ಞರು ,ಶಿಕ್ಷಕಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.