ಬ್ಯಾಂಕ್‌ನಲ್ಲಿ ಹಣ ದೊರೆಯದೆ ಗ್ರಾಮಸ್ಥರಿಂದ ರಸ್ತೆ ತಡೆ

Update: 2016-12-01 14:29 GMT

ಹೊಸದಿಲ್ಲಿ, ಡಿ.1: ನೋಟು ರದ್ದತಿಗೊಂಡು 22 ದಿನ ಕಳೆದರೂ, ಬ್ಯಾಂಕ್‌ಗಳಲ್ಲಿ ಹಣದ ಕೊರತೆಯಿಂದ ಕಂಗೆಟ್ಟ ಬಿಲಾಸ್ಪುರ ಗ್ರಾಮಸ್ಥರು ಗುರುವಾರ ನೊಯ್ಡ-ಸಿಕಂದರಾಬಾದ್ ರಸ್ತೆ ತಡೆದಿದ್ದಾರೆ. ಇದರಿಂದ ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ಧನ್ಕೌರ್‌ನ ಮಂಡಿ ಶ್ಯಾಂ ನಗರದಲ್ಲಿ ಬ್ಯಾಂಕ್‌ಗಳು ‘ನಗದು ಇಲ್ಲ’ ಎಂಬ ಸೂಚನೆಯನ್ನು ಪ್ರದರ್ಶಿಸಿದವು. ಅಲ್ಲಿಗೆ ತಲುಪಿದ ಗ್ರಾಮಸ್ಥರು ಆಕ್ರೋಶಗೊಂಡರು.

ಗ್ರಾಮಸ್ಥರು ಬಳಿಕ ಬ್ಯಾಂಕ್‌ನ ಬಾಗಿಲನ್ನು ಹೊರಗಿನಿಂದ ಹಾಕಿಕೊಂಡು ಪ್ರತಿಭಟನೆ ನಡೆಸಿದರು. ಕೆಲವರು ನೊಯ್ಡ-ಸಿಕಂದರಾಬಾದ್ ರಸ್ತೆಯನ್ನು ತಡೆದರು. ಒಂದುವರೆ ತಾಸಿನ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನಿಸಿದರು. ಬಳಿಕ ರಸ್ತೆ ತಡೆಯನ್ನು ತೆರವುಗೊಳಿಸಲಾಯಿತೆಂದು ಸ್ಥಳೀಯರು ವಿವರಿಸಿದ್ದಾರೆ.

ತಾನು ರೂ. 2 ಸಾವಿರ ಹಿಂದೆಗೆಯುವುದಕ್ಕಾಗಿ ಮೂರು ದಿನಗಳಿಂದ ಬ್ಯಾಂಕ್‌ಗೆ ಬರುತ್ತಿದ್ದೇನೆ. ಆದರೆ, ತನ್ನಿಂದ ಹಣ ಪಡೆಯಲು ಸಾಧ್ಯವಾಗಲಿಲ್ಲ. ತಮಗೆ ನಗದು ಸಿಗುತ್ತಿಲ್ಲವೆಂದು ಬ್ಯಾಂಕ್‌ಗಳು ಪ್ರತಿಪಾದಿಸುತ್ತಿದೆ. ಎಟಿಎಂಗಳಲ್ಲೂ ಹಣವಿಲ್ಲವೆಂದು ಧರಂ ಭಾಟಿ ಎಂಬ ಗ್ರಾಮಸ್ಥ ತಿಳಿಸಿದ್ದಾನೆ.

ಬ್ಯಾಂಕಿನ ಅಧಿಕಾರಿಗಳು ತಮ್ಮ ಪರಿಚಯಸ್ಥರಿಗೆ ಹಣ ಕೊಡುತ್ತಿದ್ದಾರೆ. ತಾಸುಗಟ್ಟಲೆ ಸರತಿಯ ಸಾಲಿನಲ್ಲಿ ನಿಂತವರನ್ನು ಹಣವಿಲ್ಲವೆಂದು ತಿಳಿಸಿ ಹಿಂದೆ ಕಳುಹಿಸುತ್ತಿದ್ದಾರೆಂದು ಇನ್ನೊಬ್ಬ ಗ್ರಾಮಸ್ಥ ರಾಜೆ ಎಂಬಾತ ಆರೋಪಿಸಿದ್ದಾನೆ.

ನೊಯ್ಡದ ಡಿಎಂ ಕ್ಯಾಂಪ್ ಕಚೇರಿಯಲ್ಲಿ ಇಂದು ನಡೆದ ಸಭೆಯೊಂದರಲ್ಲಿ ಕೆಲವು ಕೈಗಾರಿಕೋದ್ಯಮಿಗಳು, ನೋಟು ರದ್ದತಿಯಿಂದ ಉಂಟಾಗಿರುವ ಸಮಸ್ಯೆಯನ್ನು ಜಿಲ್ಲಾ ದಂಡಾಧಿಕಾರಿ ಎನ್.ಪಿ.ಸಿಂಗ್‌ರ ಮುಂದೆ ತೋಡಿಕೊಂಡಿದ್ದಾರೆ.

ಸಣ್ಣ ಕೈಗಾರಿಕೆಗಳ ಉತ್ಪಾದನೆ ಬಾಧಿತವಾಗಿದೆ. ಸರಕಾರವು ಚಾಲ್ತಿ ಖಾತೆಯಿಂದ ರೂ. 50 ಸಾವಿರ ಹಿಂದೆಗೆಯಲು ಅವಕಾಶ ನೀಡಿದ್ದರೂ, ಬ್ಯಾಂಕ್ ಅಧಿಕಾರಿಗಳು ಹಣವಿಲ್ಲವೆಂಬ ಕಾರಣ ನೀಡಿ ಅದಕ್ಕೆ ನಿರಾಕರಿಸುತ್ತಿದ್ದಾರೆಂದು ಅವರು ದೂರಿದ್ದಾರೆ.
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News