ರಾಹುಲ್ ಗಾಂಧಿ ವಿರುದ್ಧ ಸುಳ್ಳು ಹರಡುವಲ್ಲಿ ಬಿಜೆಪಿ ನಿರತವಾಗಿದೆ: ಪ್ರಿಯಾಂಕಾ ಗಾಂಧಿ

Update: 2024-05-08 17:26 GMT

ಪ್ರಿಯಾಂಕಾ ಗಾಂಧಿ | PC : PTI  

ರಾಯ್‌ಬರೇಲಿ : ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ಸುಳ್ಳುಗಳನ್ನು ಹರಡುವುದರಲ್ಲಿ ತೊಡಗಿಕೊಂಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಅದು ಧರ್ಮ, ಜಾತಿ ಹಾಗೂ ದೇವಾಲಯ-ಮಸೀದಿ ಕುರಿತು ಮಾತನಾಡುತ್ತಿದೆ. ಆದರೆ, ಜನರ ನಿಜವಾದ ಸಮಸ್ಯೆ ಕುರಿತು ಮಾತನಾಡುತ್ತಿಲ್ಲ ಎಂದರು.

ತಮ್ಮ ಕುಟುಂಬದ ಭದ್ರ ಕೋಟೆ ರಾಯ್‌ಬರೇಲಿಯಲ್ಲಿ ತನ್ನ ಸಹೋದರ ರಾಹುಲ್ ಗಾಂಧಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ರಾಯ್‌ಬರೇಲಿಯ ಜನರು ನಾಯಕರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು.

‘‘ಇಂದಿರಾಜಿ (ಇಂದಿರಾ ಗಾಂಧಿ) ಅವರ ಕೆಲವು ನೀತಿಗಳನ್ನು ಇಷ್ಟಪಡದೇ ಇದ್ದಾಗ, ಜನರು ಅವರನ್ನು ಕೂಡ ಸೋಲಿಸಿದರು. ಆದರೆ, ಇಂದಿರಾ ಕೋಪಗೊಳ್ಳದೆ ಆತ್ಮಾವಲೋಕನ ಮಾಡಿಕೊಂಡರು. ನೀವು ಮತ್ತೆ ಅವರನ್ನು ಆಯ್ಕೆ ಮಾಡಿದಿರಿ. ಇದು ನಾಯಕರನ್ನು ಅರ್ಥ ಮಾಡಿಕೊಳ್ಳುವ ರಾಯಬರೇಲಿ ಜನರ ವಿಶೇಷತೆ’’ ಎಂದು ರಾಯಬರೇಲಿ ಲೋಕಸಭಾ ಕ್ಷೇತ್ರದ ತುಲ್ವಾಸಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.

ಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಬಯಸಿದೆ. ಆದರೆ, ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂದು ತಿಳಿದಾಗ, ಪ್ರಧಾನಿ ಅವರು ಅಂತಹ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದರು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದರು.

ತನ್ನ ಪಕ್ಷ ರಾಯ್‌ಬರೇಲಿ ಜನರೊಂದಿಗಿನ 100 ವರ್ಷದ ಸಂಬಂಧ ಹೊಸ ಯುಗಕ್ಕೆ ಪ್ರವೇಶಿಸಿದೆ. ರಾಯಬರೇಲಿ ಲೋಕಸಭಾ ಕ್ಷೇತ್ರದ ಜನರು ಕಾಂಗ್ರೆಸ್ ನಾಯಕರ ನಾಯಕತ್ವಕ್ಕೆ ಮತ್ತೊಮ್ಮೆ ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.

‘‘ರಾಹುಲ್ ಗಾಂಧಿ ಅವರು ಈಗ ಅದಾನಿ, ಅಂಬಾನಿ ಅವರ ಹೆಸರು ಎತ್ತುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಪ್ರತಿದಿನ ಅದಾನಿ, ಅಂಬಾನಿ ಕುರಿತು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಅದಾನಿ, ಅಂಬಾನಿ ಅವರ ಕುರಿತ ಸತ್ಯವನ್ನು ಪ್ರತಿದಿನ ಜನರ ಮುಂದಿರಿಸುತ್ತಿದ್ದಾರೆ. ಬಿಜೆಪಿ ಬೃಹತ್ ಉದ್ಯಮಿಗಳೊಂದಿಗೆ ನಂಟು ಹೊಂದಿದೆ ಎಂದು ನಾವು ಪ್ರತಿದಿನ ನಿಮಗೆ ಹೇಳುತ್ತಿದ್ದೇವೆ. ಅವರು (ಮೋದಿ) ತಮ್ಮ ಗೆಳೆಯ (ಅದಾನಿ, ಅಂಬಾನಿ)ರ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅವರ ಸಾಲವನ್ನು ಮನ್ನಾ ಮಾಡಿಲ್ಲ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News