ಬಂಗಾಳದಲ್ಲಿ ಸೇನೆ ನಿಯೋಜನೆಗೆ ವಿಪಕ್ಷ ಕೆಂಡ

Update: 2016-12-02 13:44 GMT

ಹೊಸದಿಲ್ಲಿ, ಡಿ.2: ಕೋಲ್ಕತಾದ ಸಮೀಪ ಸೇನಾ ಸಿಬ್ಬಂದಿಯ ಇರುವಿಕೆಯು ಶುಕ್ರವಾರ ಸಂಸತ್ತನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಪಶ್ಚಿಮ ಬಂಗಾಳ ಸರಕಾರದಲ್ಲಿ ಕೇಂದ್ರ ಸರಕಾರ ಮೂಗು ತೂರಿಸಲು ಪ್ರಯತ್ನಿಸುತ್ತಿದೆಯೆಂದು ವಿಪಕ್ಷಗಳು ಆರೋಪಿಸಿದರೆ, ಬಿಜೆಪಿ ಅದನ್ನು ತಳ್ಳಿ ಹಾಕಿದೆ.

ಬಂಗಾಳ ವಿಧಾನ ಸಭೆಯಿಂದ ಕೆಲವೇ ಮೀಟರ್ ದೂರದ ಕೋಲ್ಕತಾ-ಹೌರಾ ಸಂಪರ್ಕದ ಪ್ರಮುಖ ಸೇತುವೆಯೊಂದರ ಮೇಲೆ ಸೇನಾಧಿಕಾರಿಗಳು ವಾಹನಗಳನ್ನು ನಿಲ್ಲಿಸುತ್ತಿರುವುದು ಕಾಣಿಸಿದ ಬಳಿಕ, ತಾನು ರಾತ್ರಿ ವಿಧಾನ ಭವನದಲ್ಲೇ ಉಳಿಯಲಿದ್ದೇನೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ ಬಳಿಕ ಗುರುವಾರ ತಡ ರಾತ್ರಿ ಈ ವಿವಾದ ಆರಂಭವಾಗಿತ್ತು.

ಈ ಬಗ್ಗೆ ಸರಕಾರದ ಪ್ರತಿಕ್ರಿಯೆಗೆ ಒತ್ತಾಯಿಸಿ ಹಾಗೂ ಸೇನೆಯನ್ನು ಕೇಂದ್ರ ಸರಕಾರದ ಒತ್ತಾಸೆಯಂತೆ ಕರೆಸಲಾಗಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ನಾಶವಾಗಿದೆಯೆಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಂಸತ್ತಿನ ಉಭಯ ಸದನಗಳ ಕಲಾಪಕ್ಕೆ ಬಾರಿ ತಡೆಯುಂಟು ಮಾಡಿದೆ.

ಅದಕ್ಕೆ ಕಾಂಗ್ರೆಸ್ ಹಾಗೂ ಇತರ ಕೆಲವು ಪಕ್ಷಗಳ ಬೆಂಬಲ ದೊರಕಿದ್ದು, ಸರಕಾರವು ಅದರ ಪಾತ್ರವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದವು.

ಬಂಗಾಳದ ಮುಖ್ಯಮಂತ್ರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದು ಸಂವಿಧಾನದ ಮೇಲೆ ದೊಡ್ಡ ದಾಳಿಯಾಗಿದೆ. ಸೇನೆಯನ್ನು ರಾಜಕೀಯಗೊಳಿಸಬಾರದೆಂದು ಬಿಎಸ್ಪಿ ನಾಯಕಿ ಮಾಯಾವತಿ ರಾಜ್ಯಸಭೆಯಲ್ಲಿ ಹೇಳಿದರೆಂದು ಎಎನ್‌ಐ ವರದಿ ಮಾಡಿದೆ.

ರಾಜ್ಯದ ಹಕ್ಕನ್ನು ಯಾಕೆ ಕಸಿಯಲಾಗುತ್ತಿದೆಯೆಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್ ಆಗ್ರಹಿಸುವ ಮೂಲಕ ಮಮತಾರನ್ನು ಬೆಂಬಲಿಸಿದೆ.

ಇದು ದಾರಿ ತಪ್ಪಿದಂತೆ ತೋರುತ್ತಿದೆ. ಸೇನೆಯು ಟೋಲ್ ಸಂಗ್ರಹಿಸುವುದಿಲ್ಲ. ಸೇನೆ ನಿಯೋಜಿಸುವಂತಹ ಕಾನೂನು ಸುವ್ಯವಸ್ಥೆ ಸಮಸ್ಯೆ ಪಶ್ಚಿಮ ಬಂಗಾಳದಲ್ಲಿ ಯಾವುದೂ ಇಲ್ಲವೆಂದು ಕಾಂಗ್ರೆಸ್‌ನ ಗುಲಾಂ ನಬಿ ಆಝಾದ್ ಹೇಳಿದರೆಂದು ಸುದ್ದಿ ಸಂಸ್ಥೆ ತಿಳಿಸಿದೆ.

ಈ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದೆ. ಮಾಮೂಲು ಕ್ರಮವೊಂದನ್ನು ವಿವಾದ ಮಾಡಲಾಗುತ್ತಿದೆ. ಇದು ಸೇನೆಯ ಮಾಮೂಲು ಕಾರ್ಯವಾಗಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆಯೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಸಮರ್ಥಿಸಿಕೊಂಡಿದ್ದಾರೆ.

ಬಂಗಾಳವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಇದು ಕಳೆದ ವರ್ಷ, ಅದಕ್ಕಿಂತ ಮುಂಚಿನ ವರ್ಷವೂ ನಡೆದಿದೆ. ತಾವು ಸೇನೆಯನ್ನು ವಿವಾದಕ್ಕೆ ಎಳೆಯುವುದು ಬೇಡವೆಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆಂದು ಎಎನ್‌ಐ ವರದಿ ಮಾಡಿದೆ.

ತಾವು ಟೋಲ್ ಸಂಗ್ರಹಿಸುತ್ತಿಲ್ಲ. ಹಲವು ರಾಜ್ಯಗಳಲ್ಲಿ ವ್ಯಾಪಿಸಿರುವ ಮಾಮೂಲು ಕಾರ್ಯಾಚರನೆಯೊಂದರ ಸಂಬಂಧ ತಾವಿಲ್ಲಿದ್ದೇವೆ. ತಾವು ಕೇವಲ ಭಾರೀ ವಾಹನಗಳ ಅಂಕಿ-ಅಂಶ ಸಂಗ್ರಹಿಸುತ್ತಿದ್ದೇವೆ. ಇದು ಪ್ರತಿವರ್ಷ ನಡೆಸುವ ಮಾಮೂಲು ಕಾರ್ಯಾಚರಣೆಯಾಗಿದೆಯೆಂದು ಮೇಜರ್ ಜನರಲ್ ಸುನೀಲ್ ಯಾದವ್ ಪತ್ರಕರ್ತರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News