ವಿಶ್ವ ಚಾಂಪಿಯನ್ ನಿಕೊ ರೋಸ್‌ಬರ್ಗ್ ನಿವೃತ್ತಿ

Update: 2016-12-02 17:14 GMT

ಲಂಡನ್, ಡಿ.2: ವಿಶ್ವ ಚಾಂಪಿಯನ್ ನಿಕೊ ರೋಸ್‌ಬರ್ಗ್ ಶುಕ್ರವಾರ ದಿಢೀರನೆ ಫಾರ್ಮುಲಾ ಒನ್ ರೇಸ್‌ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

31ರ ಪ್ರಾಯದ ಜರ್ಮನಿಯ ರಾಸ್‌ಬರ್ಗ್ ರವಿವಾರ ಅಬುಧಾಬಿಯಲ್ಲಿ ನಡೆದ ಎಫ್-1 ರೇಸ್ ಫೈನಲ್‌ನಲ್ಲಿ ಸಹ ಆಟಗಾರ ಲೂಯಿಸ್ ಹ್ಯಾಮಿಲ್ಟನ್‌ರನ್ನು ಮಣಿಸಿ ಪ್ರಥಮ ಬಾರಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದರು.

ಮೆರ್ಸಿಡಿಸ್‌ನೊಂದಿಗೆ ಮೊದಲ ವಿಶ್ವ ಚಾಂಪಿಯನ್‌ಶಿಪ್‌ನ್ನು ಜಯಿಸಿ ಜೀವಮಾನದ ಗುರಿಯನ್ನು ಈಡೇರಿಸಿಕೊಂಡ 5 ದಿನಗಳ ಬಳಿಕ ರೋಸ್‌ಬರ್ಗ್ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

ರೋಸ್‌ಬರ್ಗ್ ಈ ವರ್ಷ ಆಡಿರುವ 21 ಗ್ರಾನ್‌ಪ್ರಿ ಟೂರ್ನಿಗಳಲ್ಲಿ 9ರಲ್ಲಿ ಜಯ ಸಾಧಿಸಿದ್ದರು. 1982ರ ವಿಶ್ವ ಚಾಂಪಿಯನ್ ಕೇಕೆ ಅವರ ಪುತ್ರನಾಗಿರುವ ರೋಸ್‌ಬರ್ಗ್ 2006ರಲ್ಲಿ ಚೊಚ್ಚಲ ರೇಸ್‌ನಲ್ಲಿ ಭಾಗವಹಿಸಿದ್ದರು. ರೋಸ್‌ಬರ್ಗ್ 206 ರೇಸ್‌ಗಳ ಪೈಕಿ 23ರಲ್ಲಿ ಜಯಶಾಲಿಯಾಗಿದ್ದಾರೆ. ರೋಸ್‌ಬರ್ಗ್ ಜರ್ಮನಿ ಕಾರಿನಲ್ಲಿ ಫಾರ್ಮುಲಾ ಒನ್ ಚಾಂಪಿಯನ್‌ಶಿಪ್ ಜಯಿಸಿದ ಮೊದಲ ಜರ್ಮನಿ ಡ್ರೈವರ್.

  ‘‘ನಾನು ವಿಶ್ವ ಚಾಂಪಿಯನ್ ಆದರೆ ರೇಸಿಂಗ್ ವೃತ್ತಿಜೀವನವನ್ನು ಕೊನೆಗೊಳಿಸುವೆ ಎಂದು ನಿರ್ಧರಿಸಿದ್ದೆ. ಅಬುಧಾಬಿಯಲ್ಲಿ ರವಿವಾರ ಬೆಳಗ್ಗೆ ಇದು ನನ್ನ ಕೊನೆಯ ರೇಸ್ ಎಂದು ಭಾವಿಸಿದ್ದೆ. ಸೋಮವಾರ ಸಂಜೆ ನಿವ್ರತ್ತಿಯ ನಿರ್ಧಾರ ಕೈಗೊಂಡೆ. ವಿಶ್ವ ಚಾಂಪಿಯನ್ ಆಗಬೇಕೆನ್ನುವುದು ನನ್ನ ಬಹುದಿನದ ಕನಸಾಗಿತ್ತು. ಇದಕ್ಕಾಗಿ ಸಾಕಷ್ಟು ಪರಿಶ್ರಮ, ನೋವು ಹಾಗೂ ತ್ಯಾಗ ಮಾಡಿರುವೆ. ಪ್ರಶಸ್ತಿ ಗೆಲ್ಲುವುದು ನನ್ನ ಗುರಿಯಾಗಿತ್ತು. ಅದನ್ನು ಸಾಧಿಸಿರುವೆ’’ ಎಂದು ರೋಸ್‌ಬರ್ಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News