ಜಯಲಲಿತಾ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

Update: 2016-12-06 05:14 GMT

ಚೆನ್ನೈ, ಡಿ.5: ಇಲ್ಲಿನ ಅಪೋಲೊ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಂತಿಮದರ್ಶನ ಪಡೆಯಲು ಅಭಿಮಾನಿಗಳ ಜನಸಾಗರವೇ ಹರಿದುಬರುತ್ತಿದೆ.

 ಜಯಲಲಿತಾರ ಪಾರ್ಥಿವ ಶರೀರವನ್ನು ಅಪೊಲೋ ಆಸ್ಪತ್ರೆಯಿಂದ ಅಧಿಕೃತ ನಿವಾಸ ಪೊಯೆಸ್ ಗಾರ್ಡನ್‌ಗೆ ಕೊಂಡೊಯ್ಯಲಾಗಿದ್ದು, ಬಳಿಕ ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ರಾಜಾಜಿಹಾಲ್ ಬಳಿ ಇಡಲಾಗಿದೆ. ಇಂದು ಸಂಜೆ 4:30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.

ಎಂಜಿಆರ್ ಸಮಾಧಿಯ ಪಕ್ಕದಲ್ಲೇ ಜಯಲಲಿತಾರ ಅಂತ್ಯಕ್ರಿಯೆ ನೆರವೇರುವ ಸಾಧ್ಯತೆಯಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಜಯಲಲಿತಾರ ನಿಧನದ ಹಿನ್ನೆಲೆಯಲ್ಲಿ ಚೆನ್ನೈ ನಗರದ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ರಸ್ತೆಗಳು ಖಾಲಿ ಖಾಲಿಯಾಗಿವೆ. ಎಲ್ಲಾ ಅಂಗಡಿ-ಮುಗ್ಗಟ್ಟುಗಳು ಮುಚ್ಚಲ್ಪಟ್ಟಿವೆ.

ಒಂದು ವಾರ ರಾಜ್ಯಾದ್ಯಂತ ಶೋಕಾಚರಣೆ ನಡೆಯಲಿದ್ದು, ಈ ವೇಳೆ ಸರಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಈ ವೇಳೆ ಯಾವುದೇ ಸರಕಾರಿ ಕಾರ್ಯಕ್ರಮಗಳು ಇರುವುದಿಲ್ಲ.

ಕರ್ನಾಟಕದಲ್ಲಿ ಒಂದು ದಿನ ಶೋಕಾಚರಣೆ:

ಜಯಲಲಿತಾರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯಾದ್ಯಂತ ಒಂದು ದಿನ ಶೋಕಾಚರಣೆ ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ಚೆನ್ನೈಗೆ ತೆರಳಿ ಜಯಲಲಿತಾರ ಅಂತಿಮ ದರ್ಶನ ಪಡೆಯಲಿದ್ದಾರೆ.

ಡಿಎಂಕೆ ನಾಯಕ ಎಂಕೆ ಸ್ಟಾಲಿನ್, ರಾಜ್ಯಪಾಲ ವಿದ್ಯಾಸಾಗರ್ ರಾವ್ ಸಹಿತ ಮತ್ತಿತರ ಗಣ್ಯರು ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News