ಸುಷ್ಮಾ ಸ್ವರಾಜ್‌ಗೆ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ

Update: 2016-12-10 11:04 GMT

ಹೊಸದಿಲ್ಲಿ,ಡಿ.10: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಇಂದು ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ರಕ್ತಸಂಬಂಧಿಯಲ್ಲದ,ಜೀವಂತ ವ್ಯಕ್ತಿಯೋರ್ವರು ಸುಷ್ಮಾರಿಗೆ ಮೂತ್ರಪಿಂಡ ದಾನ ಮಾಡಿದ್ದಾರೆ.

ಏಮ್ಸ್ ನಿರ್ದೇಶಕ ಎಂ.ಸಿ.ಮಿಶ್ರಾ, ಸರ್ಜನ್‌ಗಳಾದ ವಿ.ಕೆ.ಬನ್ಸಾಲ್ ಮತ್ತು ವಿ.ಸೀನು ಹಾಗೂ ಮೂತ್ರಪಿಂಡ ತಜ್ಞ ಸಂದೀಪ್ ಮಹಾಜನ ಅವರನ್ನೊಳಗೊಂಡ ವೈದ್ಯರ ತಂಡವು ಸುಮಾರು ಐದೂವರೆ ಗಂಟೆಗಳ ಅವಧಿಯ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿತು ಎಂದು ಆಸ್ಪತ್ರೆಯಲ್ಲಿನ ಮೂಲಗಳು ತಿಳಿಸಿದವು.

ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ಶಸ್ತ್ರಚಿಕಿತ್ಸೆ ಮಧ್ಯಾಹ್ನ 2:30ಕ್ಕೆ ಪೂರ್ಣಗೊಂಡಿತ್ತು. ಸಚಿವೆಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಅವರ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಅವು ಹೇಳಿದವು.

ಜೀವಂತ,ರಕ್ತಸಂಬಂಧಿಯಲ್ಲದ ದಾನಿ ಸ್ನೇಹಿತ, ಬಂಧು, ನೆರೆಯ ನಿವಾಸಿ ಅಥವಾ ಅತ್ತೆ-ಮಾವ...ಹೀಗೆ ರೋಗಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾರೂ ಆಗಿರಬಹುದು. ಸುಷ್ಮಾರ ಕುಟುಂಬದಲ್ಲಿ ಸೂಕ್ತ ದಾನಿ ದೊರೆಯದ್ದರಿಂದ ಜೀವಂತ, ರಕ್ತಸಂಬಂಧಿಯಲ್ಲದ ದಾನಿಯಿಂದ ಮೂತ್ರಪಿಂಡವನ್ನು ಪಡೆದು ಅವರಿಗೆ ಕಸಿ ಮಾಡಲಾಗಿದೆ. ಮೂತ್ರಪಿಂಡ ದಾನ ಮತ್ತು ಶಸ್ತ್ರಚಿಕಿತ್ಸೆಗೆ ಮುನ್ನ ಪರವಾನಿಗೆ ಸಮಿತಿಯಿಂದ ಅಗತ್ಯ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ ಎಂದೂ ಅವು ತಿಳಿಸಿದವು.

64ರ ಹರೆಯದ ಸುಷ್ಮಾ ಸುದೀರ್ಘ ಕಾಲದಿಂದ ಮಧುಮೇಹ ರೋಗಿಯಾಗಿದ್ದಾರೆ. ಮೂತ್ರಪಿಂಡಗಳು ವಿಫಲಗೊಂಡ ಬಳಿಕ ವಾರಕ್ಕೆ ಮೂರು ಬಾರಿ ಅವರಿಗೆ ಡಯಾಲಿಸಿಸ್ ನಡೆಸಲಾಗುತ್ತಿತ್ತು ಎಂದು ಹಿರಿಯ ವೈದ್ಯರೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News