ಹೊಸ ನೋಟುಗಳಲ್ಲಿ ರೇಡಿಯೋ ಆಕ್ಟಿವ್ ಇಂಕ್ ಇದೆಯೇ ?

Update: 2016-12-12 15:36 GMT

ಹೊಸದಿಲ್ಲಿ, ಡಿ. 12 : ಕೇಂದ್ರ ಸರ್ಕಾರ ನೋಟು ರದ್ದತಿ ಮಾಡಿದ ಬಳಿಕ 500 ಹಾಗು 2000 ರೂ. ನೋಟುಗಳ ಕೊರತೆ ಜನರನ್ನು ತೀವ್ರವಾಗಿ ಕಾಡುತ್ತಿದ್ದರೂ ಅವುಗಳಿಗೆ ಸಂಬಂಧಿಸಿದ ವದಂತಿಗಳಿಗೆ ಮಾತ್ರ  ಯಾವುದೇ ಕೊರತೆ ಕಂಡು ಬಂದಿಲ್ಲ. ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಈ ಹೊಸ ನೋಟುಗಳ ಬಗ್ಗೆ ಏನಾದರೊಂದು ' ಸುದ್ದಿ' ಹರಡುತ್ತಲೇ ಇರುತ್ತದೆ. ಈ ಹೊಸ ನೋಟುಗಳಲ್ಲಿ ಜಿಪಿಎಸ್ ಚಿಪ್ ಅಳವಡಿಸಲಾಗಿದೆ ಎಂಬುದು ಇವುಗಳ ಬಗ್ಗೆ ಭಾರೀ ಪ್ರಚಾರ ಪಡೆದ ಮೊದಲ ವದಂತಿ. ಇದು ಎಷ್ಟು ವ್ಯಾಪಕ ಪ್ರಚಾರ ಪಡೆಯಿತೆಂದರೆ ಕೊನೆಗೆ ಸರಕಾರವೇ ಇಂತಹ ಯಾವುದೇ ಚಿಪ್ ಇಲ್ಲ ಎಂದು ಸ್ಪಷ್ಟೀಕರಣ ನೀಡಬೇಕಾಯಿತು. 


ಅದರ ನಂತರ ಹೊಸ ನೋಟುಗಳ ಖೋಟಾ ನೋಟು ಬರಲಾರಂಭಿಸಿದ ಬೆನ್ನಿಗೇ ಖೋಟಾ ಸುದ್ದಿಗಳೂ  ಮುಂದುವರಿದವು. ಖೋಟಾ ನೋಟು ಪತ್ತೆ ಹಚ್ಚುವ ಮೊಬೈಲ್ ಆಪ್ ಇವೆ ಎಂಬುದು ಈ ಪೈಕಿ ಮುಖ್ಯವಾದದ್ದು. ಬಳಿಕ ಅದೂ ಸುಳ್ಳು ಎಂದು ತಿಳಿದುಬಂತು. 


ಈಗ ಹೊಸ ವದಂತಿಯ ಸರದಿ. ವ್ಯಾಪಕವಾಗಿ ಪ್ರಚಾರದಲ್ಲಿರುವ ಈ ವದಂತಿ ಏನೆಂದರೆ 500 ಹಾಗು 2000 ರೂ.ಹೊಸ ನೋಟುಗಳಲ್ಲಿ ರೇಡಿಯೋ ಆಕ್ಟಿವ್ ಇಂಕ್ ಬಳಸಲಾಗಿದ್ದು ಅದರ ಮೂಲಕ ನೋಟುಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಕೆಲವು ವೆಬ್ ಸೈಟ್ ಗಳು ಹಾಗು ವಾಟ್ಸ್ ಆಪ್ ನಲ್ಲಿ ಹರಡಿರುವ ವದಂತಿ ಪ್ರಕಾರ " ಈ ಹೊಸ ನೋಟುಗಳ ಮುದ್ರಣದಲ್ಲಿ ರಂಜಕ ( ಫಾಸ್ಪರಸ್) ದ ರೇಡಿಯೋ ಆಕ್ಟಿವ್ ಐಸೋಟೋಪ್ ಗಳನ್ನು ಬಳಸಲಾಗಿದೆ. ಇದರಲ್ಲಿ 15 ಪ್ರೋಟಾನ್ ಹಾಗು 17 ನ್ಯೂಟ್ರಾನ್ ಗಳಿವೆ. ಇದು ರೇಡಿಯೋ ಆಕ್ಟಿವ್ ಎಚ್ಚರಿಕೆ ನೀಡುವ ಕೆಲಸ ಮಾಡುತ್ತದೆ. ಒಂದೇ ಕಡೆ ಹೆಚ್ಚು ನೋಟುಗಳು ಜಮೆಯಾದಾಗ ಇದು ಸಂಕೇತ ನೀಡುತ್ತದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಹೊಸ ನೋಟು ಸಂಗ್ರಹಿಸಿಟ್ಟವರು ಆದಾಯ ತೆರಿಗೆ ಇಲಾಖೆಯ ಬಲೆಗೆ ಬೀಳುತ್ತಿದ್ದಾರೆ." ಜೊತೆಗೆ " ಈ ಐಸೋ ಟೋಪ್ ಗಳು ಆರೋಗ್ಯಕ್ಕೆ ಹಾನಿಕಾರಕ ಅಲ್ಲ. 


ಆದರೆ ಈ ವಿಷಯದ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ಈವರೆಗೆ ನೀಡಿಲ್ಲ. ಬಹುಶ: ಇದು ತೀರಾ ಬಾಲಿಶ ವದಂತಿ ಎಂದು ಸ್ಪಷ್ಟೀಕರಣ ನೀಡಲು ಯೋಗ್ಯವಲ್ಲ ಎಂದು ಕಡೆಗಣಿಸಿರುವ ಸಾಧ್ಯತೆಯೂ ಇದೆ. ಹಾಗಾಗಿ ಸದ್ಯಕ್ಕೆ ಇದು ಕೂಡ ಈ ಹಿಂದಿನಂತೆಯೇ ಕೇವಲ ವದಂತಿ , ಸತ್ಯ ಅಲ್ಲ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News