ಕ್ಯಾಶ್ ಲೆಸ್ ವ್ಯವಹಾರ ಪ್ರೋತ್ಸಾಹಿಸುವ ಸರ್ಕಾರ ಆನ್ ಲೈನ್ ವಂಚನೆಯಲ್ಲಿ ಕಳೆದುಕೊಂಡಿದ್ದು ಎಷ್ಟು ಸಾವಿರ ಕೋಟಿ ?

Update: 2016-12-13 07:44 GMT

ಹೊಸದಿಲ್ಲಿ, ಡಿ.13:  ನವೆಂಬರ್ 8ರಂದು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಕಾಳಧನ ನಿಯಂತ್ರಣದ ನೆಪದಲ್ಲಿ ಅಮಾನ್ಯಗೊಳಿಸಿದ ಕೇಂದ್ರದ ನರೇಂದ್ರ ಮೋದಿ ಸರಕಾರ ಇದೀಗ ಕ್ಯಾಶ್ ಲೆಸ್ ಇಕಾನಮಿಯ ಬಗ್ಗೆ ಮಾತನಾಡಲಾರಂಭಿಸಿದ್ದು, ಜನರು ಹೆಚ್ಚು ಹೆಚ್ಚಾಗಿ ಡಿಜಿಟಲ್ ಟ್ರಾನ್ಸಾಕ್ಷನ್ ನಡೆಸಬೇಕೆಂದು ಕರೆ ನೀಡುತ್ತಿದೆ. ಡಿಜಿಟಲ್ ಟ್ರಾನ್ಸಾಕ್ಷನ್ ನಡೆಸಿದವರು ಅದೃಷ್ಟ ಬಹುಮಾನಗಳಿಗೂ ಅರ್ಹರಾಗುತ್ತಾರೆಂದು ಹೇಳಿರುವ ಸರಕಾರ ಕೆಲವೊಂದು ಡಿಜಿಟಲ್ ವ್ಯವಹಾರಗಳಿಗೆ ಸಂಬಂಧ ಪಟ್ಟಂತೆ ಡಿಸ್ಕೌಂಟುಗಳನ್ನೂ ಘೋಷಿಸಿದೆ.
ಆದರೆ ಡಿಜಿಟೀಕರಣ ಬಗ್ಗೆ ಇಷ್ಟೊಂದು ಆಸಕ್ತವಾಗಿರುವ ಕೇಂದ್ರ ಸರಕಾರ ಸೈಬರ್ ಕ್ರೈಂ ತಡೆಯಲು ಹಾಗೂ ಸೈಬರ್ ಸೆಕ್ಯುರಿಟಿ ಹೆಚ್ಚಿಸಲು ಏನೆಲ್ಲಾ ಕ್ರಮ ಕೈಗೊಂಡಿದೆಯೆಂಬ ಪ್ರಶ್ನೆಗೆ ನಿರಾಶಾದಾಯಕ ಉತ್ತರ ದೊರಕುತ್ತಿದೆ.

ಒಂದು ಮೂಲದ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸೈಬರ್ ಅಪರಾಧಗಳಿಂದಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳು ಬರೋಬ್ಬರಿ 20,000 ಕೋಟಿ ಹಣ ಕಳೆದುಕೊಂಡಿವೆ. ಆದರೂ ಈ ಬಗ್ಗೆ ಅನಾಸ್ಥೆ ತೋರಿಸುತ್ತಿದೆ ಸರಕಾರ.
ಇನ್ನೂ ಆತಂಕದ ವಿಚಾರವೆಂದರೆ ಸೈಬರ್ ಅಪರಾಧ ಪ್ರಕರಣಗಳ ವಿಚಾರಣೆ ನಡೆಸುವ ದಿಲ್ಲಿಯಲ್ಲಿರುವ ಸೈಬರ್ ಎಪಲ್ಲೇಟ್ ಟ್ರಿಬ್ಯುನಲ್ ಗೆ ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರೇ ಇಲ್ಲ. ವಿಚಾರಣೆ ನಡೆಸಲು ನ್ಯಾಯಾಧೀಶರುಗಳೂ ಇಲ್ಲ. ಮೇಲಾಗಿ ನಮ್ಮ ಹೆಚ್ಚಿನ ಎಲ್ಲಾ ಬ್ಯಾಂಕುಗಳ ಎಟಿಎಂ ಮೆಶೀನುಗಳು(ಶೇ.70ರಷ್ಟು) ವಿಂಡೋಸ್ ಎಕ್ಸ್ ಪಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ವಿಂಡೋಸ್ ಎಕ್ಸ್ ಪಿ ಸರ್ವಿಸನ್ನು ಮೈಕ್ರೋಸಾಫ್ಟ್ ಕಂಪೆನಿ 2014 ಎಪ್ರಿಲ್ ತಿಂಗಳಿನಿಂದ ನಿಲ್ಲಿಸಿದೆ. ಇದರಿಂದ ನಮ್ಮ ದೇಶದ ಎಟಿಎಂಗಳು ಹಳೆಯ ತಂತ್ರಜ್ಞಾನದಂತೆ ಕಾರ್ಯನಿರ್ವಹಿಸುತ್ತಿವೆಯೆಂಬುದು ಸ್ಪಷ್ಟ ಎಂದು ಸೈಬರ್ ಅಪರಾಧ ವಿಷಯಗಳ ತಜ್ಞರಾಗಿರುವ ಪ್ರಶಾಂತ್ ಮಾಲಿ ಹೇಳುತ್ತಾರೆ. ಪ್ರತಿ ವರ್ಷ ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಶೇ.300 ರಷ್ಟು ಹೆಚ್ಚಾಗುತ್ತಿದ್ದು ಜನರು ವಿವಿಧ ರೀತಿಗಳಲ್ಲಿ ಸೈಬರ್ ಕ್ರೈಂಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಹಣವನ್ನು ಕಳೆದುಕೊಳ್ಳುತ್ತಿದ್ದಾರೆಂಬುದು ನಿಜಕ್ಕೂ ಆತಂಕಕಾರಿ ಸಂಗತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News