Maharashtra| ಬಿಎಂಸಿ ಸೇರಿ 29 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿರುಸಿನ ಮತದಾನ
Photo Credit: Brihanmumbai Municipal Corporation
ಮುಂಬೈ: ಮಹಾರಾಷ್ಟ್ರದಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಸೇರಿ ಒಟ್ಟು 29 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದೆ.
ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ 893 ವಾರ್ಡ್‌ಗಳ ಒಟ್ಟು 2,869 ಸ್ಥಾನಗಳಿಗೆ ಬೆಳಿಗ್ಗೆ 7.30ರಿಂದ ಮತದಾನ ನಡೆಯುತ್ತಿದೆ. ಈ ಬಹುತೇಕ ಮಹಾನಗರ ಪಾಲಿಕೆಗಳ ಅವಧಿ 2020 ರಿಂದ 2023ರ ನಡುವೆ ಕೊನೆಗೊಂಡಿತ್ತು.
74,400 ಕೋಟಿಗಿಂತ ಹೆಚ್ಚಿನ ವಾರ್ಷಿಕ ಬಜೆಟ್ ಹೊಂದಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ದೇಶದ ಶ್ರೀಮಂತ ಮಹಾನಗರ ಪಾಲಿಕೆಯಾಗಿದೆ. 2022ರಲ್ಲಿ ಶಿವಸೇನೆ ವಿಭಜನೆಯಾದ ನಂತರ ನಡೆಯುತ್ತಿರುವ ಮೊದಲ ಬಿಎಂಸಿ ಚುನಾವಣೆ ಇದಾಗಿದೆ. ಚುನಾವಣೆಗೆ ಮುನ್ನ ನಡೆದ ಮಹತ್ವದ ರಾಜಕೀಯ ತಿರುವುಗಳಲ್ಲಿ, ಶಿವಸೇನೆ (ಯುಬಿಟಿ) ಮತ್ತು ಎಂಎನ್ಎಸ್ ಮುಖ್ಯಸ್ಥರಾಗಿರುವ ಉದ್ಧವ್ ಮತ್ತು ರಾಜ್ ಠಾಕ್ರೆ ಎರಡು ದಶಕಗಳ ನಂತರ ಒಂದಾಗಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಚುನಾವಣೆಯ ಹಿನ್ನೆಲೆ ಮುಂಬೈನಾದ್ಯಂತ 25,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.