ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ| ಮತದಾನದ ವೇಳೆ ಬೆರಳಿಗೆ ಮಾರ್ಕರ್ ಪೆನ್ ನಿಂದ ಗುರುತು; ಆರೋಪ
ದೂರುಗಳ ತನಿಖೆ ನಡೆಸಲಿರುವ ಬಿಎಂಸಿ
ಸಾಂದರ್ಭಿಕ ಚಿತ್ರ | Photo Credit : PTI
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರ ಬೆರಳುಗಳಿಗೆ ಗುರುತು ಮಾಡಲು ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ ಗಳನ್ನು ಬಳಸಲಾಗುತ್ತಿದ್ದು, ಇದರಿಂದ ಚುನಾವಣಾ ಅಕ್ರಮಗಳಿಗೆ ನೆರವಾಗಲಿದೆ ಎಂದು ವಿರೋಧ ಪಕ್ಷಗಳು ಆರೋಪಿಸುವ ಮೂಲಕ, ವಿವಾದವೊಂದು ಭುಗಿಲೆದ್ದಿದೆ.
ಚುನಾವಣಾ ಪ್ರಕ್ರಿಯೆಯ ಪರಿಪೂರ್ಣತೆಯನ್ನು ಪ್ರಶ್ನಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಸರಕಾರ ವ್ಯವಸ್ಥೆಯನ್ನು ತಿರುಚುತ್ತಿದೆ ಎಂದು ಆರೋಪಿಸಿದ್ದಾರೆ.
“ಸರಕಾರಕ್ಕೆ ವಿರೋಧ ಪಕ್ಷಗಳು ಬೇಕಿಲ್ಲ. ಚುನಾವಣೆಗಳನ್ನು ಗೆಲ್ಲಲು ಇಡೀ ಆಡಳಿತ ಯಂತ್ರವನ್ನು ಸರಕಾರ ನಡೆಸುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಚಿಹ್ನೆಯಲ್ಲ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಒಂದು ಮಿತಿಯಿದೆ” ಎಂದು ಅವರು ಹರಿಹಾಯ್ದಿದ್ದಾರೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಪಕ್ಷಗಳು ಯಾವುದೇ ಅಕ್ರಮ ನಡೆಸದಂತೆ ಜಾಗರೂಕರಾಗಿರಬೇಕು ಎಂದು ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮತದಾರರ ಬೆರಳಿಗೆ ಗುರುತು ಮಾಡಲು ಮಾರ್ಕರ್ ಪೆನ್ ಗಳನ್ನು ಬಳಸುತ್ತಿರುವ ಕುರಿತು ನಿರ್ದಿಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿದ ರಾಜ್ ಠಾಕ್ರೆ, “ಅವರೀಗ ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ ಗಳನ್ನು ಬಳಸುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಇಂತಹ ವಂಚನೆಯ ಚುನಾವಣೆಗಳಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸದೆ ನೂತನ ಯಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿರುವುದರ ಕುರಿತೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನಕಲಿ ಹಾಗೂ ದ್ವಿಮತ ಚಲಾವಣೆ ಹಾಗೂ ವಿವಿಪ್ಯಾಟ್ ವ್ಯವಸ್ಥೆ ಕುರಿತೂ ಉಲ್ಲೇಖಿಸಿದ ಅವರು, ಅದರೊಂದಿಗೆ ಏಕಪಕ್ಷೀಯವಾಗಿ ಪಿಎಡಿಯು ಘಟಕಗಳನ್ನೂ ಪರಿಚಯಿಸಲಾಗಿದೆ ಎಂದೂ ಆಕ್ಷೇಪ ವ್ಯಕ್ತಪಡಿಸಿದರು. “ನಾವು ನಕಲಿ ಮತ್ತು ದ್ವಿಮತ ಚಲಾವಣೆ ಹಾಗೂ ವಿವಿಪ್ಯಾಟ್ ಸಮಸ್ಯೆಯ ಕುರಿತು ಧ್ವನಿ ಎತ್ತಿದ್ದೆವು. ಈಗ ಅವರು ಕೆಲವು ಪಿಎಡಿಯು ಘಟಕಗಳನ್ನು ತಂದಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಇಂತಹ ಸಾಧನಗಳನ್ನು ಬಳಸುವುದಕ್ಕೂ ಮುನ್ನ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ ಚಲಾವಣೆ ಮಾಡುವಾಗ ಬೆರಳಿಗೆ ಮಾರ್ಕರ್ ನಲ್ಲಿ ಗುರುತು ಹಾಕುತ್ತಿರುವುದರಿಂದ, ಮತ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಅದನ್ನು ಅಳಿಸಿ ಹಾಕಬಹುದಾಗಿದೆ ಎಂದು ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದ ಕೆಲವು ಮತದಾರರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಮುಂಬೈ ನಗರ ಪಾಲಿಕೆ ಆಯುಕ್ತ ಭೂಷಣ್ ಗಗ್ರಾನಿ, “ನಾವು ಶಾಯಿ ಬಳಕೆಗೆ ಸಂಬಂಧಿಸಿದ ಎಲ್ಲ ಆರೋಪಗಳ ಕುರಿತು ತನಿಖೆ ನಡೆಸಲಿದ್ದೇವೆ.” ಎಂದು ಹೇಳಿದ್ದಾರೆ.