ಕೊಹ್ಲಿ ನನಗಿಂತ ಎರಡು ಪಟ್ಟು ಆಕ್ರಮಣಕಾರಿ: ಗಂಗುಲಿ

Update: 2016-12-14 18:31 GMT

ಕೋಲ್ಕತಾ, ಡಿ.14: ‘‘ಕೊಹ್ಲಿ ಭಾರತದ ಟೆಸ್ಟ್ ನಾಯಕನಾಗಿ ನನಗಿಂತ ಎರಡು ಪಟ್ಟು ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ’’ ಎಂದು ಮಾಜಿ ನಾಯಕ ಸೌರವ್ ಗಂಗುಲಿ ಹೇಳಿದ್ದಾರೆ.

 ‘‘ಕೊಹ್ಲಿ ನನಗಿಂತ ದುಪ್ಪಟ್ಟು ಆಕ್ರಮಣಶೀಲ ನಾಯಕನಾಗಿದ್ದಾರೆ ಎಂದು ಪಿಚ್‌ವಿಸನ್ ಕ್ರಿಕೆಟ್ ಟೆಕ್ನಾಲಜಿ ನೆರವಿನಿಂದ ನಡೆಯುವ ಸೌರವ್ ಗಂಗುಲಿ ಫೌಂಡೇಶನ್ ಹಾಗೂ ಸೌರವ್ ಗಂಗುಲಿ ಕ್ರಿಕೆಟ್ ಶಾಲೆಯ ಉದ್ಘಾಟನಾ ಕಾರ್ಯಕ್ರಮದ ವೇಳೆ ಸುದ್ದಿಗಾರರಿಗೆ ಗಂಗುಲಿ ತಿಳಿಸಿದರು.

ಗಂಗುಲಿ ಭಾರತದ ನಾಯಕನಾಗಿದ್ದಾಗ ಆಕ್ರಮಣಕಾರಿ ನಾಯಕತ್ವದಿಂದ ಗಮನ ಸೆಳೆದಿದ್ದರು. 2002ರಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ನಾಟ್‌ವೆಸ್ಟ್ ತ್ರಿಕೋನ ಸರಣಿ ಜಯಿಸಿದಾಗ ಜರ್ಸಿಯನ್ನು ತೆಗೆದು ಸಂಭ್ರಮಾಚರಣೆ ನಡೆಸಿದ್ದರು.

ಬಲಗೈ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಕೊಹ್ಲಿ ಇತ್ತೀಚೆಗೆ ಭಾರತ ಸತತ ಐದನೆ ಬಾರಿ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಕೊಹ್ಲಿ ಈ ಸಾಧನೆ ಮಾಡಿರುವ ಭಾರತದ ಮೊದಲ ನಾಯಕನಾಗಿದ್ದಾರೆ. ಮುಂಬೈನಲ್ಲಿ ಇನಿಂಗ್ಸ್ ಹಾಗೂ 36 ರನ್‌ಗಳ ಅಂತರದಿಂದ ಜಯ ಸಾಧಿಸಿದ್ದು, ಇದು ಸ್ವದೇಶದಲ್ಲಿ ಆಂಗ್ಲರ ವಿರುದ್ಧ ದಾಖಲಿಸಿದ್ದ ದೊಡ್ಡ ಅಂತರದ ಗೆಲುವಾಗಿತ್ತು.

 ಗಂಗುಲಿ ತನ್ನ ಫೌಂಡೇಶನ್‌ನ ಮೂಲಕ ತನ್ನ ರಾಜ್ಯದ ಶಾಲಾ ಮಕ್ಕಳು ಹಾಗೂ ಬಡ ಮಕ್ಕಳಿಗೆ ನೆರವಾಗುವ ಗುರಿ ಹಾಕಿಕೊಂಡಿದ್ದಾರೆ.

‘‘ಪಿಚ್ ವಿಶನ್ ಮೂಲಕ ರಾಜ್ಯದ ಕ್ರಿಕೆಟ್‌ನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಭರವಸೆ ನೀಡುವೆ. ವಿವಿಧ ಶಾಲೆಗಳಲ್ಲಿನ ಮಕ್ಕಳಿಗೆ ತರಬೇತಿ ನೀಡಲು ನಾವು 100 ರಿಂದ 150 ಕೋಚ್‌ಗಳನ್ನು ಆಯ್ಕೆ ಮಾಡಲಿದ್ದೇವೆ. ಆರ್ಥಿಕ ಸಂಕಷ್ಟದಲ್ಲಿರುವ ಕ್ರಿಕೆಟಿಗರಿಗೆ ಉಚಿತ ಕೋಚಿಂಗ್ ನೀಡಲಾಗುವುದು’’ ಎಂದು ಗಂಗುಲಿ ಇದೇ ವೇಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News