×
Ad

ಬಿಜೆಪಿ ಸಂಸದ ಶ್ರೀರಾಮುಲು ಗನ್‌ಮ್ಯಾನ್ ಸಿಐಡಿ ವಶಕ್ಕೆ

Update: 2016-12-21 08:54 IST

ಬೆಂಗಳೂರು, ಡಿ21: ಕೆಎಎಸ್ ಅಧಿಕಾರಿ ಎಲ್.ಆರ್.ಭೀಮಾ ನಾಯ್ಕ್ ಅವರ ಚಾಲಕ ಕೆ.ಸಿ.ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಸೋಮವಾರ ಬಿಜೆಪಿ ಸಂಸದ ಬಿ.ಶ್ರೀರಾಮುಲು ಅವರ ಗನ್‌ಮ್ಯಾನ್ ಚನ್ನಬಸಪ್ಪ ಹೊಸಮನಿ ಅಲಿಯಾಸ್ ಚೆನ್ನಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.

ಕಪ್ಪು ಬಿಳುಪು ದಂಧೆಯಲ್ಲಿ ಜನಾರ್ದನ ರೆಡ್ಡಿಗೆ ಕಾಳಧನ ಪರಿವರ್ತನೆ ಮಾಡಿಕೊಳ್ಳಲು ನೆರವಾದ ಆರೋಪ ನಾಯ್ಕ್ ಮೇಲಿದೆ.
ರಮೇಶ್ ಅವರು ಆತ್ಮಹತ್ಯೆ ಟಿಪ್ಪಣಿಯಲ್ಲಿ, ನಾಯ್ಕ್ ಹೇಗೆ ಕಪ್ಪು ಬಿಳುಪು ದಂಧೆ ನಡೆಸುತ್ತಿದ್ದರು ಎಂಬ ಬಗ್ಗೆ ವಿವರಗಳನ್ನು ದಾಖಲಿಸಿದ್ದರು. ಅಧಿಕಾರಿ ತಮಗೆ ಬೆದರಿಕೆ ಹಾಕಿದ್ದನ್ನೂ ವಿವರಿಸಿದ್ದರು. ಈ ಸಂಬಂಧ ವಿಚಾರಣೆಗೆ ಚೆನ್ನಬಸಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ. ರಮೇಶ್ ಆತ್ಮಹತ್ಯೆಗೆ ಕಾರಣವಾದ ಪರಿಸ್ಥಿತಿಯ ಬಗ್ಗೆ ಇವರಿಂದ ಮಾಹಿತಿ ಪಡೆಯಲಾಗುತ್ತಿದೆ. ಸೋಮವಾರ ಹಾಗೂ ಮಂಗಳವಾರ ಚನ್ನಬಸಪ್ಪ ಅವರನ್ನು ವಿಚಾರಣೆ ನಡೆಸಲಾಯಿತು.
ಪೊಲೀಸರು ಈ ಪ್ರಕರಣದ ಎರಡು ಕೋನಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ರಮೇಶ್, 50 ಲಕ್ಷ ರೂಪಾಯಿಯ ಹಳೆನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ನೀಡಿದ್ದರು. ಆದರೆ ವಾಪಸ್ ಬಂದ ಹೊಸ ನೋಟಿನಲ್ಲಿ 8 ಲಕ್ಷ ರೂಪಾಯಿ ಕಡಿಮೆ ಇದ್ದುದನ್ನು ರಮೇಶ್ ಗಮನಿಸಿ ಕೆಎಎಸ್ ಅಧಿಕಾರಿಯ ಗಮನಕ್ಕೆ ತಂದಿದ್ದರು. ಆಗ ರಮೇಶ್ ಮೇಲೆಯೇ ಅದನ್ನು ಕದ್ದ ಆರೋಪವನ್ನು ಅಧಿಕಾರಿ ಹೊರಿಸಿದರು. ಆ ಹಣವನ್ನು ನೀಡದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಒಂದು ಆಯಾಮ.
ಇನ್ನೊಂದು ಆಯಾಮ ಎಂದರೆ, ರಮೇಶ್ ಎಂಟು ಲಕ್ಷ ರೂಪಾಯಿಯನ್ನು ಬ್ಯಾಗ್‌ನಿಂದ ಪಡೆದು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಈ ಹಂತದಲ್ಲಿ ಚನ್ನಬಸಪ್ಪ ಅವರಿಗೆ ಕರೆ ಮಾಡಿದ ಭೀಮಾ ನಾಯಕ್ ರಮೇಶ್ ಜತೆ ಮಾತನಾಡಿ, ಹಣ ಹಿಂದಿರುಗಿಸಲು ಮನವೊಲಿಸುವಂತೆ ಸೂಚಿಸಿದ್ದರು ಎನ್ನುವುದು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News