ಮದುವೆಗಾಗಿ ಪ್ರೇಯಸಿಯ ಅಪಹರಣ, ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಡಿ.21: ಯುವ ವಕೀಲೆ ಜ್ಯೋತಿಕುಮಾರಿ ಹತ್ಯೆ ಪ್ರಕರಣದಲ್ಲಿ ಆಕೆಯ ಮಾಜಿ ಪ್ರಿಯಕರ ಹಾಗೂ ಬಿಎಂಟಿಸಿ ನಿರ್ವಾಹಕ ಎಂ.ಬಿ.ಮಧು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ನಿಕಟವರ್ತಿ ಶಿವಕುಮಾರ್ ಅಲಿಯಾಸ್ ಶಿವರಾಮಯ್ಯ ಕೂಡಾ ಪೊಲೀಸರ ಅತಿಥಿಯಾಗಿದ್ದಾನೆ.
ಕನಕಪುರ ಮೂಲದ ಮಧು ಕೊತ್ತನೂರು ದಿಣ್ಣೆ ಬಳಿ ವಾಸವಾಗಿದ್ದ. ಮಧು ಹಾಗೂ ಜ್ಯೋತಿ ಕನಕಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2007ರಿಂದ 2009ರವರೆಗೆ ಜತೆಗೆ ಪಿಯುಸಿ ಓದಿದ್ದರು. ಆಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅದಾಗ್ಯೂ 2010ರಲ್ಲಿ ಜ್ಯೋತಿ ತನ್ನ ಸಂಬಂಧಿ ಬಸವರಾಜು ಜತೆ ವಿವಾಹವಾದರು. ಮಧು ಜತೆಗಿನ ಸಂಪರ್ಕ ಕಡಿದುಕೊಂಡರು. ಹತಾಶನಾದ ಮಧು ವಿಷ ಸೇವಿಸಿದ್ದ. ಒಂದು ವಾರ ಚಿಕಿತ್ಸೆ ಬಳಿಕ ಆತ ಗುಣಮುಖನಾಗಿದ್ದ. ಜ್ಯೋತಿ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಪತಿ- ಪತ್ನಿ ಬೇರ್ಪಟ್ಟಿದ್ದರು. ಮಧು ಸಹಾಯದಿಂದ 2014ರಲ್ಲಿ ಬೆಂಗಳೂರಿಗೆ ಬಂದ ಜ್ಯೋತಿ ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿದ್ದರು.
"ಜ್ಯೋತಿಯ ಓದಿನ ವೆಚ್ಚ ಹಾಗೂ ವಸತಿ ವೆಚ್ಚವನ್ನು ಮಧು ನಿಭಾಯಿಸಿದ್ದ. ಪಿಜಿಗೆ ಮುಂಗಡ ಹಣವನ್ನೂ ಆತನೇ ನೀಡಿದ್ದ. ಜತೆಗೆ ಒಂದು ಹೊಂಡಾ ಆಕ್ಟಿವಾ ವಾಹನವನ್ನೂ ಕೊಡಿಸಿದ್ದ" ಎಂದು ಕುಟುಂಬ ಮೂಲಗಳು ಹೇಳಿವೆ. ಆಕೆ ವಾಪಸ್ಸಾಗಿರುವುದರಿಂದ ಜ್ಯೋತಿ ಮತ್ತೆ ತನ್ನ ಕೈ ಹಿಡಿಯುತ್ತಾಳೆ ಎಂದೇ ಮಧು ನಂಬಿದ್ದ. ಆದರೆ ಈ ವರ್ಷದ ಆರಂಭದಿಂದ ಆಕೆ ಮಧುವಿನಿಂದ ದೂರವಾಗಲು ಆರಂಭಿಸಿದ್ದು, ಸಮಸ್ಯೆಯ ಮೂಲ ಎಂದು ಪೊಲೀಸರು ಹೇಳಿದ್ದಾರೆ.
"ಮದುವೆ ಪ್ರಸ್ತಾವವನ್ನು ಆಕೆ ಇತ್ತೀಚೆಗೆ ನಿರಾಕರಿಸಿ, ಸ್ನೇಹಿತರಾಗಿಯಷ್ಟೇ ಇರೋಣ ಎಂದು ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಅಪಹರಿಸಿ ವಿವಾಹವಾಗಲು ಬಯಸಿದ್ದೆ. ಇದಕ್ಕೆ ಸಹಪಾಠಿ ಶಿವಕುಮಾರ್‌ನ ನೆರವು ಪಡೆದಿದ್ದೆ. ಜ್ಯೋತಿಯನ್ನು ಅಪಹರಿಸುವ ಕಾರು ಚಲಾಯಿಸಲು ಆತ ಒಪ್ಪಿಕೊಂಡ" ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ.
ಆಕೆಯನ್ನು ಮಡಿಕೇರಿಯಲ್ಲಿ ವಿವಾಹವಾಗಲು ಆತ ಬಯಸಿದ್ದ. ಯೋಜನೆಯಂತೆ ಆಕೆ ಬಸ್ಸಿನಿಂದ ಇಳಿಯುತ್ತಿದ್ದಂತೆ ಅಪಹರಿಸಿದರು. ಆಗ ಜ್ಯೋತಿ ಪ್ರತಿರೋಧ ಒಡ್ಡಿದಳು. ಮಧು ಆಕೆಯ ಕತ್ತನ್ನು ಪೇಪರ್ ಕಟ್ಟರ್‌ನಿಂದ ಇರಿದು ಹತ್ಯೆ ಮಾಡಿದ ಎಂದು ಪೊಲೀಸರು ವಿವರಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.