ಅಕ್ರಮ, ಅವ್ಯವಹಾರದ ಆರೋಪ: 11 ಅಧಿಕಾರಿಗಳ ಅಮಾನತು
ಬೆಂಗಳೂರು, ಡಿ.21: ರಾಯಚೂರು ಜಿಲ್ಲೆಯಲ್ಲಿ 2012-13ರಿಂದ 2015-16ನೆ ಸಾಲಿನವರೆಗೆ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವಲಪಮೆಂಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ಕಾರ್ಯಗತಗೊಳಿಸಿರುವ ಕಾಮಗಾರಿಗಳಲ್ಲಿ 'ಆರ್ಥಿಕ ಅವ್ಯವಹಾರ, ಆಡಳಿತಾತ್ಮಕ ಅವ್ಯವಹಾರ, ಕಳಪೆ ಕಾಮಗಾರಿ, ಹೆಚ್ಚುವರಿ ವೆಚ್ಚ, ಲೆಕ್ಕಪತ್ರ ನೀಡದಿರುವುದು, ಸಾಮಗ್ರಿಗಳ ಕೊರತೆ'ಯಂತಹ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯ ನಾಲ್ಕು ಜನ ಕಾರ್ಯಪಾಲಕ ಅಭಿಯಂತರರು, 3 ಜನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಇಬ್ಬರು ಸಹಾಯಕ ಅಭಿಯಂತರರು, ಇಬ್ಬರು ಕಿರಿಯ ಅಭಿಯಂತರರು ಸೇರಿದಂತೆ ಒಟ್ಟು 11 ಜನ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ ಅಮಾನತುಗೊಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಿಗೆ ಸಲ್ಲಿಸಲಾದ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗಿತ್ತು. ಈ ವಿಚಾರಣೆ ವರದಿಯ ಆಧಾರದ ಮೇಲೆ 2012-13ನೆ ಸಾಲಿನಿಂದ 2015-16ನೆ ಸಾಲಿನವರೆಗೆ ನಿರ್ವಹಿಸಿರುವ ಕೆಲಸಗಳಲ್ಲಿ ನಡೆದಿರುವ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 24 ವಿವಿಧ ಹಂತದ ಅಧಿಕಾರಿಗಳನ್ನು ಗುರುತಿಸಲಾಗಿತ್ತು. ಒಟ್ಟು 4,881 ಕೋಟಿ ರೂಪಾಯಿ ದುರ್ಬಳಕೆ ಮತ್ತು ಅವ್ಯವಹಾರ ಮೇಲ್ಟನೋಟಕ್ಕೆ ಸಾಬೀತಾಗಿರುವುದರಿಂದ ಈ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ರಾಯಚೂರಿನ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಕೆಲ ಅಧಿಕಾರಿಗಳ ವಿರುದ್ದ ಈಗಾಗಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ವಿಚಾರಣಾ ವರದಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.