ಕಪ್ಪು ಹಣ ರಕ್ಷಿಸುವ ಮಾರ್ಗಗಳ ಬಗ್ಗೆಯೂ ತನಿಖೆಯಾಗಬೇಕಾಗಿದೆ

Update: 2016-12-28 18:45 GMT

ಮಾನ್ಯರೆ,
ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ 500 ಮತ್ತು 1,000 ರೂ. ವೌಲ್ಯದ ನೋಟುಗಳನ್ನು ರದ್ದುಪಡಿಸಿ ದೇಶದಲ್ಲಿರುವ ಕಪ್ಪು ಹಣದ ಮಾಲಕರನ್ನು ಸದೆಬಡಿಯುವಂತಹ ಪ್ರಯತ್ನ ನಡೆಸಿದ್ದು ಕಠಿಣ ನಿರ್ಧಾರವಾಗಿದೆ. ದೇಶದಲ್ಲಿ ಆದಾಯ ತೆರಿಗೆ ಮತ್ತು ವಿಚಕ್ಷಣ ದಳ ಇವೆಲ್ಲವೂ ಇದ್ದು, ದೇಶದಲ್ಲಿರುವ ಕೆಲವೇ ಕೆಲವು ಕಪ್ಪುಹಣದ ಸರದಾರರನ್ನು ಏಕಕಾಲದಲ್ಲೇ ಸದೆ ಬಡಿದು, ಅವರೆಲ್ಲರನ್ನು ಬೀದಿಗೆ ತರಬಹುದಿತ್ತು. ಈಗ ಕಪ್ಪು ಹಣ ಹೊಂದಿರುವವರನ್ನು ಸಂಪೂರ್ಣವಾಗಿ ಸದೆಬಡಿಯುವುದು ಅಂದು ಕೊಂಡಷ್ಟು ಸುಲಭವಲ್ಲ. ಕಳ್ಳ ಹಣವನ್ನು ಸಂಪಾದಿಸುವ ಜನ ಅದನ್ನು ರಕ್ಷಿಸಿಕೊಳ್ಳುವ ಮಾರ್ಗವನ್ನೂ ವಾಣಿಜ್ಯ ಕ್ಷೇತ್ರದ ಮತ್ತು ಲೆಕ್ಕಪತ್ರ ಕ್ಷೇತ್ರದ ಮಹಾನ್ ಪಂಡಿತರಿಂದ ಕಲಿತುಕೊಂಡಿರುತ್ತಾರೆ. ಈಗಾಗಲೇ ಇಂತಹ ಹಣ ಟ್ರಸ್ಟ್‌ಗಳ ಹೆಸರಿನಲ್ಲಿ ಖಾತೆಗಳಿಗೆ ಜಮೆಯಾಗಿದೆ.
ದೇಶದಲ್ಲಿ ಬಹುತೇಕ ಅಧಿಕಾರಿಗಳು, ರಾಜಕಾರಣಿಗಳು ವೈಯಕ್ತಿಕವಾಗಿ ಇಲ್ಲವೇ ತಮ್ಮ ಕುಟುಂಬದ ಸದಸ್ಯರನ್ನೊಳಗೊಂಡ ಸೇವಾ ಸಂಸ್ಥೆಯ ಹೆಸರಿನ ಹಣ ತುಂಬಿಸಿಕೊಳ್ಳುವ ಟ್ರಸ್ಟ್‌ಗಳನ್ನು ಹೊಂದಿರುತ್ತಾರೆ. ನಮ್ಮ ದೇಶದಲ್ಲಿ ಧಾರ್ಮಿಕ ಸಂಸ್ಥೆಗಳು ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿಯೂ ಹಣ ದಾನದ ರೂಪದಲ್ಲಿ ಶೇಖರಣೆಯಾಗುತ್ತಿದೆ. ಅಲ್ಲದೆ ಬೇನಾಮಿ ಹೆಸರಿನ ಕಂಪೆನಿಗಳು ಮೊದಲಿನಿಂದಲೂ ಇದ್ದು, ನಿರ್ಜೀವ ಕಂಪೆನಿಗಳಲ್ಲೂ ಹಣ ಶೇಖರಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ನಂತರ ಈ 50 ದಿನಗಳ ಅವಧಿಯಲ್ಲಿ ಟ್ರಸ್ಟ್‌ಗಳ, ಧಾರ್ಮಿಕ ಸಂಸ್ಥೆಗಳ, ಎನ್‌ಜಿಒಗಳ ಮತ್ತು ಹತ್ತು ಕೋಟಿ ರೂ.ಗಿಂತ ಹೆಚ್ಚು ವ್ಯವಹಾರ ನಡೆಸಿರುವ ಕಂಪೆನಿಗಳು, ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಖಾತೆಗಳನ್ನು ಮತ್ತು ಅವುಗಳು ಶೇಖರಿಸಿಟ್ಟಿರುವ ಹಣದ ಬಗ್ಗೆ ತನಿಖೆಯಾಗಬೇಕು.

ಧಾರ್ಮಿಕ ಸಂಸ್ಥೆಗಳು ತಮಗೆ ದೇಣಿಗೆ ನೀಡಿದವರ ಹೆಸರುಗಳನ್ನು ಕಡ್ಡಾಯವಾಗಿ ರಶೀದಿಯೊಂದಿಗೆ ಆದಾಯ ತೆರಿಗೆ ಇಲಾಖೆಗೆ ನೀಡುವಂತಹ ಕಾನೂನು ಬದಲಾಗಬೇಕು. ಇಲ್ಲದಿದ್ದಲ್ಲಿ ಶ್ರೀಮಂತರು ಕಾನೂನು ಮುರಿದು ಜಾರಿಕೊಳ್ಳುತ್ತಾರೆ. ಬಡವರಿಗೆ ಮತ್ತೆ ಸಂಕಷ್ಟ ತಪ್ಪಿದ್ದಲ್ಲ. ಅಲ್ಲದೆ ಮುಂದಿನ ಕೆಲವು ತಿಂಗಳುಗಳ ಕಾಲ ದಿನಕೂಲಿ ನೌಕರರು, ಕಟ್ಟಡ ಕಾರ್ಮಿಕರು, ಚಲನಚಿತ್ರ ರಂಗದ ಕಾರ್ಮಿಕರು ತಮ್ಮ ನಿತ್ಯದ ಬದುಕಿಗೆ ಹಣ ದೊರೆಯದೆ ಬವಣೆ ಪಡಬೇಕಾದ ಪರಿಸ್ಥಿತಿ ನಿಶ್ಚಿತವಾಗಿ ಬರುವುದರಿಂದ ಕೇಂದ್ರ, ರಾಜ್ಯ ಸರಕಾರಗಳು ಇವರ ಬಗ್ಗೆ ಗಮನ ನೀಡಬೇಕು. ಮುಂದಿನ ಕೆಲವು ತಿಂಗಳುಗಳ ಕಾಲ ರಾಜ್ಯಗಳಲ್ಲಿ ಸಂಗ್ರಹಣೆಯಾಗುವ ವೃತ್ತಿತೆರಿಗೆ, ವ್ಯಾಪಾರ ತೆರಿಗೆ ಮತ್ತು ಮನರಂಜನಾ ತೆರಿಗೆ ಎಲ್ಲವೂ ಸಂಪೂರ್ಣ ನೆಲಕಚ್ಚುವುದರಿಂದ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಸಹಾಯ ಮಾಡಿ ಆರ್ಥಿಕ ಸಮತೋಲನ ಕಾಪಾಡಬೇಕಾಗುತ್ತದೆ.
     

Similar News