33 ಪಿಪಿಎ ಶಾಸಕರು ಬಿಜೆಪಿಗೆ: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ

Update: 2016-12-31 13:38 GMT

ಇಟಾನಗರ, ಡಿ.31: ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲದ(ಪಿಪಿಎ) 43 ಶಾಸಕರಲ್ಲಿ 33 ಮಂದಿ ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದಲ್ಲಿ ಬಿಜೆಪಿಯನ್ನು ಸೇರುವುದರೊಂದಿಗೆ ಅರುಣಾಚಲ ಪ್ರದೇಶದಲ್ಲಿಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ.

ವಿಧಾನಸಭಾಧ್ಯಕ್ಷ ತೇಂಝಿಂಗ್ ನೋರ್ಬು ತೋಂಗ್ಡೋಕ್‌ರ ಮುಂದೆ ಖಂಡು, ಶಾಸಕರ ಪೆರೇಡ್ ನಡೆಸಿದರು. ಅವರ ಬಿಜೆಪಿ ಸೇರ್ಪಡೆಯನ್ನು ತೋಂಗ್ಡೋಕ್ ಅಂಗೀಕರಿಸಿದರು.

ಪಿಪಿಎ ಅಧ್ಯಕ್ಷ ಕಾಹ್ಥಾ ಬೆಂಗಿಯಾ, ಗುರುವಾರ ತಡರಾತ್ರಿ ಮುಖ್ಯಮಂತ್ರಿ ಖಂಡು, ಉಪಮುಖ್ಯಮಂತ್ರಿ ಚೌನಾ ಮೈನ್ ಹಾಗೂ ಐವರು ಶಾಸಕರನ್ನು ತಾತ್ಕಾಲಿಕವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ ಬಳಿಕ ಬಿರುಸಿನ ರಾಜಕೀಯ ನಾಟಕ ಆರಂಭವಾಗಿತ್ತು.

ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಇಡಿಎ) ಸರಕಾರದ ಭಾಗಿದಾರ ಪಕ್ಷ ಪಿಪಿಎ, ನಿನ್ನೆ ಟಕಂ ಪಾರಿಯೊರನ್ನು ಹೊಸ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು.

ಆದರೆ, ಮೊದಲು ಪಾರಿಯೊರಿಗೆ ಬೆಂಬಲ ನೀಡಿದ್ದ ಬಹುಸಂಖ್ಯಾತ ಪಿಪಿಎ ಶಾಸಕರು ಬಳಿಕ ಖಂಡು ಪರ ನಿಷ್ಠೆ ಬದಲಾಯಿಸಿದಾಗ ಇಡೀ ರಾಜಕೀಯ ಸಮೀಕರಣವೇ ಬದಲಾಯ್ತು.

ಪಿಪಿಎ ಇಂದು ಸಹ ಹೊಂಚುನ್ ನಗಂದಂ, ಬಮಂಗ್ ಫಿಲಿಕ್ಸ್, ಪುಂಜಿ ಮಾರ ಹಾಗೂ ಪನಿ ತಾರಂ ಸಹಿತ ನಾಲ್ವರು ಶಾಸಕರನ್ನು ಅಮಾನತು ಮಾಡಿದೆ.

ಅರುಣಾಚಲದಲ್ಲಿ ಕೊನೆಗೂ ಕಮಲ ಅರಳಿದೆ. ರಾಜ್ಯದ ಜನರು ಹೊಸ ಸರಕಾರದಡಿಯಲ್ಲಿ ಹೊಸ ವರ್ಷದಲ್ಲಿ ಹೊಸ ಅರುಣೋದಯವನ್ನು ಕಾಣಲಿದ್ದಾರೆಂದು ವಿಧಾನಸಭೆಯ ಆವರಣದಲ್ಲಿ ಖಂಡು ಪತ್ರಕರ್ತರೊಡನೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News