ಕ್ರೀಡಾರಂಗದಲ್ಲಿ ಮಿಂಚಿದ ಮಹಿಳಾ ತಾರೆಯರು

Update: 2017-01-01 04:02 GMT


 ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಪದಕಗಳು ಸಿಕ್ಕಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಮತ್ತು ಸಾಕ್ಷಿ ಮಲಿಕ್ ಕುಸ್ತಿಯಲ್ಲಿ ಕಂಚು ಬಾಚಿಕೊಂಡರು. ದೀಪಾ ಕರ್ಮಾಕರ್ ಮಹಿಳೆಯರ ಜಿಮ್ನಾಸ್ಟಿಕ್‌ನಲ್ಲಿ ಪದಕ ಗೆಲ್ಲದಿದ್ದರೂ ಅನನ್ಯ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ನಂ.1 ಸ್ಥಾನ, ಕಬಡ್ಡಿ, ಹಾಕಿಯಲ್ಲ್ಲಿ ಭಾರತ ಮೇಲುಗೈ ಸಾಧಿಸಿತ್ತು.
 2016ರಲ್ಲಿ ಕಬಡ್ಡಿ, ಹಾಕಿ ಮತ್ತು ಕ್ರಿಕೆಟ್‌ನಲ್ಲಿ ಭಾರತದ ಸಾಧನೆ ಉತ್ತಮವಾಗಿತ್ತು. ಚೆಸ್, ಫುಟ್‌ಬಾಲ್ , ಟೆನಿಸ್‌ನಲ್ಲಿ ಭಾರತೀಯರಿಂದ ನಿರೀಕ್ಷಿತ ಸಾಧನೆ ಕಂಡು ಬರಲಿಲ್ಲ. 2016ರಲ್ಲಿ ಕ್ರೀಡಾಕ್ಷೇತ್ರದಲ್ಲಿ ಭಾರತೀಯರ ಸಾಧನೆಯ ಒಂದು ಹಿನ್ನೋಟ ಇಲ್ಲಿದೆ

ಬೆಳ್ಳಿ ಜಯಿಸಿದ ಸಿಂಧು ರಿಯೋ ಒಲಿಂಪಿಕ್ಸ್‌ಗೆ ಭಾರತೀಯ ಬ್ಯಾಡ್ಮಿಂಟನ್ ತಂಡ ಹೊರಟಾಗ ಮಾಜಿ ನಂ.1 ಸೈನಾ ನೆಹ್ವಾಲ್ ಪದಕ ಗೆಲ್ಲುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಬೇಗನೆ ನಿರ್ಗಮಿಸಿದರು. ಆದರೆ ಪಿ.ವಿ.ಸಿಂಧು ಸದ್ದಿಲ್ಲದೆ ಫೈನಲ್ ತಲುಪಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಪರ ಐತಿಹಾಸಿಕ ಸಾಧನೆ ಮಾಡಿದರು. ಬಳಿಕ ಸಿಂಧು ಚೀನಾ ನಾ ಓಪನ್ ಸೂಪರ್ ಸಿರೀಸ್‌ನಲ್ಲಿ ಚಾಂಪಿಯನ್ ಮತ್ತು ಹಾಂಕಾಂಗ್ ಸೂಪರ್ ಸಿರೀಸ್‌ನಲ್ಲಿ ಎರಡನೆ ಸ್ಥಾನ ಪಡೆದರು.
ರಿಯೋ ಒಲಿಂಪಿಕ್ಸ್
  ರಿಯೋ ಒಲಿಂಪಿಕ್ಸ್‌ನಲ್ಲಿ 118 ಮಂದಿಯ ತಂಡವನ್ನು ಹೊಂದಿದ್ದ ಭಾರತ ಕನಿಷ್ಟ 10 ಪದಕ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಟೆನಿಸ್ ತಾರೆ ಸಾನಿಯಾ ಮಿರ್ಝಾ, ಹಾಕಿ ತಂಡ, ಶೂಟರ್ ಅಭಿನವ್ ಭಿಂದ್ರಾ ಇವರೆಲ್ಲಾ ನಿರಾಸೆ ಮೂಡಿಸಿದಾಗ ಪಿ.ವಿ.ಸಿಂಧೂ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಅನಿರೀಕ್ಷಿತವಾಗಿ ಬೆಳ್ಳಿ ಪದಕ ಗೆದ್ದುಕೊಟ್ಟರು . ಅಲ್ಲದೆ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದುಕೊಟ್ಟರೆ, ಜಿಮ್ನಾಸ್ಟಿಕ್‌ನಲ್ಲಿ ಭವಿಷ್ಯದ ಆಶಾಕಿರಣವಾಗಿ ಗುರುತಿಸಿಕೊಂಡಿರುವ ದೀಪಾ ಕರ್ಮಾಕರ್ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾದರು.
ಹಾಕಿಯಲ್ಲಿ ಮಿಶ್ರಫಲ
   ಪುರುಷರ ಹಾಕಿಯಲ್ಲಿ ಭಾರತಕ್ಕೆ ಈ ವರ್ಷ ಮಿಶ್ರಫಲ

 ರಿಯೋ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಭಾರತೀಯರು, ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಬೆಳ್ಳಿ ಪದಕ , ಮಲೇಶ್ಯಾದಲ್ಲಿ ನಡೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ ಎರಡನೆ ಬಾರಿ ಚಾಂಪಿಯನ್ ಆಗಿತ್ತು. ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ದ್ವಿತೀಯ ಸ್ಥಾನ ಪಡೆಯಿತು. ಲಕ್ನೋದಲ್ಲಿ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತದ ಕಿರಿಯರ ತಂಡ ಪ್ರಶಸ್ತಿ ಗೆದ್ದ ಸಾಧನೆ ತೋರಿತು.
 ಕಳೆದ ನವೆಂಬರ್‌ನಲ್ಲಿ ಮಹಿಳಾ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಚೀನವನ್ನು 2-1 ಸೋಲಿಸಿ ಚೊಚ್ಚಲ ಸ್ವರ್ಣ ಜಯಿಸಿತ್ತು.
  ಭಾರತದ ನರೀಂದರ್ ಬಾತ್ರಾ ಅವರು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಭಾರತಕ್ಕೆ ಹೆಮ್ಮೆ ತರುವ ವಿಷಯವಾಗಿದೆ.
ಭಾರತದ ಹಾಕಿ ತಂಡದ ನಾಯಕರಾಗಿದ್ದ ಸರ್ದಾರ್ ಸಿಂಗ್ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡರು. ಬಳಿಕ ನಾಯಕತ್ವವನ್ನು ಕಳೆದುಕೊಂಡರು. ಪಿ.ಆರ್.ಶ್ರೀಜೇಶ್ ಹೊಸ ನಾಯಕರಾದರು. ಮಹಿಳಾ ತಂಡದಲ್ಲೂ ಬದಲಾವಣೆ ಆಗಿತ್ತು. ರಿತು ರಾಣಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.
ಗಾಲ್ಫ್

ಶ್ರೀಮಂತರ ಆಟ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಗಾಲ್ಫ್‌ನಲ್ಲಿ ಅದಿತಿ ಅಶೋಕ್ ಭವಿಷ್ಯದ ಆಶಾಕಿರಣವಾಗಿದ್ದಾರೆ. ಇಂಡಿಯನ್ ಓಪನ್ ಗಾಲ್ಫ್ ಟೂರ್ನಿ ಮತ್ತು ಕತಾರ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವಮಟ್ಟದಲ್ಲಿ ಮಿಂಚುವ ಸೂಚನೆ ನೀಡಿದ್ದಾರೆ. ಬಿಲ್ಲಿಯರ್ಡ್ಸ್‌ನಲ್ಲಿ ಪಂಕಜ್ ಅಡ್ವಾಣಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಗೆದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1

ದೇಶದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್‌ನಲ್ಲಿ ಈ ವರ್ಷ ಭಾರತದ ಸಾಧನೆ ಗಮನಾರ್ಹವಾಗಿದೆ. ಈ ವರ್ಷ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪೂರ್ವ ಸಾಧನೆ ಮಾಡಿದೆ.
ಆಡಿದ 12 ಪಂದ್ಯಗಳಲ್ಲಿ ಭಾರತ ಒಂಬತ್ತರಲ್ಲಿ ಜಯ ಸಾಧಿಸಿದೆ. ಸತತ ಮೂರು ಸರಣಿ ಗೆಲುವು, ಮತ್ತು ಸೋಲರಿಯದ ಅಜೇಯ ಸಾಧನೆ ಈ ವರ್ಷದ ವಿಶೇಷ. ವೆಸ್ಟ್‌ಇಂಡೀಸ್ ಎದುರು 2-0, ನ್ಯೂಝಿಲ್ಯಾಂಡ್ ಎದುರು 3-0, ಇಂಗ್ಲೆಂಡ್ ಎದುರು 4-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.
ಕೊಹ್ಲಿಯ ಭರ್ಜರಿ ಕೊಯ್ಲು
   ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತಮ ಸಾಧನೆ ಮಾಡಿದ್ಧಾರೆ. 3 ದ್ವಿಶತಕ, ಒಂದು ಶತಕ ಸಹಿತ ಈ ವರ್ಷ 75.93ರ ಸರಾಸರಿಯಲ್ಲಿ 1,215 ರನ್ ದಾಖಲಿಸಿದ ಸಾಧನೆ ಕೊಹ್ಲಿಯದ್ದು. ಏಕದಿನ ಕ್ರಿಕೆಟಿನಲ್ಲಿ 739 ರನ್ ಮತ್ತು ಟ್ವೆಂಟಿ-20 ಕ್ರಿಕೆಟ್‌ನಲ್ಲಿ 641 ರನ್ ದಾಖಲಿಸಿದ್ದರು.
ಚುಟುಕು ಕ್ರಿಕೆಟ್

 ಏಕದಿನ ಮತ್ತು ಟಿ-20 ಕ್ರಿಕೆಟ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಆಡಿದ ಭಾರತೀಯ ತಂಡಕ್ಕೆ ಮಿಶ್ರಫಲ ದಕ್ಕಿದೆ.

* ಬಾಂಗ್ಲಾದಲ್ಲಿ ನಡೆದ ಏಶ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾ ಎದುರು ಗೆದ್ದ ಭಾರತಕ್ಕೆ ಚಾಂಪಿಯನ್ ಮುಕುಟ.

* ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿ ಪಂದ್ಯಾಟದಲ್ಲಿ ಭಾರತೀಯರಿಗೆ 4-1ರಿಂದ ಮುಖಭಂಗ. * ಟಿ-20 ಸರಣಿಯಲ್ಲಿ ಇದಿರೇಟು ನೀಡಿದ ಭಾರತ. 3-0 ಅಂತರದಿಂದ ಸರಣಿ ಕ್ಲೀನ್‌ಸ್ವೀಪ್ ಸಾಧನೆ.

 * ಜಿಂಬಾಬ್ವೆ ಪ್ರವಾಸಕ್ಕೆ ಧೋನಿ ನೇತೃತ್ವದಲ್ಲಿ ತೆರಳಿದ ಭಾರತೀಯ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಅಶ್ವಿನ್, ಜಡೇಜಾ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಕಾರಣ ಹೆಚ್ಚಿನವರು ಹೊಸ ಆಟಗಾರರಾಗಿದ್ದರು. ಅನನುಭವಿ ಆಟಗಾರರಿದ್ದ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ಧೋನಿ, ಸರಣಿಯನ್ನು 3-0 ಅಂತರದಿಂದ ಗೆಲ್ಲುವಲ್ಲಿ ಪ್ರಧಾನ ಪಾತ್ರ ವಹಿಸಿದರು.

* ಜಿಂಬಾಬ್ವೆ ಎದುರಿನ ಟಿ-20 ಸರಣಿಯಲ್ಲಿ ಭಾರತ 2-1ರ ಗೆಲುವು ಸಾಧಿಸಿತು.

* ಶ್ರೀಲಂಕಾ ಎದುರಿನ ಟಿ-20 ಸರಣಿಯಲ್ಲಿ ಭಾರತಕ್ಕೆ 2-1 ಜಯ.

*ನ್ಯೂಝಿಲ್ಯಾಂಡ್ ಎದುರಿನ ಏಕದಿನ ಸರಣಿ- ಭಾರತಕ್ಕೆ 3-2ರ ಗೆಲುವು.

* ಮಾರ್ಚ್- ಎಪ್ರಿಲ್‌ನಲ್ಲಿ ಸ್ವದೇಶದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ನಲ್ಲೇ ಸೋತು ಹೊರಬಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ರೋಮಾಂಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಅಶ್ವಿನ್ ಅಗ್ರ
 ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿಶ್ವದ ನಂ.1 ತಂಡ ಎನಿಸಿಕೊಂಡಿತು.ಭಾರತದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶ್ವದ ನಂ.1 ಟೆಸ್ಟ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಆಲ್‌ರೌಂಡರ್ ರವೀಂದ್ರ ಜಡೇಜ ನಂ.2 ಬೌಲರ್ ಆಗಿ ಹೊರಹೊಮ್ಮಿದರು. ಅವರು ಟೆಸ್ಟ್‌ನಲ್ಲಿ ಪಡೆದಿರುವ ವಿಕೆಟ್‌ಗಳ ಸಂಖ್ಯೆಯನ್ನು 200ಕ್ಕೆ ಏರಿಸಿದರು. 12 ಟೆಸ್ಟ್‌ಗಳಲ್ಲಿ 72 ವಿಕೆಟ್ ಪಡೆದರು.
*ಭಾರತ ಹ್ಯಾಟ್ರಿಕ್ ಚಾಂಪಿಯನ್
 ಅಂಡರ್-19 ಏಶ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 34 ರನ್‌ಗಳ ಜಯ ಗಳಿಸಿದ ಭಾರತ ಹ್ಯಾಟ್ರಿಕ್ ಚಾಂಪಿಯನ್ ಆಗಿ ಟ್ರೋಫಿಯನ್ನು ಬಾಚಿಕೊಂಡಿದೆ.
ಭಾರತ ಈ ಮೊದಲು ಯುಎಇ(2014) ಮತ್ತು ಮಲೇಷ್ಯಾ(2012)ದಲ್ಲಿ ನಡೆದ ಏಷ್ಯಾ ಕಪ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.

 ದೇಶದ ಮಹಿಳಾ ಕ್ರಿಕೆಟ್ ತಂಡದ ಸಾಧನೆಯೂ ಕಡಿಮೆಯೇನಿಲ್ಲ. ಏಶ್ಯಾಕಪ್ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಗೆದ್ದರು . *ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತದ ಕರುಣ್ ನಾಯರ್ ತ್ರಿಶತಕ (303) ದಾಖಲಿಸಿ ಅನನ್ಯ ಸಾಧನೆ ಮಾಡಿದರು. ಇದೇ ವೇಳೆ ಅವರ ಕರ್ನಾಟಕದ ರಣಜಿ ತಂಡದ ಸಹ ಆಟಗಾರ ಲೋಕೇಶ್ ರಾಹುಲ್ 1ರನ್‌ನಿಂದ ದ್ವಿಶತಕ ವಂಚಿತಗೊಂಡರು.
*ಭಾರತದ ಮಹಿಳಾ ಕ್ರಿಕೆಟರ್ ಸ್ಮತಿ ಮಂಧಾನ ಐಸಿಸಿ ವರ್ಷದ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು 8 ಏಕದಿನ ಪಂದ್ಯಗಳಲ್ಲಿ 320ರನ್, ಟ್ವೆಂಟಿ-20 ಯಲ್ಲಿ 286 ರನ್ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯದ ಬಿಗ್ ಬ್ಯಾಶ್ ಲೀಗ್‌ನಲ್ಲಿ ಅವಕಾಶ ಪಡೆದ ಎರಡನೆ ಆಟಗಾರ್ತಿ. ಹರ್ಮನ್‌ಪ್ರೀತ್ ಕೌರ್ ಬಿಬಿಎಲ್‌ನಲ್ಲಿ ಸ್ಥಾನ ಪಡೆದ ಮೊದಲ ಆಟಗಾರ್ತಿ.
ಕಬಡ್ಡಿಯಲ್ಲಿ ಮೂರನೆ ಬಾರಿ ವಿಶ್ವ ಚಾಂಪಿಯನ್

   ಕಬಡ್ಡಿ: ಕಬಡ್ಡಿಯಲ್ಲಿ ವಿಶ್ವದ ಅಗ್ರಗಣ್ಯ ತಂಡವಾಗಿರುವ ಭಾರತ, ಈ ವರ್ಷ ಸ್ವದೇಶದಲ್ಲಿ ನಡೆದ ಕಬಡ್ಡಿ ವಿಶ್ವಕಪ್‌ನ ಫೈನಲ್‌ನಲ್ಲಿ ಇರಾನ್ ತಂಡವನ್ನು ಸೋಲಿಸಿ ಮೂರನೆ ಬಾರಿಗೆ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೆಬ್ರವರಿಯಲ್ಲಿ ಗುವಾಹಟಿಯಲ್ಲಿ ನಡೆದ ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಚಾಂಪಿಯನ್‌ಶಿಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತು.

ಟೆನಿಸ್: ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ.. ಮುಂತಾದ ಟೆನಿಸ್ ದಿಗ್ಗಜರನ್ನು ಹೊಂದಿದ್ದ ಭಾರತೀಯ ತಂಡ ರಿಯೋ ಒಲಿಂಪಿಕ್ಸ್‌ನಲ್ಲಿ ಕನಿಷ್ಟ ಒಂದು ಪದಕವನ್ನಾದರೂ ಗೆದ್ದು ತರುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು.ಭಾರತೀಯ ಟೆನಿಸ್ ತಂಡ ಬರಿಗೈಯಲ್ಲಿ ವಾಪಸಾಯಿತು.

* ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವಬಣದ ಪ್ಲೇ ಆಫ್ ಪಂದ್ಯ ಸೆಪ್ಟೆಂಬರ್‌ನಲ್ಲಿ ನಡೆದಿದ್ದು ಸ್ಪೇನ್ ಎದುರು ಭಾರತಕ್ಕೆ 0-5 ಅಂತರದ ಹೀನಾಯ ಸೋಲು.

* ದಕ್ಷಿಣ ಕೊರಿಯಾ ಎದುರು ನಡೆದ ಪಂದ್ಯದಲ್ಲಿ ಭಾರತಕ್ಕೆ 4-1 ಅಂತರದ ಗೆಲುವು.

* ಭಾರತ ಡೇವಿಸ್ ಕಪ್ ತಂಡದ ಆಟವಾಡದ ನಾಯಕನ ಹುದ್ದೆಯಿಂದ ಆನಂದ್ ಅಮೃತರಾಜ್‌ಗೆ ಗೇಟ್‌ಪಾಸ್. ಮಹೇಶ್ ಭೂಪತಿ ನೇಮಕ.

ಸಾನಿಯಾ ನಂ.1
 ವೈಯಕ್ತಿಕವಾಗಿ ಸಾನಿಯಾ ಮಿರ್ಝಾ ವಿಶ್ವಮಟ್ಟದಲ್ಲಿ ಡಬಲ್ಸ್ ವಿಭಾಗದಲ್ಲಿ ವಿಶ್ವದ ನಂ.1 ಆಟಗಾರ್ತಿಯಾಗಿ ಗುರುತಿಸಿಕೊಂಡರು. ಆಸ್ಟ್ರೇಲಿಯನ್ ಓಪನ್‌ನ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವುದರೊಂದಿಗೆ 6ನೆ ಡಬಲ್ಸ್ ಗ್ರಾನ್ ಸ್ಲಾಮ್ ಕಿರೀಟ ಧರಿಸಿದ್ದರು.

40ರ ಹರೆಯದ ಲಿಯಾಂಡರ್ ಪೇಸ್ ತಮ್ಮಲ್ಲಿನ್ನೂ ಆಡುವ ಸಾಮರ್ಥ್ಯವಿದೆ ಎಂಬುದನ್ನು ಮಿಶ್ರ ಡಬಲ್ಸ್ ಆಟದಲ್ಲಿ ತೋರಿಸಿಕೊಟ್ಟರು. ರೋಹನ್ ಭೋಪಣ್ಣ, ಸೋಮದೇವ್ ಬರ್ಮನ್, ಯೂಕಿ ಬಾಂಭ್ರಿ ಮುಂತಾದ ಆಟಗಾರರು ವಿಶ್ವಮಟ್ಟದಲ್ಲಿ ಸುಧಾರಿತ ಪ್ರದರ್ಶನ ತೋರಿದರು.

ಸೈನಾ ವೈಫಲ್ಯ
ಬ್ಯಾಡ್ಮಿಂಟನ್ ಆಟದಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ತಾವು ವಿಶ್ವಮಟ್ಟದ ಆಟಗಾರರು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟರು. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವದ ಮಾಜಿ ನ.1 ಆಟಗಾರ್ತಿ ಸೈನಾ ಒಲಿಂಪಿಕ್ಸ್ ಸೇರಿದಂತೆ ಬಹುತೇಕ ಟೂರ್ನಿಯಲ್ಲಿ ವಿಫಲರಾದರೆ, ಸಿಂಧೂ ಭಾರತೀಯರ ಆಶಾಕಿರಣವಾಗಿ ಮೂಡಿ ಬಂದರು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಕ ಗೆದ್ದ ಸಿಂಧು ಆ ಬಳಿಕ ನಡೆದ ಮಲೇಶ್ಯಾ ಮಾಸ್ಟರ್ಸ್ ಟೂರ್ನಿ ಮತ್ತು ಚೀನಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರೆ, ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆದರು. ಇದರೊಂದಿಗೆ ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾದರು.

ಚೆಸ್: ಅಝರ್‌ಬೈಜಾನ್‌ನ ಬಾಕು ಎಂಬಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಪುರುಷರ ತಂಡ ನಾಲ್ಕನೇ ಮತ್ತು ಮಹಿಳೆಯರ ತಂಡ ಐದನೇ ಸ್ಥಾನ ಗಳಿಸಿತು.

ಪಂಕಜ್ ಅಡ್ವಾಣಿ: 11ನೆ ಬಾರಿ ಪಂಕಜ್ ಅಡ್ವಾಣಿ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್ ಆಗಿ ದಾಖಲೆ ಬರೆದರು.
ನೀರಜ್ ಚೋಪ್ರಾ: ಜಾವಲಿನ್ ಎಸೆತಗಾರ್ತಿ ನೀರಜ್ ಚೋಪ್ರಾ ಅಂಡರ್ 20 ವಿಭಾಗದಲ್ಲಿ 86.48 ಮೀಟರ್  ಚಿನ್ನ ಪಡೆದು ದಾಖಲೆ ನಿರ್ಮಿಸಿದರು.
,,,,,,,,,,

*ವೆಸ್ಟ್ ಇಂಡೀಸ್ ಚಾಂಪಿಯನ್ ಭಾರತದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು 4 ವಿಕೆಟ್ ಅಂತರದಲ್ಲಿ ಮಣಿಸಿದ ವೆಸ್ಟ್‌ಇಂಡೀಸ್ ಎರಡನೆ ಬಾರಿ ಟ್ರೋಫಿ ಬಾಚಿಕೊಂಡಿತು.ಇದರೊಂದಿಗೆ ಎರಡನೆ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
 ಮಹಿಳಾ ಟ್ವೆಂಟಿ-20ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿದ ವೆಸ್ಟ್‌ಇಂಡೀಸ್ ಮೊದಲ ವಿಶ್ವಕಪ್ ಟ್ರೋಫಿಯನ್ನು ಎತ್ತಿಕೊಂಡಿತು.
*ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ
 ಬ್ರೆಝಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರು ಅಪ್ರತಿಮ ಸಾಧನೆ ಮಾಡಿದರು. ಭಾರತ 2 ಚಿನ್ನ , 1 ಬೆಳ್ಳಿ ಮತ್ತು 1 ಕಂಚು ಪಡೆಯಿತು.ಪುರುಷರ ಹೈಜಂಪ್‌ನಲ್ಲಿ ಮಾರಿಯಪ್ಪನ್ ತಂಗವೇಲು ಮತ್ತು ಜಾವಲಿನ್ ಎಸೆತದಲ್ಲಿ ದೇವೇಂದ್ರ ಜಝಾರಿಯಾ ಚಿನ್ನ ಗೆದ್ದರು. ಮಹಿಳಾ ಶೂಟಿಂಗ್‌ನಲ್ಲಿ ದೀಪಾ ಮಲಿಕ್ ಬೆಳ್ಳಿ ಮತ್ತು ಪುರುಷರ ಹೈಜಂಪ್‌ನಲ್ಲಿ ವರುಣ್ ಸಿಂಗ್ ಭಾಟಿಯಾ ಕಂಚು ಪಡೆದರು.
*ಹೈದರಾಬಾದ್ ಐಪಿಎಲ್ ಚಾಂಪಿಯನ್
ಬೆಂಗಳೂರಿನಲ್ಲಿ ನಡೆದ ಒಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಗಳಿಸಿದ ಸನ್ ರೈಸರ್ಸ್‌ ಹೈದರಾಬಾದ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
*ಮರ್ರೆ ವಿಂಬಲ್ಡನ್ ಚಾಂಪಿಯನ್
ವಿಂಬಲ್ಡನ್ ಟೆನಿಸ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಮಹಿಳಾ ಟೆನಿಸ್‌ನಲ್ಲಿ ಸೆರೆನಾ ವಿಲಿಯಮ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
*ಪೋರ್ಚುಗಲ್ ಯುರೋ ಚಾಂಪಿಯನ್
ಫ್ರಾನ್ಸ್‌ನಲ್ಲಿ ನಡೆದ ಯುರೋ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ ಪೋರ್ಚುಗಲ್ ಯುರೋಪಿಯನ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಒಲಿಂಪಿಕ್ಸ್ ಫುಟ್ಬಾಲ್ ಚಿನ್ನ ಪಡೆದ ಬ್ರೆಝಿಲ್
ಸ್ಟಾರ್ ಆಟಗಾರ ನೇಮಾರ್ ನಾಯಕತ್ವದ ಬ್ರೆಝಿಲ್ ತಂಡ ಇಲ್ಲಿ ನಡೆದ ಒಲಿಂಪಿಕ್ಸ್ ಫುಟ್ಬಾಲ್‌ನ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಲ್ಲಿ ಆಘಾತ ನೀಡಿ ಮೊದಲ ಬಾರಿ ಚಿನ್ನ ಬಾಚಿಕೊಂಡಿದೆ.
 *ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ಗೆ ಕಾಲಿರಿಸಿ ಡಬ್ಲುಟಿಒ ಏಶ್ಯಾ ಪೆಸಿಫಿಕ್ ಸೂಪರ್ ಮಿಡ್ಲ್‌ವೈಟ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
 * ಟೆನಿಸ್ ತಾರೆ ಸಾನಿಯಾ ಮಿರ್ಝಾ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪದ್ಮಭೂಷಣ, ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

,,,,,,,,,,,
*ವಿದಾಯ
ಶರವೇಗದ ಸರದಾರ ಬೋಲ್ಟ್
  ಶರವೇಗದ ಸರದಾರ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಚಿನ್ನದೊಂದಿಗೆ ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದಾರೆ.ಬೋಲ್ಟ್ ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ 9 ಚಿನ್ನ ಪಡೆದಿದ್ದರು.
ಚಿನ್ನದ ಮೀನು ಫೆಲ್ಪ್
ಒಲಿಂಪಿಕ್ಸ್‌ನಲ್ಲಿ ಒಟ್ಟು 23 ಚಿನ್ನ ಪಡೆದಿರುವ ಅಮೆರಿಕದ ಚಿನ್ನದ ಮೀನು ಖ್ಯಾತಿಯ ಈಜುಪಟು ಮೈಕಲ್ ಫೆಲ್ಪ್ಸ್ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೂಲಕ ಒಲಿಂಪಿಕ್ಸ್‌ಗೆ ವಿದಾಯ ಹೇಳಿದರು.
ಸ್ಟೀವನ್ ಗೆರಾರ್ಡ್
ಇಂಗ್ಲೆಂಡ್ ಫುಟ್ಬಾಲ್ ತಂಡದ ಮಾಜಿ ನಾಯಕ ಸ್ಟೀವನ್ ಗೆರಾರ್ಡ್ ವೃತ್ತಿಪರ ಫುಟ್ಬಾಲ್‌ನಿಂದ ನಿರ್ಗಮಿಸಿದರು.

ಅಭಿನವ್ ಬಿಂದ್ರಾ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ ತಂದುಕೊಟ್ಟ ಶೂಟರ್ ಅಭಿನವ್ ಬಿಂದ್ರಾ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತಗೊಂಡರು. ಅವರು ಈ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದರೊಂದಿಗೆ ಶೂಟಿಂಗ್‌ಗೆ ವಿದಾಯ ಹೇಳಿದರು.

 ಮೆಕಲಮ್, ದಿಲ್ಶನ್, ಚಂದ್ರಪಾಲ್, ಎಡ್ವರ್ಡ್ ನ್ಯೂಝಿಲೆಂಡ್‌ನ ಬ್ಯಾಟ್ಸ್‌ಮನ್ ಹಾಗೂ ನಾಯಕ ಬ್ರೆಂಡನ್ ಮೆಕಲಮ್, ಆಸ್ಟ್ರೇಲಿಯದ ಕ್ರಿಕೆಟಿಗ ಶೇನ್ ವ್ಯಾಟ್ಸನ್, ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ವೆಸ್ಟ್‌ಇಂಡೀಸ್‌ನ ಶಿವನಾರಾಯಣ್ ಚಂದ್ರಪಾಲ್ ಮತ್ತು ಇಂಗ್ಲೆಂಡ್‌ನ ಮಹಿಳಾ ತಂಡದ ನಾಯಕಿ ಚಾರ್ಲೊಟ್ ಎಡ್ವರ್ಡ್ಸ್ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಅನಾ ಇವಾನೊವಿಕ್ ಟಿನಿಸ್‌ನಿಂದ ನಿರ್ಗಮಿಸಿದರು. ಫಾರ್ಮುಲಾ ಒನ್ ಮಾಜಿ ವಿಶ್ವ ಚಾಂಪಿಯನ್ ನಿಕೊ ರಾಸ್‌ಬರ್ಗ್, ಜೆನ್ಸನ್ ಬಟನ್, ಫುಟ್ಬಾಲ್ ಆಟಗಾರ್ತಿ ಬೆಂಬೆಮ್ ದೇವಿ ವೃತ್ತಿ ಬದುಕಿನಿಂದ ನಿವೃತ್ತರಾದರು.
,,,,,,,,,,
ಕ್ರಿಕೆಟ್‌ಗೆ ಮರಳಿ ಪ್ರವೇಶ

*ಇಂಗ್ಲೆಂಡ್‌ನ ಕ್ರಿಕೆಟಿಗ ಗ್ಯಾರೆಟ್ ಬಟ್ಟಿ 11 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. *ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ 8 ವರ್ಷಗಳ ಬಳಿಕ ತಂಡಕ್ಕೆ ವಾಪಸಾಗಿದ್ದರು.
*ಬಾಂಗ್ಲಾದ 35ರ ಹರೆಯದ ಮೊಶ್ರಾಫೆ ಹುಸೈನ್ 8 ವರ್ಷಗಳ ಬಳಿಕ ಪ್ರವೇಶ ಗಿಟ್ಟಿಸಿಕೊಂಡಿದ್ದರು.
*ನ್ಯೂಝಿಲೆಂಡ್‌ನ ನೀಲ್ ಬ್ರೂಮ್ 7 ವರ್ಷಗಳ ಬಳಿಕ ಏಕದಿನ ತಂಡಕ್ಕೆ ಮರು ಪ್ರವೇಶ ಗಿಟ್ಟಿಸಿಕೊಂಡು ಬಾಂಗ್ಲಾ ವಿರುದ್ಧ ಚೊಚ್ಚಲ ಶತಕ ದಾಖಲಿಸಿದ್ದರು.
 *ಆಸ್ಟ್ರೇಲಿಯದ ಶಾನ್ ಟೇಟ್ ಮತ್ತು ಪಾಕಿಸ್ತಾನದ ಸೊಹೈಲ್ ಖಾನ್ 5 ವರ್ಷಗಳ ಬಳಿಕ, ಭಾರತದ ಆಶೀಶ್ ನೆಹ್ರಾ ಶ್ರೀಲಂಕಾದ ಪರ್ವೆಝ್ ಮಹರೂಫ್ 4 ವರ್ಷಗಳ ಬಳಿಕ ಪ್ರವೇಶ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News