ನಮ್ಮನ್ನು ಕೆಣಕಿದರೆ ಬಲಪ್ರಯೋಗಕ್ಕೆ ಹಿಂಜರಿಯುವುದಿಲ್ಲ:ಜನರಲ್ ರಾವತ್

Update: 2017-01-01 09:48 GMT

ಹೊಸದಿಲ್ಲಿ,ಜ.1: ‘‘ನಾವು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತೇವೆ, ಆದರೆ ನಮ್ಮನ್ನು ಕೆಣಕಿದರೆ ಬಲಪ್ರಯೋಗಕ್ಕೆ ನಾವು ಹಿಂಜರಿಯುವುದಿಲ್ಲ’’ ಎಂದು ಭೂಸೇನೆಯ 27ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಜನರಲ್ ಬಿಪಿನ್ ರಾವತ್ ಅವರು ರವಿವಾರ ಇಲ್ಲಿ ಎಚ್ಚರಿಕೆ ನೀಡಿದರು.

 ಸೌತ್ ಬ್ಲಾಕ್‌ನ ಹೊರಗೆ ಗೌರವರಕ್ಷೆಯನ್ನು ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂಂದಿಗೆ ಮಾತನಾಡಿದ ಅವರು, ‘‘ನಾವು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತೇವೆ. ಆದರೆ ಅದರ ಅರ್ಥ ನಾವು ದುರ್ಬಲರೆಂದಲ್ಲ. ನಾವು ಸಂಪೂರ್ಣವಾಗಿ ಸಮರ್ಥರಿದ್ದೇವೆ ಮತ್ತು ಸನ್ನದ್ಧರಾಗಿದ್ದೇವೆ. ಅಗತ್ಯವಾದರೆ ಬಲವನ್ನು ಪ್ರಯೋಗಿಸಲು ನಾವು ಹಿಂಜರಿಯುವುದಿಲ್ಲ ’’ಎಂದು ಹೇಳಿದರು.

ಭೂಸೇನೆಯ ದಂಡನಾಯಕನಾಗಿ ತನ್ನನ್ನು ನೇಮಕಗೊಳಿಸುವಲ್ಲಿ ತನಗಿಂತಲೂ ಹೆಚ್ಚಿನ ಸೇವಾ ಹಿರಿತನವನ್ನು ಹೊಂದಿರುವ ಇಬ್ಬರು ಅಧಿಕಾರಿಗಳ ಕಡೆಗಣನೆ ಕುರಿತಂತೆ ಅವರು,ಅದು ಸರಕಾರದ ನಿರ್ಧಾರವಾಗಿದೆ ಮತ್ತು ತಾನದನ್ನು ಸಂಪೂರ್ಣನಮ್ರತೆಯೊಂದಿಗೆ ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.

‘‘ನನಗೆ ಆ ಇಬ್ಬರೂ ಅಧಿಕಾರಿಗಳ ಬಗ್ಗೆ ಗೌರವವಿದೆ. ನಾನು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇನೆ. ಸೇನೆಯ ಒಗ್ಗಟ್ಟು ಮತ್ತು ಶಕ್ತಿಯನ್ನು ಇನ್ನಷ್ಟು ಬಲಗೊಳಿಸಲು ಭವಿಷ್ಯದಲ್ಲಿಯೂ ನಾವು ಜೊತೆಯಾಗಿ ಕಾರ್ಯ ನಿರ್ವಹಿಸುವ ಆಶಯವನ್ನು ನಾನು ಹೊಂದಿದ್ದೇನೆ ’’ ಎಂದು ಜ.ರಾವತ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News