‘ಪ್ರವಾಸಿ ಭಾರತೀಯ ದಿವಸ್’ಗೆ ನಾಳೆ ವಿದ್ಯುಕ್ತ ಚಾಲನೆ
ಬೆಂಗಳೂರು, ಜ. 6: ಪ್ರವಾಸದ ಮಹತ್ವ ಸಾರುವ ಹದಿನಾಲ್ಕನೇ ‘ಪ್ರವಾಸಿ ಭಾರತೀಯ ದಿವಸ್’ ಸಮಾರಂಭಕ್ಕೆ ಉದ್ಯಾನನಗರಿ ಬೆಂಗಳೂರು ಸಜ್ಜುಗೊಂಡಿದ್ದು, ಇಲ್ಲಿನ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಆಕರ್ಷಣೆಯ ಕೇಂದ್ರವಾಗಿದೆ.
ನಾಳೆ(ಜ.7)ಯಿಂದ ಮೂರು ದಿನಗಳ ಕಾಲ ಜರುಗಲಿರುವ ‘ಪ್ರವಾಸಿ ಭಾರತೀಯ ದಿವಸ್’ ಕಾರ್ಯಕ್ರಮ ಸ್ಥಳದಲ್ಲಿ ಕರ್ನಾಟಕ ರಾಜ್ಯದ ಪ್ರೇಕ್ಷಣೀಯ ಸ್ಥಳಗಳು ಸೇರಿದಂತೆ ಭಾರತದ ಪ್ರವಾಸಿ ತಾಣಗಳು ಅನಾವರಣಗೊಳ್ಳುತ್ತಿರುವಂತೆ ಸಜ್ಜುಗೊಳ್ಳುತ್ತಿದ್ದು ಸಿದ್ಧತೆಗಳೆಲ್ಲವೂ ಪೂರ್ಣಗೊಂಡಿವೆ.
ವಿದೇಶಾಂಗ ಇಲಾಖೆ ಉಸ್ತುವಾರಿಯನ್ನು ಮೂರು ದಿನಗಳ ಸಮ್ಮೇಳನದಲ್ಲಿ ದೇಶದ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಜಾನಪದ ವೈಭವ ಸೇರಿದಂತೆ ವಿವಿಧ ಸಂಸ್ಕೃತಿಗಳ ಪ್ರಕಾರಗಳನ್ನು ಪರಿಚಯಿಸುವ ಪ್ರದರ್ಶನ ಏರ್ಪಡಿಸಲಾಗಿದೆ.
ಅರಮನೆಯ ಪ್ರವೇಶದ್ವಾರ: ಪ್ರವಾಸಿ ಭಾರತೀಯ ದಿವಸ್‌ಗೆ ವಿವಿಧ ರಾಜ್ಯಗಳನ್ನು ಪರಿಚಯಿಸುವ ವಸ್ತು ಪ್ರದರ್ಶನ ಮಳಿಗೆಗಳಿಗೆ ಆಯಾ ರಾಜ್ಯಗಳ ಸೊಗಡನ್ನು ಬಿಂಬಿಸುವ ಕಲಾಕೃತಿಗೆ ಅಂತಿಮ ಸ್ಪರ್ಶ ನೀಡಲಾಗಿದೆ. ವಸ್ತು ಪ್ರದರ್ಶನ ಕೇಂದ್ರದ ಸ್ವಾಗತ ಕಮಾನು ಆಧುನಿಕ ಕರ್ನಾಟಕ ಬಿಂಬಿಸುವ ಮಾದರಿಯಲ್ಲಿ ರೂಪಿಸಲಾಗಿದೆ. ಅಲ್ಲದೆ, ಪ್ರವೇಶ ದ್ವಾರ ಮೈಸೂರು ಅರಮನೆಯ ಪ್ರತಿರೂಪದಂತಿದೆ.
ಸಂಚಾರ ದಟ್ಟಣೆ ತಪ್ಪಿಸುವ ದೃಷ್ಟಿಯಿಂದ ಸಮಾರಂಭಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳಿಗಾಗಿ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲೇ ನಾಲ್ಕು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಅಲ್ಲದೆ, ಆ ಮೈದಾನ ಬಳಿ ಹಂಪಿಯ ವಿಜಯ ವಿಠಲ ದೇವಸ್ಥಾನದಲ್ಲಿರುವ ಶಿಲ್ಪಿಗಳು, ವಸ್ತು ಪ್ರದರ್ಶನದ ಬಳಿ ಆಳೆತ್ತರದ ಪ್ರಾಚೀನ ಶಿಲ್ಪಗಳನ್ನು ಫೈಬರ್ ಗಾಜು ಬಳಸಿ ನಿರ್ಮಿಸಿರುವುದು ಬಹುಆಕರ್ಷಣೀಯವಾಗಿದೆ.
ರಸಗವಳ: ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಭಾರತೀಯ ಆಹಾರ ಮತ್ತು ತಿಂಡಿ ತಿನಿಸಿನ ರುಚಿ ಪರಿಚಯಿಸಲು ಬಾಣಸಿಗರ ಪಡೆಯೇ ಸಿದ್ಧವಾಗಿದ್ದು, ಸಸ್ಯಾಹಾರಿ ಹಾಗೂ ಮಾಂಸಾಹಾರಿಯ ಭೂರಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯಕ್ಕೆ ಪ್ರವಾಸಿ ಭಾರತೀಯ ದಿವಸ್ ಆತಿಥ್ಯ ವಹಿಸಿದ್ದು, ಮೇಳವನ್ನು ಆಕರ್ಷಕವಾಗಿಸಲು ರಾಜ್ಯ ಸರಕಾರ ಟೊಂಕಕಟ್ಟಿ ನಿಂತಿದೆ.
ಪ್ರವಾಸಿ ಭಾರತೀಯ ದಿವಸ್ ಮೇಳದಲ್ಲಿ 1500ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಸೇರಿದಂತೆ ದೇಶ-ವಿದೇಶಗಳ 6ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈಗಾಗಲೇ ನೋಂದಣಿ ಮಾಡಲಾಗಿದೆ. ವಿದೇಶಿ ಪ್ರತಿನಿಧಿಗಳಿಗೆ ಕರೆನ್ಸಿ ವಿನಿಮಯ ಕೇಂದ್ರವನ್ನು ತೆರೆಯಲಾಗಿದೆ.
ಪ್ರವಾಸಿ ಭಾರತೀಯ ದಿವಸ್ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸುವ ಪ್ರತಿನಿಧಿಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರವಾಸಿ ಮೇಳದ ಸ್ಥಳದಲ್ಲಿ ಮೊಬೈಲ್, ಎಟಿಎಂ ಕೇಂದ್ರಗಳು ಸೇರಿದಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಇಡೀ ಸಮ್ಮೇಳನದ ಉಸ್ತುವಾರಿ ವಹಿಸಿದ್ದಾರೆ.
ನಾಳೆ(ಜ.7) ಬೆಳಗ್ಗೆ 9:30ಕ್ಕೆ ಪ್ರವಾಸಿ ಭಾರತೀಯ ದಿವಸ್ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಜ.8ರಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.