​‘‘ವೆಂಕಟೇಶ್ ಮೂರ್ತಿಯನ್ನು ರಾಜ್ಯ ನಾಯಕರನ್ನಾಗಿಸಿದ್ದಕ್ಕೆ ಬಿಎಸ್‌ವೈಗೆ ಧನ್ಯವಾದ!’’

Update: 2017-01-11 10:56 GMT

ಬೆಂಗಳೂರು, ಜ.11: ‘‘ಎಂಟಾಣೆ ಖರ್ಚು ಮಾಡಿ ವೆಂಕಟೇಶ ಮೂರ್ತಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡಿದ್ರಿ. ಆ ಮೂಲಕ ಅವರನ್ನು ರಾಜ್ಯ ನಾಯಕನನ್ನು ಮಾಡಿದ್ದೀರಿ. ಅದಕ್ಕಾಗಿ ಯಡಿಯೂರಪ್ಪರಿಗೆ ಅಭಿನಂದನೆ ಸಲ್ಲಿಸುತ್ತೇನೆ’’ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಪದ್ಮನಾಭ ವಿಧಾನ ಸಭಾ ಕ್ಷೇತ್ರದ ಬನಶಂಕರಿ ಕಲ್ಯಾಣ ಮಂಟಪದಲ್ಲಿಂದು ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಟಾಂಗ್ ನೀಡಿದ್ದು ಹೀಗೆ.

ಯಡಿಯೂರಪ್ಪರ ಮನಸ್ಸಿನಲ್ಲಿ ಇನ್ನೂ ಗೊಂದಲ ಇದೆ. ಕರ್ನಾಟಕದ ಎಲ್ಲ ನಾಯಕರೂ ಹಿಂದುಳಿದವರಿಗೆ, ದಲಿತರಿಗೆ ಒಳ್ಳೆ ಸಂಘಟನೆಯಾಗ್ತಿದೆ. ನಾನೂ ಬಿಎಸ್‌ವೈ ಒಟ್ಟಿಗೆ 25 ವರ್ಷಗಳಿಂದ ರಾಜಕಾರಣ ಮಾಡಿದವರು. ಅವರಿಗೆ ಯಾರೋ ರಾಯಣ್ಣ ಬ್ರಿಗೇಡ್ ಬೇಡ ಅಂತ ಹೇಳಿದ್ದಾರೆ. ಅದಕ್ಕೇ ವಿರೋಧಿಸ್ತಿದ್ದಾರೆ. ಆದ್ರೆ ನಾನು ಈಗಲೂ ಕೇಳ್ತೇನೆ ಯಾಕೆ ರಾಯಣ್ಣ ಬ್ರಿಗೇಡ್ ಬೇಡ ಎಂದು ಪ್ರಶ್ನಿಸಿದರು.

ಹಿರಿಯರು, ಮಠಾಧೀಶರು ರಾಯಣ್ಣ ಬ್ರಿಗೇಡ್ ಮುಂದುವರಿಯಲಿ ಎಂದು ಆಗಲೇ ಹೇಳಿದ್ರು. ಈಗ ಅವರು ಹೇಳಿರಲಿಲ್ಲ ಎಂದು ಯಡಿಯೂರಪ್ಪ ಹೇಳಲಿ.ಅಂತದ್ದರಲ್ಲಿ ಈಗ ನಿಷ್ಠಾವಂತ ಕಾರ್ಯಕರ್ತ ವೆಂಕಟೇಶ ಮೂರ್ತಿಯನ್ನು ಅಮಾನತು ಮಾಡಿದ್ದಾರಲ್ಲ. ತುಂಬಾ ನೋವಾಗುತ್ತೆ. ರಾಯಣ್ಣ ಬ್ರಿಗೇಡ್ ಚಟುವಟಿಕೆ ನಡೆಸಿದ್ದೇ ಪಕ್ಷ ವಿರೋಧಿ ಚಟುವಟಿಕೆನಾ? ನಮ್ಮ ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ. ಆ ಶಿಸ್ತು ಸಮಿತಿಗೇ ಅಶಿಸ್ತು ಬಂದಿದೆಯಾ ಎಂದರು.

ಬ್ರಿಗೇಡ್ ಸದಸ್ಯರನ್ನು ಅಮಾನತು ಮಾಡಿದರೆ ಯಾವುದೇ ಕಾರಣಕ್ಕೂ ಹೆದರಬೇಡಿ. ಅಮಾನತು ಮಾಡಿದರೆ ಒಂದು ಸರ್ಟಿಫಿಕೇಟ್ ಸಿಕ್ತು ಅಂತ ಖುಷಿಪಡಿ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಜ.26ರಂದು ಕೂಡಲ ಸಂಗಮದಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ. ಜ.26ರ ನಂತರ ದಕ್ಷಿಣ ಕರ್ನಾಟಕದಲ್ಲೂ ಸಂಘಟನೆ ಮಾಡ್ತೇವೆ ಎನ್ನುವ ಮೂಲಕ ಸಂಘಟನೆ ಕಾರ್ಯ ಕೈಬಿಡುವುದು ಅಸಾಧ್ಯ ಎಂಬ ಸಂದೇಶ ನೀಡಿದ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News