ಅನುದಾನಿತ ಶಾಲೆಗಳ ಆಸ್ತಿಗೆ ತೆರಿಗೆ ಬೇಡ: ಒತ್ತಾಯ

Update: 2017-01-11 13:33 GMT

ಬೆಂಗಳೂರು, ಜ.11: ಅನುದಾನಿತ ಶಾಲೆಗಳ ಕಟ್ಟಡಗಳಿಗೆ ತೆರಿಗೆ ವಿಧಿಸುವ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

ಬುಧವಾರ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಉತ್ತಮ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅನುದಾನಿತ ಶಾಲೆಯ ಶಿಕ್ಷಕರು ಒತ್ತಾಯಿಸಿದರು.

ಈ ವೇಳೆ ಅನುದಾನಿತ ಶಾಲಾ ಶಿಕ್ಷಕರ ಸಂಘದ ಸಂಚಾಲಕ ಪಾಲನೇತ್ರ ಮಾತನಾಡಿ, ಅನುದಾನಿತ ಶಾಲೆಗಳು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಶಾಲೆಗೆ ತಗಲುವ ಖರ್ಚು ವೆಚ್ಚಗಳನ್ನು ಶಾಲೆಯ ಆಡಳಿತ ಮಂಡಳಿಯೇ ಭರಿಸುತ್ತಿದೆ. ಈ ಶಾಲೆಗಳು ಹೀಗೆಯೇ ಮುಂದುವರೆಯಬೇಕಾದರೆ ಅನುದಾನಿತ ಶಾಲಾ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ಜಾರಿಗೊಳಿಸಬೇಕು. ಕನ್ನಡ ಭಾಷೆಯಲ್ಲಿ ಉತ್ತೀರ್ಣರಾದವರಿಗೆ ನೀಡುತ್ತಿರುವ ವಿಶೇಷ ಭಡ್ತಿಯನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ನೀಡಬೇಕು. ಮುಖ್ಯ ಶಿಕ್ಷಕರಿಗೆ ವಿಶೇಷ ಬಡ್ತಿ ಹಾಗೂ ಪ್ರತ್ಯೇಕ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣವನ್ನು ಸರಕಾರ ಕಡ್ಡಾಯಗೊಳಿಸಿದೆ. ಆದರೆ, ಇದುವರೆಗೂ ದೈಹಿಕ ಶಿಕ್ಷಕರನ್ನು ನೇಮಿಸಿಲ್ಲ. ಶಿಕ್ಷಕರು ಕೊರತೆ ಇರುವ ಶಾಲೆಗಳಿಗೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳಲು ಆಡಳಿತ ಮಂಡಳಿಗಳಿಗೆ ಅನುಮತಿ ನೀಡಬೇಕು ಎಂದು ಅವರು ಹೇಳಿದರು.

ಸರಕಾರಿ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ ಮಾತನಾಡಿ, ಅವೈಜ್ಞಾನಿಕ ಕಾರಣದಿಂದ ಅನುದಾನಿತ ಶಾಲಾ ಶಿಕ್ಷಕರು ಮತ್ತು ಸರಕಾರ ಶಾಲಾ ಶಿಕ್ಷಕರು ಪ್ರತ್ಯೇಕ ಸಂಘ ಕಟ್ಟಿಕೊಳ್ಳುವಂತಾಗಿದೆ. ಈ ಎರಡೂ ಸಂಘಟನೆಗಳನ್ನು ಸೇರಿಸುವಂತಹ ಸಮನ್ವಯ ಸಮಿತಿಯನ್ನು ರಚಿಸಿ, ಹೋರಾಟಗಳಲ್ಲಿ ಎರಡು ಸಂಘಟನೆಗಳ ಶಿಕ್ಷಕರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜು, ಸಂಘದ ಅಧ್ಯಕ್ಷ ಬಿ.ಸಿ.ರೇವಣ್ಣ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News