ರಹಸ್ಯ ದಾಖಲೆ ಸೋರಿಕೆ ಅಪರಾಧಿಯ ಶಿಕ್ಷೆ ರದ್ದು ಮಾಡಿದ ಒಬಾಮ

Update: 2017-01-18 03:28 GMT

ವಾಷಿಂಗ್ಟನ್, ಜ.18: 2010ರಲ್ಲಿ ವಿಕಿಲೀಕ್ಸ್‌ಗೆ ರಹಸ್ಯ ದಾಖಲೆ ಸೋರಿಕೆ ಅಪರಾಧಿಯ ಶಿಕ್ಷೆಯನ್ನು ಅಮೆರಿಕ ಅಧ್ಯಕ್ಷ ರದ್ದು ಮಾಡಿದ್ದಾರೆ. ಇದೀಗ 2045ರಲ್ಲಿ ಬಿಡುಗಡೆಯಾಗಬೇಕಿದ್ದ ಚೆಲ್ಸಿಯಾ ಮ್ಯಾನಿಂಗ್‌ಗೆ ಬಿಡುಗಡೆಯ ಭಾಗ್ಯ ಸನಿಹವಾಗಿದೆ. ಯುಎಸ್ ಪ್ರೈವೆಟ್ ಆರ್ಮಿಯಲ್ಲಿದ್ದ ಲಿಂಗ ಪರಿವರ್ತಿತ ಮ್ಯಾನಿಂಗ್, ಈ ವರ್ಷದ ಮೇ 15ರಂದು ಬಿಡುಗಡೆಯಾಗಲಿದ್ದಾಳೆ.

ರಾಜತಾಂತ್ರಿಕ ವಿಷಯಗಳನ್ನು ಭದ್ರತಾ ವಿರೋಧಿ ಗುಂಪಿಗೆ ಬಿಡುಗಡೆ ಮಾಡಿದ್ದಕ್ಕಾಗಿ 2013ರಲ್ಲಿ ಚೆಲ್ಸಿಯಾ 35 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು. ಈ ಸೋರಿಕೆ ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ರಹಸ್ಯ ಸ್ಫೋಟವಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಚೆಲ್ಸಿಯಾಳ ಶಿಕ್ಷೆಯನ್ನು ಕಡಿತಗೊಳಿಸುವ ಬಗ್ಗೆ ಶ್ವೇತಭವನ ಮುಕ್ತವಾಗಿದೆ ಎಂದು ಇತ್ತೀಚೆಗೆ ಪ್ರಕಟಿಸಲಾಗಿತ್ತು.

ಕನ್ಸಾಸ್‌ನ ಲೆವನ್‌ವರ್ತ್ ಸೇನಾ ಜೈಲಿನಲ್ಲಿರುವ ಆಕೆ ಕಳೆದ ವರ್ಷ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಲಿಂಗ ಪರಿವರ್ತನೆ ಚಿಕಿತ್ಸೆಗೆ ಸೇನೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ಕಳೆದ ವರ್ಷ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದಳು.

ಅಧ್ಯಕ್ಷೀಯ ಅವಧಿಯ ಕೊನೆಯಲ್ಲಿ ಒಬಾಮಾ ಇದೀಗ 209 ಮಂದಿಯ ಶಿಕ್ಷೆಯನ್ನು ಕಡಿತಗೊಳಿಸಿ, 64 ಮಂದಿಗೆ ಕ್ಷಮಾದಾನ ನೀಡುವ ನಿರ್ಧಾರ ಕೈಗೊಂಡಿದ್ದಾರೆ.

ಚೆಲ್ಸಿಯಾ ಮ್ಯಾನಿಂಗ್ ಪ್ರಕರಣ ಅಮೆರಿಕದಲ್ಲಿ ಭಿನ್ನ ಸಾರ್ವಜನಿಕ ಅಭಿಪ್ರಾಯವನ್ನು ಹುಟ್ಟುಹಾಕಿತ್ತು. ಅವರ ಪರ ಹಾಗೂ ವಿರೋಧಿ ಗುಂಪುಗಳು ಹುಟ್ಟಿಕೊಂಡಿದ್ದವು. ಆಕೆಯನ್ನು 'ವಿಷಲ್‌ ಬ್ಲೋವರ್' ಎಂದು ಪರಿಗಣಿಸಿ 10 ಸಾವಿರಕ್ಕೂ ಹೆಚ್ಚು ಮಂದಿ ಸಹಿ ಮಾಡಿ ಆಕೆಯ ಬಿಡುಗಡೆಗಾಗಿ ಶ್ವೇತಭವನಕ್ಕೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News