ನೋಟು ರದ್ದತಿ: ಕಿರಾಣಿ ಅಂಗಡಿಗಳಿಗೂ ತಪ್ಪದ ದುಸ್ಥಿತಿ

Update: 2017-01-18 18:46 GMT

ಉತ್ತರ ಪ್ರದೇಶದ ಬಿಜನೂರ್ ಜಿಲ್ಲೆಯ ಶೆರ್ಕೋಟ್ ಪಟ್ಟಣದಲ್ಲಿ, ನೋಟುಬಂಧಿಯ ಎರಡು ತಿಂಗಳ ಬಳಿಕವೂ ಎಟಿಎಂಗಳ ಮುಂದೆ ಉದ್ದುದ್ದ ಸಾಲು ತಪ್ಪಿಲ್ಲ. ಇಡೀ ದೇಶಕ್ಕೆ ಬಣ್ಣಕೊಡುವ ಈ ಪಟ್ಟಣ ಇದೀಗ ಬಣ್ಣ ಕಳೆದುಕೊಂಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ದೇಶದಲ್ಲಿ ಬಳಕೆಯಾಗುವ ಶೇ. 70ರಷ್ಟು ಬಣ್ಣನೀಡುವ ಬ್ರಷ್‌ಗಳು ಉತ್ಪಾದನೆಯಾಗುವುದು ಇಲ್ಲಿ. ಆದ್ದರಿಂದಲೇ ಬ್ರಷ್ ನಗರ ಎಂದೇ ಶೆರ್ಕೋಟ್ ಪ್ರಸಿದ್ಧಿ. ಸುಮಾರು 30 ಸಾವಿರ ಮಂದಿಗೆ ಉದ್ಯೋಗ ನೀಡಿರುವ ಉದ್ಯಮ ಇದು. ಆದರೆ ನೋಟುಬಂಧಿ ಬಳಿಕ ಕಾರ್ಮಿಕರಿಗೆ ಕೊಡಲು ನಗದು ಇಲ್ಲದೇ ಇಲ್ಲಿನ ಶೇ. 60ರಷ್ಟು ಬ್ರಷ್ ತಯಾರಿಕಾ ಘಟಕಗಳು ಮುಚ್ಚಿವೆ. ದೊಡ್ಡ ಘಟಕಗಳು ಕೂಡಾ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿವೆ ಎಂದು ಸ್ಥಳೀಯ ಬ್ರಷ್ ಮಾರಾಟಗಾರರೊಬ್ಬರು ವಿವರಿಸಿದರು. ಕೇವಲ ನಾಲ್ಕು ಎಟಿಎಂಗಳಿರುವ ಈ ಪುಟ್ಟ ಪಟ್ಟಣದಲ್ಲಿ ಒಂದು ಮಾತ್ರ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿದೆ.

ನಗದು ಹರಿವು ಕುಂಠಿತಗೊಂಡಿರುವುದು ಇಡೀ ನಗರದ ಆರ್ಥಿಕ ಚಟುವಟಿಕೆಗಳು ಸ್ತಬ್ದವಾಗಲು ಕಾರಣವಾಗಿದೆ. ಹಲವರ ಬದುಕನ್ನು ಈ ನೋಟುಬಂಧಿ ಕಸಿದುಕೊಂಡಿದೆ. ಮುಂದಿನ ತಿಂಗಳು ಚುನಾವಣೆ ನಡೆಯುವ ಉತ್ತರ ಪ್ರದೇಶದ ಈ ಭಾಗದಲ್ಲಿ ಬಿಜೆಪಿ ವಿರೋಧಿ ಭಾವನೆಗಳು ದಟ್ಟವಾಗುತ್ತಿದ್ದು, ಬಿಎಸ್ಪಿಪರ ಒಲವು ವ್ಯಕ್ತವಾಗುತ್ತಿದೆ. 1977ರಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಸ್‌ಬಂಧಿ (ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ)ಬಲಿ ಪಡೆದಂತೆ ನೋಟುಬಂಧಿಗೆ ಬಿಜೆಪಿ ಹಾಗೂ ಪರಿವಾರಬಂಧಿ (ಕುಟುಂಬ ಕಲಹ)ಗೆ ಎಸ್ಪಿಬಲಿಯಾಗಲಿದೆ ಎನ್ನುವುದು ಬಿಜನೋರ್‌ನ ಬಿಎಸ್ಪಿಅಭ್ಯರ್ಥಿಯ ಭವಿಷ್ಯ.

ಕಿರಾಣಿ ಅಂಗಡಿಗೂ ಸಂಕಟ
ಮಹಾರಾಷ್ಟ್ರ ರಾಜ್ಯ ಹೆದ್ದಾರಿ (ಸಂಖ್ಯೆ 35) ಬದಿಯ ಅಂಬಿಕಾ ಕುಂಬಾರ ಅವರ ಕಿರಾಣಿ ಅಂಗಡಿಗೂ ಮಾಮೂಲಿನಂತೆ ಗ್ರಾಹಕರು ಬರುತ್ತಿಲ್ಲ. ನೋಟು ರದ್ದತಿ ಬಳಿಕ, ಇವರ ಅಂಗಡಿ ಬದಿಯಲ್ಲಿ ನಿಲ್ಲುವ ಕಾರುಗಳ ಸಂಖ್ಯೆ ಗಣನೀಯವಾಗಿ ಕುಸಿದು ವ್ಯಾಪಾರ ಕುಂಠಿತವಾಗಿದೆ. ಇವರ ಆದಾಯ ವಾರಕ್ಕೆ 200-300 ರೂಪಾಯಿಗೆ ಇಳಿದಿದೆ. ಇದರಿಂದಾಗಿ ವಿದ್ಯುತ್ ಬಿಲ್ ಕೂಡಾ ಪಾವತಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಅಳಲು. ದೇಶದಲ್ಲಿ ಸುಮಾರು 12 ರಿಂದ 14 ದಶಲಕ್ಷ ಕಿರಾಣಿ ಅಂಗಡಿಗಳಿದ್ದು, ಇದನ್ನೇ ಜೀವನಾಧಾರವಾಗಿ ನಂಬಿರುವ ಅಸಂಖ್ಯಾತ ಮಂದಿಯ ಬದುಕು ಬರ್ಬರವಾಗಿದೆ. ಅಂದರೆ ನೋಟುಬಂಧಿಯಿಂದ ಕಂಗೆಟ್ಟಿರುವ ಕಿರಾಣಿ ಅಂಗಡಿ ಮಾಲಕರ ಸಂಖ್ಯೆಯೇ ಇಡೀ ಫ್ರಾನ್ಸ್‌ನ ಒಟ್ಟು ಜನಸಂಖ್ಯೆಯಷ್ಟು!

ದೇಶದ ವಿವಿಧೆಡೆ ಇಂಡಿಯಾ ಸ್ಪೆಂಡ್ ತಂಡ 24 ಅಂಗಡಿಗಳನ್ನು ಜನವರಿಯಲ್ಲಿ ಸಂಪರ್ಕಿಸಿ, ವಾಸ್ತವ ಚಿತ್ರಣ ಅರಿಯುವ ಪ್ರಯತ್ನ ಮಾಡಿದೆ. ಇದರಿಂದ ತಿಳಿದುಬಂದ ಅಂಶವೆಂದರೆ, ಶೇ. 80ರಷ್ಟು ಅಂಗಡಿಗಳ ವಹಿವಾಟು, ನೋಟುಬಂಧಿ ಬಳಿಕ ಶೇ. 50ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಶೇ. 38ರಷ್ಟು ಅಂಗಡಿ ಮಾಲಕರು ಮಾತ್ರ ನಗದು ರಹಿತ ವ್ಯವಹಾರಕ್ಕೆ ಮುಂದಾಗಿದ್ದಾರೆ. ಎರಡು ತಿಂಗಳಿನಿಂದೀಚೆಗೆ ಪರಿಸ್ಥಿತಿ ಸುಧಾರಿಸಿಲ್ಲ ಎನ್ನುವುದು ಶೇ. 67ರಷ್ಟು ಮಂದಿಯ ಅಭಿಪ್ರಾಯ.

‘‘ಹಿಂದೆ ಗಂಟೆಗೆ ಒಬ್ಬ ಗಿರಾಕಿಯಾದರೂ ಬರುತ್ತಿದ್ದರು, ಬೋಣಿ ಆಗದ ದಿನಗಳೂ ಇವೆ ಎನ್ನುವುದು ಮತ್ತೊಬ್ಬ ಕಿರಾಣಿ ಅಂಗಡಿ ಮಾಲಕ ಯೋಗೀಶ್ ಪ್ರಜಾಪತಿಯವರ ಅನಿಸಿಕೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಖಾಯಂ ಗಿರಾಕಿಗಳಿಗೆ ಇನ್ನೂ ಸಾಲದಲ್ಲೇ ವಸ್ತುಗಳನ್ನು ನೀಡುತ್ತಿರುವುದರಿಂದ ಇವರ ಹಣಕಾಸು ಸ್ಥಿತಿ ಮತ್ತಷ್ಟು ಉಲ್ಬಣಿಸಿದೆ. ಚಿಲ್ಲರೆ ಸಮಸ್ಯೆಯಿಂದಾಗಿ ಪೂರೈಕೆದಾರರು ಕೂಡಾ ಹೆಚ್ಚು ವಸ್ತುಗಳನ್ನು ಖರೀದಿಸುವಂತೆ ಅಂಗಡಿ ಮಾಲಕರಿಗೆ ಒತ್ತಡ ಹಾಕುತ್ತಿದ್ದಾರೆ. ನಗರ ಪ್ರದೇಶದಲ್ಲಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದರೆ, ಆರ್ಥಿಕವಾಗಿ ಕಂಗೆಟ್ಟಿರುವ ಗ್ರಾಮೀಣ ಪ್ರದೇಶದಲ್ಲಿ ಈ ಸ್ಥಿತಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಅಧ್ಯಯನದಿಂದ ತಿಳಿದುಬಂದಿದೆ.

ಟೊಮ್ಯಾಟೊ

ಮಹಾರಾಷ್ಟ್ರದಲ್ಲಿ ಟೊಮ್ಯಾಟೊ ಬೆಲೆ ಗಣನೀಯವಾಗಿ ಕುಸಿದಿರುವುದರಿಂದ, ಯಶವಂತ್ ಹಾಗೂ ಹೀರಾಬಾಯಿ ಬೆಂಡ್ಕುಳೆ ಎಂಬ ಆದಿವಾಸಿ ದಂಪತಿ ತಾವು ಬೆಳೆದ ಬೆಳೆಯನ್ನು ಕೈಯಾರೆ ನಾಶಪಡಿಸಿದ್ದಾರೆ. ಏಕೆಂದರೆ ಟೊಮ್ಯಾಟೊ ಕಿತ್ತು ಮಾರಾಟ ಮಾಡುವುದು ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತದೆ.

‘ಸುಮಾರು 2000 ಕ್ರೇಟ್‌ನಷ್ಟು ಟೊಮ್ಯಾಟೊವನ್ನು ನಷ್ಟ ಮಾಡಿ ಕೊಂಡೇ ಮಾರಾಟ ಮಾಡಿದ್ದೇನೆ ಎಂದು ರೈತ ಯೋಗೀಶ್ ಗಾಯ್ಕರ್ ಸಂಕಷ್ಟ ತೋಡಿಕೊಂಡರು. ನೋಟಿನ ಲಫ್ಡಾದಿಂದಾಗಿ ಹೀಗಾಯಿತು. ನಾವಿನ್ನೇನು ಟೊಮ್ಯಾಟೊದಲ್ಲಿ ಒಂದಷ್ಟು ಹಣ ಗಳಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಮೋದಿ ಝಾಡಿಸಿ ಒದ್ದರು ಎನ್ನುವುದು ಅವರ ವಿಶ್ಲೇಷಣೆ.
ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬೇ ಹೇಗೆ ಮುರಿದಿದೆ ಎನ್ನುವುದಕ್ಕೆ ಇವು ಕೆಲ ನಿದರ್ಶನಗಳು ಮಾತ್ರ.

Writer - ಕೃಪೆ: thewire.in

contributor

Editor - ಕೃಪೆ: thewire.in

contributor

Similar News