ಸಾಲದ ಹೊರೆ, ಕೆಲಸವೂ ಇಲ್ಲ, ಈಕೆಗೆ ಕಾರಿನಲ್ಲೇ ಜೀವನ

Update: 2017-01-19 10:11 GMT

ದುಬೈ,ಜ.19: 42ರ ಹರೆಯದ ಭಾರತ ಮೂಲದ ಬ್ರಿಟಿಷ್ ಪ್ರಜೆಯಾಗಿರುವ ಆಯಿಷಾ ಕಳೆದ ನಾಲ್ಕು ತಿಂಗಳುಗಳಿಂದಲೂ ತಲೆಯ ಮೇಲೊಂದು ಸೂರಿಲ್ಲದೆ ದುಬೈನಲ್ಲಿ ಕಾರೊಂದರಲ್ಲಿ ದಿನಗಳನ್ನು ದೂಡುತ್ತಿದ್ದಾಳೆ. ಸಾಲದಲ್ಲಿ ಮುಳುಗಿರುವ ಅವಳ ಬಳಿ ಹಣವಿಲ್ಲ. ತನಗೊಂದು ಉದ್ಯೋಗ ದೊರಕದ ಹೊರತು ಸಾಲವನ್ನು ತೀರಿಸಲು ಸಾಧ್ಯವಿಲ್ಲ ಎನ್ನುವುದು ಅವಳ ಅಳಲು.

 ಮಾನವ ಸಂಪನ್ಮೂಲ/ತರಬೇತಿ ಸಲಹೆಗಾರ್ತಿಯಾಗಿರುವ ಮಾಜಿ ಯುಎಇ ನಿವಾಸಿ ಆಯಿಷಾ ಕಳೆದ ವರ್ಷದ ಸೆ.6ರಂದು ದುಬೈಗೆ ಬಂದಿಳಿದ್ದಳು. ತಾನು ಹಿಂದೆ ಇಲ್ಲಿ ಸ್ಥಾಪಿಸಿದ್ದ ಮ್ಯಾನೇಜ್‌ಮೆಂಟ್ ಸಂಸ್ಥೆಯಿಂದಾಗಿ ತನ್ನ ಬಳಿಯಿದ್ದ ಹಣವನ್ನೆಲ್ಲ ಕಳೆದುಕೊಂಡು ಅತಂತ್ರಳಾಗಿದ್ದ ಆಯಿಷಾ ಅದನ್ನು ಕಾನೂನುಬದ್ಧವಾಗಿ ಮುಚ್ಚಲೆಂದು ಬಂದಿದ್ದಳು.

ತಾನು ಮುಗ್ಧಳಾಗಿದ್ದೆ ಮತ್ತು ಎಳೆಯ ಕ್ಯಾನ್ಸರ್ ರೋಗಿಗೆ ವಿದೇಶದಲ್ಲಿ ಚಿಕಿತ್ಸೆ ಪಡೆಯಲು 40,000 ದಿನ್ಹಾರ್‌ಗಳನ್ನು ಸಾಲವಾಗಿ ನೀಡಿದ್ದೆ. ಆ ಹಣ ತನಗೆ ವಾಪಸ್ ಆಗಿಲ್ಲ. ಜೊತೆಗೆ ತಾನೂ ನರಗಳಲ್ಲಿಯ ಜೀವಕೋಶಗಳು ನಿಷ್ಕ್ರಿಯಗೊಳ್ಳುವ ಮೋಟರ್ ನ್ಯುರಾನ್ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದಾಕೆ ಸುದ್ದಿಗಾರರ ಬಳಿ ಗೋಳು ತೋಡಿಕೊಂಡಳು.

 ಕಾರು ಬಾಡಿಗೆ ಕಂಪನಿಯೊಂದಕ್ಕೆ ತಾನು 10,000 ದಿರ್ಹಾಮ್‌ಗಳ ಬಾಕಿಯನ್ನು ಪಾವತಿಸಬೇಕಿದೆ. ಇನ್ನೊಂದು ಕಾರು ಬಾಡಿಗೆ ಕಂಪನಿಯ ಸಾಲವನ್ನೂ ತೀರಿಸಬೇಕಿದೆ. ಜೊತೆಗೆ ದುಬೈನಲ್ಲಿ ಅವಧಿ ಮೀರಿ ವಾಸವಾಗಿದ್ದಕ್ಕೆ ದಂಡವೂ ಪ್ರತಿದಿನ ಹೆಚ್ಚುತ್ತಲೇ ಇದೆ. ಆದರೆ ಇದನ್ನೆಲ್ಲ ತೀರಿಸಲು ತನ್ನ ಬಳಿ ಹಣವೇ ಇಲ್ಲ, ಕಾನೂನಿನ ತೊಡಕುಗಳತ್ತ ಕಣ್ಣು ಹಾಯಿಸುತ್ತಿದ್ದೇನೆ ಎಂದು ಆಯಿಷಾ ಹೇಳಿದಳು.

ಪರಿಚಿತರು ಮತ್ತು ಅಪರಿಚಿತರು ನೀಡುವ ಚಿಲ್ಲರೆ ಹಣದಲ್ಲಿ ಬದುಕುತ್ತಿರುವ ಆಯಿಷಾ, ತನಗೆ ತನ್ನ ಕುಟುಂಬದಿಂದ ಯಾವುದೇ ನೆರವು ದೊರೆಯುತ್ತಿಲ್ಲ, ಪ್ರತಿಯೊಂದು ದಿನವೂ ದುಃಸ್ವಪ್ನವಾಗಿ ಪರಿಣಮಿಸಿದೆ ಎಂದಳು.

ತನ್ನ ಕಾರನ್ನು ರಾತ್ರಿಯ ವೇಳೆ ಯಾವುದಾದರೂ ಕಾರ್ ಪಾರ್ಕಿಂಗ್‌ನಲ್ಲಿ ನಿಲ್ಲಿಸುವ ಆಯಿಷಾ ಒಂದಿಷ್ಟು ನಿದ್ರೆ ಮಾಡಲು ಪ್ರಯತ್ನಿಸುತ್ತಾಳೆ. ಸ್ನಾನ ಇತ್ಯಾದಿಗಳನ್ನು ಯಾವುದಾದರೂ ಹೋಟೆಲ್‌ನಲ್ಲಿ ಮುಗಿಸುತ್ತಾಳೆ. ಇರುವ ಕೆಲವೇ ಬಟ್ಟೆಗಳಲ್ಲಿ ದಿನ ದೂಡುತ್ತಿರುವ ಆಕೆ ಏನಾದರೂ ಸ್ವಲ್ಪ ಆಹಾರ ದೊರಕಿದರೆ ಅದರಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ಸ್ನೇಹಿತರು ಈಗಾಗಲೇ ಸಾಕಷ್ಟು ಸಹಾಯ ಮಾಡಿರುವುದರಿಂದ ಮತ್ತೆ ಅವರ ಬಳಿಗೆ ಹೋಗುವ ಸ್ಥಿತಿಯಲ್ಲಿ ಆಕೆ ಇಲ್ಲ. ಈಕೆ ಕರೆ ಮಾಡಿದರೆ ಅವರು ಸ್ವೀಕರಿಸುವದೂ ಇಲ್ಲ. ಏಕೆ ಎಂದು ಅವಳಿಗೂ ಗೊತ್ತು.

‘‘ನನ್ನ ಬದುಕು ಈಗ ಪತನದ ಅಂಚಿನಲ್ಲಿದೆ. ಆದರೆ ಬಾಳಿನಲ್ಲಿ ಇಷ್ಟೊಂದು ದೂರ ಬಂದಿರುವ ನಾನು ಸೋಲಲು ಬಯಸುವುದಿಲ್ಲ ’’ ಎನ್ನುತ್ತಾಳೆ ಆಯಿಷಾ.

ತನಗೆ ಉದ್ಯೋಗದ ಬಹಳ ಅಗತ್ಯವಿದೆ. ಮಾನವ ಸಂಪನ್ಮೂಲ ನೇಮಕ ಕ್ಷೇತ್ರದಲ್ಲಿ ಯಾವುದೇ ಕೆಲಸಕ್ಕೂ ತಾನು ಸಿದ್ಧ. ಯಾರಾದೂ ಕೆಲಸ ಕೊಡುವರೇ ಎಂದು ಕಾಯುತ್ತಿದ್ದೇನೆ ಎಂದು ಹತಾಶೆಯಿಂದ ಹೇಳಿದಳು.

ಬ್ರಿಟನ್‌ನಲ್ಲಿ ತನ್ನ ಪಾಲಿಗೆ ಏನೂ ಇಲ್ಲ,ಹೀಗಾಗಿ ದುಬೈನಲ್ಲೇ ನೆಲೆಯೂರಲು ಬಯಸಿದ್ದೇನೆ ಎಂದೂ ಆಕೆ ತಿಳಿಸಿದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News