ಸೇನೆ ಸಮಾಜದ ಮೌಲ್ಯಗಳಿಂದ ಹೊರತಾದುದೇನಲ್ಲ

Update: 2017-01-21 18:38 GMT

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೇನೆ ಜನಸಾಮಾನ್ಯರ ಮೊದಲ ಗೌರವಕ್ಕೆ ಪಾತ್ರವಾಗಬಹುದೇ ಹೊರತು ಮೊದಲ ಆದ್ಯತೆಯಾಗಕೂಡದು. ಸೇನೆ ದೇಶದ ಆಡಳಿತ ವ್ಯವಸ್ಥೆಯ ಒಂದು ಅಂಗ ಮತ್ತು ಆಡಳಿತಾರೂಢ ಸರಕಾರದ ಆದೇಶದಂತೆ ನಡೆಯುವ ಒಂದು ಸಂಸ್ಥೆಯೇ ಹೊರತು ಪ್ರಜಾತಂತ್ರ ವ್ಯವಸ್ಥೆಯ ಅಂಗ ಆಗಲಾರದು. ಸೇನೆ ಮತ್ತು ಸೇನೆಯನ್ನು ಪ್ರತಿನಿಧಿಸುವ ಸೈನಿಕರ ನಡುವೆ ಇರುವ ತಾತ್ವಿಕ ಕಂದರವನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರನ್ನು ಅಥವಾ ಯೋಧರನ್ನು ವ್ಯಕ್ತಿಗತ ನೆಲೆಯಲ್ಲಿ ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಪ್ರಜ್ಞೆಯ ಒಂದು ಭಾಗವಾಗಿರಬೇಕು. ಈ ಯೋಧರನ್ನು ಬಳಸುವ ಸೇನೆ ಎಂಬ ಸಂಸ್ಥೆ ಪ್ರಭುತ್ವದ ಪ್ರಜ್ಞೆಯ ಒಂದು ಭಾಗವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಒಬ್ಬ ಮೃತ ಸೈನಿಕನ ಅಥವಾ ಗಾಯಗೊಂಡ ಸೈನಿಕನ ಚಿತ್ರವನ್ನು ಬಿಂಬಿಸಿ ‘‘ ದೇಶದ ರಕ್ಷಣೆಗಾಗಿ ಪ್ರಾಣ ಮುಡಿಪಾಗಿಟ್ಟ ಇವರಿಗೆ ನಿಮ್ಮ ಲೈಕ್ ಒತ್ತಿ ’’ ಎನ್ನುವ ಭಾವುಕ ಪೋಸ್ಟ್‌ಗಳು ಹೇರಳವಾಗಿ ಕಾಣುತ್ತಿವೆ. ಈ ಭಾವುಕತೆ ಸಹಜವಾಗಿಯೇ ಮೂಡಿದ ಸಂವೇದನೆಯಾದರೂ ಇಂತಹ ಉನ್ಮತ್ತ ಭಾವನೆಗಳು ಒಂದು ನಿರ್ದಿಷ್ಟ ರಾಷ್ಟ್ರೀಯತಾ ಮನೋಭಾವದ ಹಿನ್ನೆಲೆ ಹೊಂದಿರುವುದನ್ನು ಗಮನಿಸಿದಾಗ ಭಾರತೀಯ ಸಮಾಜದಲ್ಲಿ ಉಂಟಾಗುತ್ತಿರುವ ಪಲ್ಲಟಗಳು ಗಾಬರಿಗೊಳಿಸುತ್ತವೆ.

military ಸಿಯಾಚಿನ್, ಭಾರತ ಪಾಕ್ ಗಡಿ ಪ್ರದೇಶ, ಭಾರತ ಚೀನಾ ಗಡಿ ಪ್ರದೇಶ ಈ ಸೂಕ್ಷ್ಮ ಪ್ರದೇಶಗಳಲ್ಲಿ ಹಗಲಿರುಳೆನ್ನದೆ ತಮ್ಮ ಜೀವ ಪಣಕ್ಕಿಟ್ಟು ಶ್ರಮಿಸುವ ಯೋಧರನ್ನು ಹೊರತುಪಡಿಸಿಯೂ ಸೇನೆಯಲ್ಲಿ ಸಾವಿರಾರು ಯೋಧರು ತಮ್ಮ ಜೀವನ ನಿರ್ವಹಣೆಯ ನೆಲೆಯನ್ನು ಕಂಡುಕೊಂಡಿರುವುದು ವಾಸ್ತವ. ಸೇನೆಯಲ್ಲಿ ದುಡಿಯಲು ಪ್ರವೇಶಿಸುವುದೇ ದೇಶಭಕ್ತಿಯ ಉನ್ಮಾದ ಅಥವಾ ಭಾವುಕತೆಯಿಂದಲೋ ಅಥವಾ ಅನಿವಾರ್ಯತೆಗಳಿಗೆ ಮಣಿದು ಯೋಧರ ಸಮವಸ್ತ್ರ ಧರಿಸಿದ ನಂತರ ದೇಶಭಕ್ತಿ ಮೈದಳೆಯುವುದೋ ಎನ್ನುವ ಪ್ರಶ್ನೆ ಹೆಚ್ಚು ಪ್ರಸ್ತುತ ಮತ್ತು ಚಿಂತನಾರ್ಹ.

ಸಮಾಜೋ-ಆರ್ಥಿಕ ಹಿನ್ನೆಲೆಯಲ್ಲಿ ನೋಡಿದಾಗ ಒಂದು ನಿರ್ದಿಷ್ಟ ಪ್ರಾಂತದಲ್ಲಿ ಉದ್ಯೋಗಾವಕಾಶಗಳ ಕೊರತೆ ಮತ್ತು ಆರ್ಥಿಕ ಬಡತನ ಹೆಚ್ಚಾಗಿರುವುದಕ್ಕೂ ಸೇನೆಗೆ ಸೇರುವವರ ಸಂಖ್ಯೆ ಹೆಚ್ಚಾಗಿರುವುದಕ್ಕೂ ನೇರ ಸಂಬಂಧ ಕಾಣುತ್ತದೆ. ಹಾಗಾಗಿ ಯಾವುದೇ ಪ್ರದೇಶದ ಜನತೆ ತಮ್ಮ ನಡುವಿನ ಯೋಧರನ್ನು ಜಾಹೀರಾತಿನಂತೆ ಪ್ರದರ್ಶಿಸುವುದರ ಮೂಲಕ ತಮ್ಮ ಸಾಮುದಾಯಿಕ ದೇಶಭಕ್ತಿಯನ್ನು ವೈಭವೀಕರಿಸುವ ಆವಶ್ಯಕತೆ ಇಲ್ಲ. ಇತ್ತೀಚೆಗೆ ಮಾರುಕಟ್ಟೆ ಸರಕಿನಂತೆ ಬೇಡಿಕೆ-ಸರಬರಾಜು ಪ್ರಕ್ರಿಯೆಯ ಸುಳಿಯಲ್ಲಿ ಸಿಲುಕಿರುವ ರಾಷ್ಟ್ರಭಕ್ತಿ ಮತ್ತು ದೇಶಪ್ರೇಮ ಎಂಬ ಭಾವನಾತ್ಮಕ ಪದಗಳ ಬಳಕೆ ಸೇನೆ ಮತ್ತು ಯೋಧರನ್ನು ತನ್ನ ಬತ್ತಳಿಕೆಯ ಪ್ರಧಾನ ಅಸ್ತ್ರವಾಗಿ ಬಳಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ ಎನ್ನುವುದನ್ನು ಗಮನಿಸಬೇಕಿದೆ.

ಗಡಿ ಭದ್ರತಾ ಪಡೆಯ ಆಡಳಿತ ನಿರ್ವಹಣೆಯಲ್ಲಿ ಇರುವ ಲೋಪ ದೋಷಗಳನ್ನು ಮತ್ತು ಬಿಎಸ್‌ಎಫ್ ಯೋಧರ ನಿತ್ಯ ಬವಣೆಗಳನ್ನು ತಮ್ಮ ಅನುಭವದ ಹಿನ್ನೆಲೆಯಲ್ಲಿ ಯೋಧನೊಬ್ಬ ಅಲವತ್ತುಕೊಂಡಿರುವುದು ದೇಶದಲ್ಲಿ ವ್ಯಾಪಕ ಚರ್ಚೆಗೊಳಗಾಗಿದೆ. ತನ್ನ ಮತ್ತು ಸಹಯೋಧರ ದಿನನಿತ್ಯದ ಬವಣೆಯನ್ನು ಸಾಮಾಜಿಕ ತಾಣಗಳ ಮೂಲಕ ಜನತೆಯ ಮುಂದಿಟ್ಟಿರುವ ತೇಜ್ ಬಹದ್ದೂರ್ ಯಾದವ್ ಭಾರತದ ಆಡಳಿತ ವ್ಯವಸ್ಥೆಗೂ ಮತ್ತು ಸಾಮಾಜಿಕ-ಸಾಂಸ್ಕೃತಿಕ ಮನೋಧರ್ಮಕ್ಕೂ ಇರುವ ನಿಕಟ ಹಾಗೂ ಸೂಕ್ಷ್ಮ ಸಂಬಂಧಗಳನ್ನು ಹೊರಗೆಡಹಿದ್ದಾರೆ. ಇಲ್ಲಿ ಯೋಧರಿಗೆ ನೀಡಲಾಗುವ ಕಳಪೆ ಆಹಾರ, ಸಮರ್ಪಕವಾದ ಪರಿಕರಗಳ ಕೊರತೆ, ಮೇಲಧಿಕಾರಿಗಳ ದಬ್ಬಾಳಿಕೆ ಮತ್ತು ಅಧಿಕಾರ ದುರುಪಯೋಗ, ಸರಕಾರದ ನಿಷ್ಕ್ರಿಯತೆ ಮತ್ತು ಅಲಕ್ಷ, ಪ್ರಭುತ್ವ ಮತ್ತು ಸರಕಾರಗಳು ಸೇನೆಯನ್ನು ಪರಿಭಾವಿಸುವ ರೀತಿ ಈ ಎಲ್ಲ ಅಂಶಗಳೂ ಚರ್ಚೆಗೊಳಗಾಗಬೇಕಾಗಿದೆ. ಆದರೆ ಪ್ರಜಾತಂತ್ರ ಭಾರತವನ್ನು ರಕ್ಷಿಸಲು ಮುಡಿಪಾಗಿರುವ ಸೇನೆಯ ಅಂತರಿಕ ವ್ಯವಹಾರಗಳು ಮಾತ್ರ ಪ್ರಜಾತಂತ್ರ ಮೌಲ್ಯಗಳಿಂದ ಹೊರತಾಗಿದೆ. ದೇಶದ ಸುಭದ್ರತೆ ಮತ್ತು ರಕ್ಷಣೆಯ ನೆಪದಲ್ಲಿ ಸೇನೆ ಮತ್ತು ಸೈನಿಕರ ಬವಣೆ ದೇಶಭಕ್ತಿಯ ಉನ್ಮಾದದ ಅಲೆಗಳಲ್ಲಿ ಕೊಚ್ಚಿಹೋಗುತ್ತಿರುವುದು ಕಣ್ಣಿಗೆ ಕಾಣುತ್ತಿರುವ ಸತ್ಯ. ಇದು ಚರ್ಚೆಗೊಳಗಾಗಬೇಕಾದ ವಿಚಾರ.

ಆಡಳಿತ ವ್ಯವಸ್ಥೆಯ ಸ್ವರೂಪ ಯಾವುದೇ ಆಗಿದ್ದರೂ ತನ್ನ ಉಗಮದ ನೆಲೆಯಾಗಿರುವ ಸಾಮಾಜಿಕ ವ್ಯವಸ್ಥೆಯ ಮೌಲ್ಯಗಳಿಂದ ಹೊರತಾಗಿರುವುದಿಲ್ಲ. ಇದಕ್ಕೆ ಭಾರತೀಯ ಸಮಾಜ ಮತ್ತು ಪ್ರಭುತ್ವವೂ ಹೊರತಾದುದಲ್ಲ. ಸೇನೆಯೂ ಹೊರತಾದುದಲ್ಲ. ಬಿಎಸ್‌ಎಫ್ ಯೋಧನ ಪಡಿಪಾಟಲನ್ನು ಕೇಳಿದ ಪ್ರಜ್ಞಾವಂತ ಸಮಾಜ ‘‘ ಹೌದೇ ! ಸೇನೆಯಲ್ಲೂ ಇಂತಹ ತಾರತಮ್ಯ ಇರಲು ಸಾಧ್ಯವೇ ’’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರೆ ಅದು ನಮ್ಮ ಸಾಮಾಜಿಕ ಗ್ರಹೀತಗಳ ಕೊರತೆಯನ್ನು ಬಿಂಬಿಸುತ್ತದೆ. ಏಕೆಂದರೆ ಭಾರತೀಯ ಸಮಾಜವನ್ನು ನಿಯಂತ್ರಿಸುವ ಮನೋಭಾವ ಮತ್ತು ಭೌದ್ಧಿಕ ಧೋರಣೆಯೇ ಸೇನೆಯನ್ನೂ ನಿಯಂತ್ರಿಸುತ್ತದೆ. ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಅಡಕವಾಗಿರುವ ಸಾಂಸ್ಕೃತಿಕ ಮೌಲ್ಯಗಳೇ ಸೇನೆಯಲ್ಲೂ ರಾರಾಜಿಸುತ್ತವೆ. 21ನೆಯ ಶತಮಾನದಲ್ಲೂ ತನ್ನ ಅಧಿಪತ್ಯವನ್ನು ಉಳಿಸಿಕೊಂಡಿರುವ ಊಳಿಗಮಾನ್ಯ ಧೋರಣೆ ಮತ್ತು ಅಧಿಪತ್ಯದ ಹಪಾಹಪಿ ಸೇನೆಯಲ್ಲೂ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಮೇಲು ಕೀಳುಗಳ ತಾರತಮ್ಯ ಒಂದು ಸಾಮಾಜಿಕ-ಸಾಂಸ್ಕತಿಕ ವ್ಯಾಧಿಯಂತೆ ಭಾರತೀಯ ಸಮಾಜವನ್ನು ಶತಮಾನಗಳಿಂದ ಕಾಡುತ್ತಿದ್ದು ಸೇನೆಯನ್ನೂ ಆವರಿಸಿದ್ದರೆ ಅಚ್ಚರಿಯೇನಿಲ್ಲ.

ನಿವೃತ್ತ ಯೋಧರ ಜೀವನ ವೃತ್ತಾಂತಗಳು ಸಾಮಾಜಿಕ ನೆಲೆಯಲ್ಲಿ ಚರ್ಚೆಯ ವಿಚಾರವಾಗಿಲ್ಲ ಅಲ್ಲವೇ ? ಯೋಧರ ಉಗಮ ಸ್ಥಾನ ಎಂದು ಕರೆಯಲ್ಪಡುವ ಪ್ರದೇಶಗಳಲ್ಲೂ ಸಹ ನಿವೃತ್ತ ಯೋಧರು ಹೇಗೆ ಬಾಳುತ್ತಿದ್ದಾರೆ ? ಸೇನೆಯಿಂದ ನಿವೃತ್ತರಾಗುವ ಉನ್ನತ ಅಧಿಕಾರಿಗಳು ಮತ್ತು ಸಾಮಾನ್ಯ ಯೋಧರ ಸಾಮಾಜಿಕ ಸ್ಥಾನಮಾನಗಳು ಹೇಗಿವೆ ? ಮೃತ ಯೋಧನಿಗೆ ದೊರೆಯುವ ಫೇಸ್‌ಬುಕ್ ಲೈಕ್‌ಗಳು, ಜೈಹಿಂದ್‌ಗಳು, ಸೆಲ್ಯೂಟ್‌ಗಳು ಜೀವಂತ ನಿವೃತ್ತ ಯೋಧನಿಗೆ ಭೌತಿಕ ನೆಲೆಯಲ್ಲಿ ದೊರೆಯುತ್ತಿದೆಯೇ ? ಭಾರತೀಯ ಸಾಮಾಜಿಕ ಚೌಕಟ್ಟಿನಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪಶ್ಯತೆ, ಸಾಂಸ್ಕತಿಕ ದೌರ್ಜನ್ಯ, ಸಾಮಾಜಿಕ ಅಸಮಾನತೆ ಮತ್ತು ಬೌದ್ಧಿಕ ತಾರತಮ್ಯಗಳಿಂದ ದೇಶ ರಕ್ಷಕ ಯೋಧರು ಹೊರತಾಗಿದ್ದಾರೆಯೇ? ಅಥವಾ ಸೇನೆಯ ಆಂತರಿಕ ಆಡಳಿತ ವ್ಯವಸ್ಥೆಯಲ್ಲೇ ಈ ಪ್ರಾಚೀನ ಸಾಂಪ್ರದಾಯಿಕ ಮೌಲ್ಯಗಳು ನಶಿಸಿವೆಯೇ? ತನ್ನ ಮೂಲ ಅಸ್ತಿತ್ವವನ್ನು ಬದಿಗಿಟ್ಟು ದೇಶರಕ್ಷಕ ಎಂಬ ನೂತನ ಅಸ್ತಿತ್ವ ಪಡೆಯುವ ಯೋಧ ತನ್ನ ಹೊಸ ಪರಿಸರದಲ್ಲಿ ಮೇಲು ಕೀಳುಗಳಿಲ್ಲದ ಸಮಾಜವನ್ನು ಕಾಣುತ್ತಿದ್ದಾನೆಯೇ? ಬಾಹ್ಯ ಸಮಾಜದಲ್ಲಿ ಕಾಣಲಾಗದ ಸಾಮಾಜಿಕ-ಸಾಂಸ್ಕೃತಿಕ ಸಮಾನತೆ ಸೇನೆಯಲ್ಲಾದರೂ ಕಾಣಬಹುದೇ? ಈ ಹತ್ತು ಹಲವಾರು ಪ್ರಶ್ನೆಗಳಿಗೆ ಇಂದು ಉತ್ತರ ಶೋಧಿಸಬೇಕಿದೆ.

ಈ ಉತ್ತರಗಳ ಒಡಲಲ್ಲೇ ಬಿಎಸ್‌ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್ ಜನತೆಯ ಮುಂದಿಟ್ಟಿರುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ತಮ್ಮ ವೇದನೆ ಮತ್ತು ಅಂತರಾಳದ ಭಾವನೆಗಳನ್ನು ಸಾಮಾಜಿಕ ತಾಣಗಳ ಮೂಲಕ ವ್ಯಕ್ತಪಡಿಸಿದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸೇನಾ ಮುಖ್ಯಸ್ಥರು ನೀಡಿರುವ ಎಚ್ಚರಿಕೆ ಭಾರತೀಯ ಸಮಾಜದ ಮನೋಧರ್ಮದ ಪ್ರತೀಕವಾಗಿದೆ. ಈ ಧೋರಣೆ ಪ್ರಭುತ್ವದ ದೃಷ್ಟಿಯಿಂದ ರಾಷ್ಟ್ರ ರಕ್ಷಣೆಗೆ ಪೂರಕವಾಗಿರಬಹುದು ಆದರೆ ಪ್ರಜಾತಂತ್ರ ಮೌಲ್ಯಗಳ ರಕ್ಷಣೆಯ ದೃಷ್ಟಿಯಿಂದ ಇದು ಖಂಡನಾರ್ಹ. ಮಾನವೀಯ ಮೌಲ್ಯಗಳೇ ಇಲ್ಲದ ಭೂ ಪ್ರದೇಶವನ್ನು ದೇಶಭಕ್ತಿಯ ಚೌಕಟ್ಟಿನಲ್ಲಿ ಬಂಧಿಸಿಡುವುದರಿಂದ ಪ್ರಭುತ್ವ ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳಬಹುದು ಆದರೆ ಸಂವೇದನೆಗಾಗಿ ಹಾತೊರೆಯುತ್ತಿರುವ ಸಮಾಜ ಅವಸಾನದತ್ತ ಸಾಗುತ್ತದೆ. ಈ ಸೂಕ್ಷ್ಮತೆ ಪ್ರಜ್ಞಾವಂತ ಸಮಾಜವನ್ನು ಕಾಡಲೇಬೇಕಿದೆ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News