ಸೌದಿಯಿಂದ ಹೊರಗೆ ಹಣ ಕಳಿಸುವ ವಲಸಿಗರಿಗೆ ಸಿಹಿ ಸುದ್ದಿ

Update: 2017-01-23 03:56 GMT

ರಿಯಾದ್, ಜ.23: ದೇಶದಿಂದ ಹೊರಗೆ ಕಳುಹಿಸುವ ಹಣಕ್ಕೆ ಶುಲ್ಕ ಅನ್ವಯವಾಗುವುದಿಲ್ಲ ಎಂದು ಸೌದಿ ಅರೇಬಿಯಾ ಹಣಕಾಸು ಸಚಿವರು ಘೋಷಿಸಿದ್ದಾರೆ.

ದೇಶದಿಂದ ಹೊರಗೆ ಕಳುಹಿಸುವ ಹಣಕ್ಕೆ ಶೇಕಡ 6ರಷ್ಟು ಶುಲ್ಕ ವಿಧಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ದೇಶದ ಶೌರಾ ಕೌನ್ಸಿಲ್ ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವರಿಂದ ಈ ಸ್ಪಷ್ಟನೆ ಬಂದಿರುವುದು ಬೇರೆ ದೇಶಗಳಿಂದ ಬಂದು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಮಂದಿಗೆ ಸಂತಸ ತಂದಿದೆ.

"ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ದೇಶದ ಒಳಗೆ ಹಾಗೂ ಹೊರಗೆ ಬಂಡವಾಳದ ಮುಕ್ತ ಹರಿವಿನ ತತ್ವಕ್ಕೆ ಸೌದಿ ಅರೇಬಿಯಾ ಬದ್ಧವಾಗಿದೆ" ಎಂದು ಸಚಿವಾಲಯ ಟ್ವಿಟ್ಟರ್ ಮೂಲಕ ಘೋಷಿಸಿದೆ.

ಸೌದಿ ಅರೇಬಿಯಾದ ಮೂರು ಕೋಟಿ ಮಂದಿಯ ಪೈಕಿ ಮೂರನೇ ಒಂದರಷ್ಟು ವಿದೇಶೀಯರು. ತೆರಿಗೆ ವಿನಾಯ್ತಿ ಹಾಗೂ ತಮ್ಮ ದೇಶಗಳಿಗಿಂತ ಅಧಿಕ ವೇತನ ದೊರಕುವ ಹಿನ್ನೆಲೆಯಲ್ಲಿ ಆಕರ್ಷಿತರಾದವರು.

ತೈಲ ಬೆಲೆ ಕುಸಿದ ಹಿನ್ನೆಲೆಯಲ್ಲಿ ದೇಶ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಕಳೆದ ವರ್ಷ ಘೋಷಿಸಿದ ಸುಧಾರಣಾ ಯೋಜನೆಯಲ್ಲಿ, ವಿದೇಶಿ ಉದ್ಯೋಗಿಗಳು ಹಣ ವರ್ಗಾವಣೆ ಮಾಡುವಾಗ ಅದಕ್ಕೆ ತೆರಿಗೆ ವಿಧಿಸುವ ಪ್ರಸ್ತಾವ ಕೂಡಾ ಒಳಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News