ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ

Update: 2017-01-23 09:50 GMT

 ಹೊಸದಿಲ್ಲಿ, ಜ.23: ಕಲ್ಲಿದ್ದಲು ಹಗರಣದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾರನ್ನು ತನಿಖೆಗೆ ಗುರಿಪಡಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಸಿಬಿಐಗೆ ಆದೇಶಿಸಿದೆ.

 ಸಿಬಿಐ ನಿರ್ದೇಶಕರಾಗಿ ರಂಜಿತ್ ಸಿನ್ಹಾ ಅಧಿಕಾರ ದುರುಪಯೋಪಡಿಸಿಕೊಂಡಿದ್ದಾರೆಂದು ಮೇಲ್ನೋಟಕ್ಕೆ ನಮಗೆ ಕಂಡುಬರುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ತನಿಖೆ ನಡೆಸಲೇಬೇಕಾಗಿದೆ ಎಂದು ಜಸ್ಟಿಸ್ ಎಂ.ಬಿ. ಲೋಕುರ್ ಅವರಿದ್ದ ವಿಶೇಷ ನ್ಯಾಯಪೀಠ ಆದೇಶಿಸಿದೆ.

ಈ ಪ್ರಕರಣದ ತನಿಖೆಗೆ ಸ್ವತಂತ್ರ ವಿಶೇಷ ತನಿಖಾ ತಂಡದ(ಸಿಟ್)ಅಗತ್ಯವಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ತನ್ನ ಮಾಜಿ ಬಾಸ್‌ನ ವಿರುದ್ಧ ನ್ಯಾಯಬದ್ಧ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಸಿನ್ಹಾ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ(ಸಿಟ್)ನ್ನು ರಚಿಸಬೇಕು. ತನಿಖೆಯ ವೇಳೆ ಕೇಂದ್ರ ಜಾಗೃತ ಆಯೋಗ(ಸಿವಿಸಿ)ವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ ಸುಪ್ರೀಂಕೋರ್ಟ್ ಆದೇಶಿಸಿತು.

ತನಿಖಾ ತಂಡದ ಸಂಯೋಜನೆಯ ಬಗ್ಗೆ ಸಲಹೆ ನೀಡಬೇಕು. ತನಿಖೆ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಬಗ್ಗೆ ಸರಿಯಾದ ಸಮಯವನ್ನು ತಿಳಿಸುವಂತೆಯೂ ತನಿಖಾ ತಂಡದಿಂದ ಕೇಳಬೇಕು ಎಂದು ಸುಪ್ರೀಂಕೋರ್ಟ್ ಸಿಬಿಐ ನಿರ್ದೇಶಕರಿಗೆ ತಿಳಿಸಿದೆ.

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಸಿನ್ಹಾ ಅವರು ಸಿಬಿಐ ಮುಖ್ಯಸ್ಥರಾಗಿದ್ದಾಗ ತನ್ನ ನಿವಾಸದಲ್ಲಿ ಕಲ್ಲಿದ್ದಲು ಹಗರಣದಲ್ಲಿ ಸಿಲುಕಿರುವ ಪ್ರಮುಖ ಆರೋಪಿಗಳನ್ನು ಭೇಟಿಯಾಗಿದ್ದರು ಎಂದು ತಿಳಿಸಿದೆ.

ಸಿನ್ಹಾ  ವಿರುದ್ಧ ಕೇಳಿಬಂದಿರುವ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ವರದಿ ಸಲ್ಲಿಸಲು ಈ ಮೊದಲೇ ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News