ದೇಶದ ಪ್ರಗತಿಯ ಬಗ್ಗೆ ಹೆಮ್ಮೆ ಪಡುವ ಕಾಲವಿದು: ಗಣರಾಜ್ಯೋತ್ಸವ ಸಮಾರಂಭದಲ್ಲಿ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್
ಬೆಂಗಳೂರು, ಜ.26: ‘‘ನಮ್ಮ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಈ ಸಮಸ್ಯೆಗಳಿಗೆ ಪರಿಹಾರಗಳ ಕೊರತೆಯಿಲ್ಲ’’ ಎಂದು ಬೆಂಗಳೂರು ಆರ್ಚ್ ಡಯಾಸಿಸ್ ಇದರ ಆರ್ಚ್ ಬಿಷಪ್ ಡಾ.ಬರ್ನಾರ್ಡ್ ಮೊರಾಸ್ ಹೇಳಿದ್ದಾರೆ.
ಇಂದಿಲ್ಲಿ ಆಯೋಜಿಸಲಾದ ದೇಶದ 68ನೆ ಗಣರಾಜ್ಯೋತ್ಸವ ಸಮಾರಂಭವನ್ನು ರಾಷ್ಟ್ರಧ್ವಜ ಅರಳಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
‘‘ಎಲ್ಲರೂ ಮೆಚ್ಚುವಂತಹ ದೇಶವಾದ ಭಾರತವು ತನ್ನ ಪ್ರಗತಿಯ ಬಗ್ಗೆ ಹೆಮ್ಮೆ ಪಡೆಬೇಕಿದೆ. ಇಲ್ಲಿನ ಜನ ಸಮುದಾಯವು ಶಾಂತಿ ಸೌಹಾರ್ದದಿಂದ ಬಾಳಬೇಕೆಂಬುದು ನನ್ನ ಕಳಕಳಿಯ ವಿನಂತಿ. ಈ ಮಹಾನ್ ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ’’ ಎಂದು ಅವರು ತಮ್ಮ ಗಣರಾಜ್ಯೋತ್ಸವ ಸಂದೇಶದಲ್ಲಿ ಹೇಳಿದರು.
ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆಯ ದೇಶವೊಂದರ ನಾಗರಿಕರು ನಾವೆಂದು ಎಲ್ಲರೂ ಹೆಮ್ಮೆ ಪಟ್ಟುಕೊಳ್ಳಬೇಕು. ದೇಶದ ಜವಾಬ್ದಾರಿಯುತ ನಾಗರಿಕರಾಗಿ ಮಾನವ ಹಕ್ಕುಗಳನ್ನು ಸಂರಕ್ಷಿಸಿ, ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಆರ್ಚ್ ಡಯಾಸಿಸ್ ನ ಹಿರಿಯ ಧರ್ಮಗುರು ಫಾ.ಎನ್.ಸಿ.ಜೋಸೆಫ್ ಹಾಗೂ ಪೊಲೀಸ್ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.