×
Ad

ಐಟಿ ದಾಳಿ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ

Update: 2017-01-28 19:45 IST

ಬೆಂಗಳೂರು, ಜ.28: ಬಿಜೆಪಿ ಆಡಳಿತವಿಲ್ಲದ ರಾಜ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿ ನೋಟು ಅಮಾನ್ಯ ನಿರ್ಧಾರವನ್ನು ವಿರೋಧಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಜನವೇದನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯದ ಬಳಿಕ ದೇಶದಲ್ಲಿ ಬಿಜೆಪಿ ಸರಕಾರವಿಲ್ಲದ ರಾಜ್ಯಗಳನ್ನು ಗುರುತಿಸಿ ಆದಾಯ ತೆರಿಗೆ ದಾಳಿ ಮಾಡಲಾಗುತ್ತಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಕೆಲವೇ ರಾಜ್ಯಗಳಲ್ಲಿ ಐಟಿ ದಾಳಿ ಮಾಡುತ್ತಿದೆ. ಮಧ್ಯಪ್ರದೇಶ, ಗುಜರಾತ್, ಪಂಜಾಬ್ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರ ಇಲ್ಲವೇ, ಇಲ್ಲಿ ಕಾಳ ಧನಿಕರಿಲ್ಲವೇ ಎಂದು ಪ್ರಶ್ನಿಸಿದರು.

 ನೋಟು ಅಮಾನ್ಯ ಕ್ರಮದ ಬಳಿಕ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯೇ, ಎಷ್ಟು ಕಾಳಧನಿಕರನ್ನು ಹಿಡಿದು ಜೈಲಿಗೆಟ್ಟಿದ್ದಾರೆ. ಕಾಳಧನಿಕರು, ಭ್ರಷ್ಟರು, ಉಗ್ರರನ್ನು ಸದೆ ಬಡಿಯುತ್ತೇವೆ ಎಂದು ಮೋದಿಯವರು ಹೇಳಿದ್ದು ಬರೀ ಮೋಸದ ಮಾತುಗಳು, ಜನರ ಕಣ್ಣಿಗೆ ಮಣ್ಣು ಎರಚೋ ಮಾತುಗಳು ಎಂದು ಕಿಡಿ ಕಾರಿದರು.

ಮೋದಿ ಭ್ರಮನಿರಶನ : ಪ್ರಧಾನಿ ನರೇಂದ್ರ ಮೋದಿ ಪ್ರಜಾತಂತ್ರದ ವಿರೋಧಿ. ಮುಂಜಾಗ್ರತೆ ಇಲ್ಲದ ನೋಟು ಅಮಾನ್ಯೀಕರಣದ ನಿರ್ಧಾರ ಸರ್ವಾಧಿಕಾರದ ಧೋರಣೆ. ಮೋದಿಯ ವೀರಾವೇಶದ ಮಾತುಗಳಿಗೆ ಮೊದಲು ಮಾಧ್ಯಮಗಳು ಬೆಂಬಲಿಸಿದವು. ಈಗ ಮಾಧ್ಯಮಗಳಿಗೂ ಮೋದಿಯವರ ತಂತ್ರಗಾರಿಕೆ ಅರ್ಥವಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಮೋದಿಯವರ ಆಡಳಿತ ನೋಡಿ ಜನರೂ ಭ್ರಮ ನಿರಸನರಾಗಿದ್ದಾರೆ ಎಂದು ಹೇಳಿದರು.

ಒಳ್ಳೆಯ ದಿನಗಳು ಬರುತ್ತವೆ ಎಂದು ಬ್ಯಾಂಕ್ ಮುಂದೆ, ಎಟಿಎಂ ಮುಂದೆ ಜನ ಗಂಟೇಗಟ್ಟಲೇ ಕಾಯಿಸುವುದು ಅಚ್ಚೇ ದಿನ್ ಅಲ್ಲ. ಸ್ವೀಸ್ ಬ್ಯಾಂಕಿನಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಜಮೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ವೀರಾವೇಶ ಮಾತುಗಳಿಂದ ಜನರನ್ನು ಮರುಳು ಮಾಡಿದರು. 15 ಲಕ್ಷ ಹೋಗಲಿ ಕೇವಲ 15 ಪೈಸೆ ಏನಾದರೂ ಜಮೆ ಆಯ್ತು. ನಿಮಗೆ ಏನಾದರೂ ಮಾನ ಮರ್ಯಾದೆ ಇದಿಯಾ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

 ಕಪ್ಪುಹಣ, ನಕಲಿ ನೋಟು, ಭ್ರಷ್ಟಾಚಾರ, ಭಯೋತ್ಪಾದನೆ ನಿಯಂತ್ರಿಸಲು ನೋಟು ಅಪವೌಲ್ಯೀಕರಣ ಮಾಡಲಾಗುವುದು ಎಂದು ಮೋದಿ ಹೇಳಿದಾಗ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ನೋಟು ಅಪವೌಲ್ಯೀಕರಣದಿಂದ ಜನಸಾಮಾನ್ಯರು ಬೀದಿಗೆ ಬಿದ್ದರು. ಈಗ ನೋಟು ರದ್ದತಿಯಿಂದ ಶೇ.86 ರಷ್ಟು ಗರಿಷ್ಠ ಮುಖಬೆಲೆಯ ನೋಟುಗಳು ವೌಲ್ಯಕಳೆದುಕೊಂಡಿವೆ. ನಮ್ಮ ದೇಹದ ಶೇ.86 ರಷ್ಟು ರಕ್ತ ಹೊರತೆಗೆದು, ಆಗಾಗ ಶೇ.5 ರಷ್ಟು ರಕ್ತ ದೇಹಕ್ಕೆ ಸೇರಿಸಿದರೆ ನಾವು ಬದುಕೋದೇ ಕಷ್ಟ. ಇಂತಹ ಸಂದಿಗ್ದ ಪರಿಸ್ಥಿತಿ ದೇಶದಲ್ಲಿದೆ ಎಂದು ಹೇಳಿದರು.

     ನಮ್ಮ ಸರಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದಿದೆ. ಇದುವರೆಗೂ ಒಂದೇ ಒಂದು ಭ್ರಷ್ಟಾಚಾರ, ಹಗರಣದ ಆರೋಪ ಕೇಳಿಬಂದಿಲ್ಲ. ಆದರೆ ಬೆಂಗಳೂರುನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಸಿದ್ದರಾಮಯ್ಯನವರ ಸರಕಾರ ದೇಶದ ಅತ್ಯಂತ ಕೆಟ್ಟ ಸರಕಾರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆರೋಪಿಸಿದ್ದರು. ಆ ಕಾರ್ಯಕ್ರಮದಲ್ಲಿ ಅಮಿತ್ ಷಾ ಪಕ್ಕದಲ್ಲೇ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಯಡಿಯೂರಪ್ಪ, ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದ ಈಶ್ವರಪ್ಪ, ಗಣಿ ಹಗರಣದ ರೆಡ್ಡಿ ಸಹೋದರರು, ಶ್ರೀರಾಮುಲು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇವರು ಯಾರು ಅಮಿತ್ ಷಾ ಕಣ್ಣಿಗೆ ಕಾಣಿಸಿಲ್ಲವಾ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

 ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆನಂದ್ ಶರ್ಮ ಮಾತನಾಡಿ, ನೋಟು ಅಮಾನ್ಯ ನಿರ್ಧಾರದಿಂದ ಜನರ ಬದುಕು ದುಸ್ತರವಾಗಿದೆ. ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗಿದೆ. ನಗದು ರಹಿತ ಆರ್ಥಿಕ ವ್ಯವಸ್ಥೆಯ ಹೆಸರಿನಲ್ಲಿ ಜನರನ್ನು ಲೂಟಿ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಟೀಕಿಸಿದ್ದಾರೆ.

  ಕೆಪಿಸಿಸಿ ರಾಜ್ಯಾಧ್ಯಕ್ಷ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ವಿಶ್ವದಲ್ಲೇ 3ನೆ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತ ಇತ್ತೀಚಿನ ನೋಟು ಅಮಾನ್ಯ ನಿರ್ಧಾರದಿಂದ ತತ್ತರಿಸಿ ಹೋಗಿದೆ. ನೋಟು ಅಮಾನ್ಯೀಕರಣದಿಂದ ದೇಶದ ಅರ್ಥಿಕ ಸ್ಥಿತಿ 70 ವರ್ಷಗಳ ಹಿಂದಿನ ಸ್ಥಿತಿಗೆ ಕುಸಿದಿದೆ ಎಂದು ಆರೋಪಿಸಿದರು.

 ಸಮಾವೇಶದಲಿ ಸಂಸದ ವೀರಪ್ಪಮೋಯ್ಲಿ , ಬಸವರಾಜ್ ಚೌಹಾಣ್, ಸಚಿವರಾದ ಕೆ.ಜೆ. ಜಾರ್ಜ್, ಕಾಗೋಡು ತಿಮ್ಮಪ್ಪ, ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್, ಟಿ.ಬಿ. ಜಯಚಂದ್ರ, ಯು.ಟಿ. ಖಾದರ್, ಮಾಜಿ ಸಚಿವರಾದ ರೆಹಮಾನ್ ಖಾನ್, ಸಿ.ಕೆ.ಜಾಫರ್ ಷರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News