ಟ್ರಂಪ್ ವಿರುದ್ಧ ಅಮೆರಿಕನ್ನರ ಪ್ರತಿಭಟನೆ ಬೆಂಬಲಿಸಿದ ಒಬಾಮ

Update: 2017-01-31 03:39 GMT

ವಾಷಿಂಗ್ಟನ್, ಜ.31: ಕೆಲ ಮುಸ್ಲಿಮ್ ದೇಶಗಳಿಂದ ಪ್ರವಾಸಿಗಳು ಹಾಗೂ ನಿರಾಶ್ರಿತರು ಅಮೆರಿಕ ಪ್ರವೇಶಿಸುವುದನ್ನು ನಿರ್ಬಂಧಿಸುವ ಟ್ರಂಪ್ ಸರ್ಕಾರದ ವಿವಾದಾತ್ಮಕ ಕ್ರಮದ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೆಂಬಲಿಸುವುದಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿದ್ದಾರೆ.

ಒಬಾಮ ವಕ್ತಾರ ಕೆವಿನ್ ಲೂಯಿಸ್, ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ ಎಲ್ಲೂ ನೇರವಾಗಿ ಒಬಾಮ ಹೆಸರಾಗಲೀ, ಅವರು ಟ್ರಂಪ್ ಆದೇಶವನ್ನು ಟೀಕಿಸಿದ್ದನ್ನಾಗಲೀ ಉಲ್ಲೇಖಿಸಿಲ್ಲ. ದೇಶಾದ್ಯಂತ ನಡೆಯುತ್ತಿರುವ ಚಟುವಟಿಕೆಗಳು ಒಬಾಮ ಅವರಿಗೆ ನೋವು ತಂದಿದೆ ಎಂದು ಲೂಯಿಸ್ ಹೇಳಿದ್ದಾರೆ. ಅಧ್ಯಕ್ಷರಾಗಿ ಒಬಾಮಾ ಮಾಡಿದ ಕೊನೆಯ ಭಾಷಣದಲ್ಲಿ, ದೇಶದ ಪ್ರತಿಯೊಬ್ಬ ನಾಗರಿಕ ಹಾಗೂ ಅಮೆರಿಕನ್ನರು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೇ ಪ್ರತಿದಿನವೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಯಬೇಕು ಎಂದು ಕರೆ ನೀಡಿದ್ದರು.

"ಅಮೆರಿಕದ ಮೌಲ್ಯಗಳಿಗೆ ಅಪಾಯ ಎದುರಾಗಿರುವ ಸಂದರ್ಭದಲ್ಲಿ ನಾಗರಿಕರು ಸಭೆ ಸೇರುವುದು, ಸಂಘಟನೆ ಹಾಗೂ ಅವರ ಧ್ವನಿಗಳು ಚುನಾಯಿತ ಪ್ರತಿನಿಧಿಗಳಿಗೆ ಕೇಳಬೇಕು ಎಂಬ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಬೇಕಿದೆ" ಎಂದು ಸೂಚಿಸಿದ್ದಾರೆ.

ಅಧಿಕಾರ ವರ್ಗಾಂತರ ಅವಧಿಯಲ್ಲಿ ಟ್ರಂಪ್ ವಿರುದ್ಧ ಯಾವ ಹೇಳಿಕೆಯನ್ನೂ ನೀಡದ ಒಬಾಮ, ಒಂಬತ್ತು ದಿನಗಳ ಬಳಿಕ, ಟ್ರಂಪ್ ಅವರ ವಿವಾದಾತ್ಮಕ ಆದೇಶಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಟ್ರಂಪ್ ವಿರುದ್ಧ ಹೇಳಿಕೆ ನೀಡಿದ್ದಾರೆ. "ಮೂಲಭೂತವಾಗಿ ಯಾವುದೇ ಧರ್ಮ ಅಥವಾ ನಂಬಿಕೆಯ ವಿರುದ್ಧ ತಾರತಮ್ಯ ಮಾಡುವುದನ್ನು ಒಬಾಮ ವಿರೋಧಿಸುತ್ತಾರೆ" ಎಂದು ಲೂಯಿಸ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News